ಇನ್ಫೋಸಿಸ್, ಹುಬ್ಬಳ್ಳಿ ಘಟಕಕ್ಕೆ ಆಗಮಿಸಿದ ಸುಮಾರು 250 ಸಾಫ್ಟ್ವೇರ್ ಸಿಬ್ಬಂದಿಗಳಿಗೆ ಗುಲಾಬಿ ಹೂವು ಮತ್ತು ಪ್ರಸಿದ್ಧ ಧಾರವಾಡ ಪೇಡ ಕೊಟ್ಟು ಸ್ಟಾರ್ಟ್ ಇನ್ಫೋಸಿಸ್ ಹುಬ್ಬಳ್ಳಿ ತಂಡದ ವತಿಯಿಂದ ಸ್ವಾಗತ ಕೋರಲಾಯಿತು.
ಇನ್ಫೋಸಿಸ್ ಸಂಸ್ಥೆ ಹುಬ್ಬಳ್ಳಿ ಘಟಕದಿಂದ ಕೆಲಸ ಮಾಡಲು ಆಸಕ್ತಿ ಹೊಂದಿದ ತನ್ನ ಸಿಬ್ಬಂದಿಗಳ ಜೊತೆ ಇವತ್ತು ದಿ. 15/07/2022 ಇಲ್ಲಿನ ಇನ್ಫೋಸಿಸ್ ಆವರಣದಲ್ಲಿ ಸಭೆಯನ್ನು ಕರೆದಿದ್ದರು.
ಸ್ಟಾರ್ಟ್ ಇನ್ಫೋಸಿಸ್ ಹುಬ್ಬಳ್ಳಿ ವೃತ್ತಿಪರರ ತಂಡ, ಇನ್ಫೋಸಿಸ್ ಕಂಪನಿಯ ಹುಬ್ಬಳ್ಳಿ ಘಟಕದಲ್ಲಿ ಕಾರ್ಯಾರಂಭ ಮಾಡಲು ನಡೆಸಿದ ಸತತ ಅಭಿಯಾನದ ಫಲಶ್ರುತಿಯಾಗಿ ಈ ಸಭೆ ಆಯೋಜಿಸಲಾಗಿತ್ತು.
ಸಿಹಿ ಹಂಚಿ ಸ್ವಾಗತಿಸುತ್ತಿದ್ದಾಗ ಎಲ್ಲ ಇನ್ಫೋಸಿಸ್ ಸಿಬ್ಬಂದಿಗಳು ಸ್ಟಾರ್ಟ್-ಇನ್ಫೋಸಿಸ್-ಹುಬ್ಬಳ್ಳಿ ತಂಡಕ್ಕೆ ಧನ್ಯವಾದಗಳು ತಿಳಿಸಿ ಇನ್ಫೋಸಿಸ್, ಹುಬ್ಬಳ್ಳಿ ಘಟಕ ಆರಂಭವಾಗಲು ಕಾತುರದಿಂದ ಕಾಯುತ್ತಿದ್ದೇವೆ ಎಂದು ಅಭಿಪ್ರಾಯಪಟ್ಟರು.
ಸಭೆಗೆ ಬಂದಂತಹ ಸಿಬ್ಬಂದಿಗಳಲ್ಲಿ, ಹುಬ್ಬಳ್ಳಿ-ಧಾರವಾಡದ ಸ್ಥಳೀಯ ಇಂಜಿನೀರಿಂಗ್ ಮತ್ತು ಸ್ನಾತಕ ಕಾಲೇಜಿನಿಂದ ಡಿಗ್ರಿ ಪಡೆದಿದ್ದ ನೂರಾರು ಯುವಕ-ಯುವತಿಯರು ಪಾಲ್ಗೊಂಡಿದ್ದರು.
ಸುತ್ತಮುತ್ತಲಿನ ಪಟ್ಟಣಗಳಾದಂತಹ ಹಾವೇರಿ, ಗದಗ, ಹೊಸಪೇಟೆ, ಶಿರಸಿ, ಕಾರವಾರ, ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟೆಯಿಂದ ಸಾಫ್ಟ್ವೇರ್ ಇಂಜಿನೀಯರರು ಭಾಗವಹಿಸಿದರು.
ಇದೇ ಸಂದರ್ಭದಲ್ಲಿ ಸ್ಟಾರ್ಟ್ ಇನ್ಫೋಸಿಸ್ ಹುಬ್ಬಳ್ಳಿ ತಂಡದ ವತಿಯಿಂದ, ಹುಬ್ಬಳ್ಳಿ ಘಟಕಕ್ಕೆ ಶೀಘ್ರ ಚಾಲನೆ ನೀಡಲು ಕೋರಿ ಇನ್ಫೋಸಿಸ್ ಲಿಮಿಟೆಡ್ ನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ನಂದನ ನಿಲೇಕಣಿ ಅವರಿಗೆ ಇಮೇಲ್ ಮೂಲಕ ಪತ್ರ ರವಾನಿಸಲಾಗಿದೆ.