ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಲ್ಲಿ ಒಂದು ಲಕ್ಷ ವಿದ್ಯಾರ್ಥಿಗಳಾದರೂ ಅಧ್ಯಯನ ಮಾಡುವಂತಾಗಬೇಕು

ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಕ್ಯಾಂಪಸ್‍ನಲ್ಲಿ ಕನಿಷ್ಠಪಕ್ಷ ಒಂದು ಲಕ್ಷ ವಿದ್ಯಾರ್ಥಿಗಳಾದರೂ ಅಧ್ಯಯನ ಮಾಡುವಂತಾಗಬೇಕು. ಇದಕ್ಕೆ ಸರಕಾರವು ಅಗತ್ಯ ಉಪಕ್ರಮಗಳನ್ನು ರೂಪಿಸಲಿದೆ.

ಜತೆಗೆ ಕಾಲೇಜುಗಳಲ್ಲಿರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಉನ್ನತ ಶಿಕ್ಷಣ, ಐಟಿ, ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ, ವಿದ್ಯುನ್ಮಾನ ಮತ್ತು ಕೌಶಲ್ಯಾಭಿವೃದ್ಧಿ ಜೀವನೋಪಾಯ ಹಾಗೂ ಉದ್ಯಮಶೀಲತೆ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ತಿಳಿಸಿದರು.

ಕರ್ನಾಟಕ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಸಭಾಭವನದಲ್ಲಿಂದು ವಿಶ್ವವಿದ್ಯಾಲಯದ ಅಧ್ಯಾಪಕರು ಮತ್ತು ಶಿಕ್ಷಕೇತರ ಸಿಬ್ಬಂದಿ ಜೊತೆಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನೆನಪಿನಲ್ಲಿ ಸುಶಾಸನ ಮಾಸ ಆಚರಿಸಲಾಗುತ್ತಿದ್ದು, ತಮ್ಮ ವ್ಯಾಪ್ತಿಯ ಎಲ್ಲ ಇಲಾಖೆಗಳಲ್ಲಿ ಅನೇಕ ಸುಧಾರಣೆಗಳನ್ನು ತರಲಾಗುವುದು.

ಈ ಆಚರಣೆಯ ಭಾಗವಾಗಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿಂದು ಎಲ್ಲ ವಿಭಾಗಗಳು ಗುಣಮಟ್ಟದ ಶಿಕ್ಷಣ, ಅಧ್ಯಯನ ಮತ್ತು ಕೌಶಲ್ಯಾಭಿವೃದ್ಧಿಯನ್ನು ಸುಧಾರಿಸುವಂತೆ ಅವರು ಕರೆ ನೀಡಿದರು.

ಪ್ರಥಮ ದರ್ಜೆ ಕಾಲೇಜುಗಳಿಗೆ ಆರ್ಥಿಕ ಸ್ವಾಯತ್ತತೆ ಕೊಡಲಾಗಿದೆ. ಇದರ ಜತೆಗೆ ಕೌಶಲ್ಯಗಳನ್ನು ಕಲಿಸಲು ಸುಶಾಸನ ಮಾಸಾಚರಣೆಯ ಅಂಗವಾಗಿ ಗುರುವಾರದಿಂದ ಸ್ಕಿಲ್ ಪೋರ್ಟಲ್ ಗೆ ಚಾಲನೆ ನೀಡಲಾಗುತ್ತಿದೆ.

ಇದನ್ನು ವಿದ್ಯಾರ್ಥಿ ಸಮುದಾಯವು ಸದ್ಬಳಕೆ ಮಾಡಿಕೊಳ್ಳಬೇಕು. ಕರ್ನಾಟಕದಲ್ಲಿ ಶೇಕಡ 200ರಷ್ಟು ಉದ್ಯೋಗಗಳು ಸೃಷ್ಟಿಯಾಗುತ್ತಿವೆ ಎಂದು ಅವರು ವಿವರಿಸಿದರು.

ರಾಜ್ಯದಲ್ಲಿ ಉನ್ನತ ಶಿಕ್ಷಣ, ಅಧ್ಯಯನ ವಲಯದಲ್ಲಿ ಸಂಪೂರ್ಣ ಡಿಜಿಟಲೀಕರಣ ಯಶಸ್ವಿಯಾಗಿ ನಡೆಯುತ್ತಿದೆ. ಯಾವ ಖಾಸಗಿ ವಿ.ವಿ.ಗಳಿಗೂ ಈ ಸಾಧನೆ ಸಾಧ್ಯವಾಗಿಲ್ಲ.

ಇಂದು ಪ್ರವೇಶಾತಿಯಿಂದ ಹಿಡಿದು ಅಂಕಪಟ್ಟಿ ವಿತರಣೆಯವರೆಗೆ ಎಲ್ಲವೂ ಆಧುನಿಕ ತಂತ್ರಜ್ಞಾನದ ಸಹಾಯದಿಂದ ನಡೆಯುತ್ತಿದೆ. ಇಂತಹ ಸಾಧನೆ ಬೇರೆ ಯಾವ ರಾಜ್ಯದಲ್ಲೂ ಸಾಧ್ಯವಾಗಿಲ್ಲ ಎಂದು ಅವರು ತಿಳಿಸಿದರು.

ರಾಜ್ಯವು ಐಟಿ, ಬಿಟಿ, ಸೆಮಿಕಂಡಕ್ಟರ್, ಚಿಪ್ ತಯಾರಿಕೆ ಇತ್ಯಾದಿಗಳಲ್ಲಿ ಮೊದಲ ಸ್ಥಾನದಲ್ಲಿದೆ. ಹಾಗೆಯೇ ನೇರ ಮತ್ತು ಪರೋಕ್ಷ ತೆರಿಗೆ ಸಂಗ್ರಹದಲ್ಲೂ ನಾವು ಎರಡನೇ ಸ್ಥಾನದಲ್ಲಿವೆ.

ವಿ.ವಿ.ಗಳು ಪಾರದರ್ಶಕತೆ ಮತ್ತು ಉತ್ತರದಾಯಿತ್ವದ ಸಂಸ್ಕೃತಿಯನ್ನು ರೂಢಿಸಿಕೊಳ್ಳಬೇಕು. ಇದಕ್ಕಾಗಿಯೇ ಉನ್ನತ ಶಿಕ್ಷಣ ಇಲಾಖೆಯಲ್ಲಿ ಇ-ಆಫೀಸ್ ವ್ಯವಸ್ಥೆಯನ್ನು ಕಡ್ಡಾಯಗೊಳಿಸಲಾಗಿದೆ ಎಂದು ಸಚಿವರು ನುಡಿದರು.

ಆಡಳಿತದಲ್ಲಿ ಶೈಕ್ಷಣಿಕವಾಗಿ ಎಲ್ಲ ಕ್ಷೇತ್ರಗಳಲ್ಲಿ ಏನೆಲ್ಲಾ ಸುಧಾರಣೆಗಳನ್ನು ತರಲು ಸಾಧ್ಯವಿದೆಯೋ ಎಲ್ಲ ಸುಧಾರಣೆಗಳನ್ನು ತರುವ ನಿಟ್ಟಿನಲ್ಲಿ ಎಲ್ಲ ರೀತಿಯ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಲಾಗುವುದು.

ಸುಶಾಸನದಲ್ಲಿ ಎಲ್ಲರೂ ಒಂದು ತಂಡವಾಗಿ ಭಾಗವಹಿಸಿ ಸಹಕರಿಸಬೇಕು. ತಮ್ಮ ಸಹಕಾರ ಮುಖ್ಯವಾಗಿದೆ ಎಂದರು.

ಶಿಕ್ಷಣ, ಅಧ್ಯಯನ ಗುಣಮಟ್ಟ ಪರಿಣಾಮಕಾರಿಯಾಗಿ ಸದೃಢಗೊಳಿಸಲು ಹೊಸ ಹೊಸ ಯೋಜನೆಗಳನ್ನು ಈ ನಿಟ್ಟಿನಲ್ಲಿ ತರಲಾಗುವುದು. ಉನ್ನತ ಶಿಕ್ಷಣದಲ್ಲಿ ಸಮಗ್ರ ಬದಲಾವಣೆ ತರಬಲ್ಲ ಶಿಕ್ಷಣ ನೀತಿ ಮಸೂದೆಯನ್ನು ಇದೇ ಅಧಿವೇಶನದಲ್ಲಿ ತರಲಾಗುವುದೆಂದು ತಿಳಿಸಿದರು.

 21ನೇ ಶತಮಾನ ಜ್ಞಾನದ ಶತಮಾನವಾಗಿದ್ದು, ಸಮಾಜದ ಕೊನೆಯ ವ್ಯಕ್ತಿಯು ಮೇಲಕ್ಕೆ ಬರುವ ನಿಟ್ಟಿನಲ್ಲಿ ಪ್ರಯತ್ನ, ಕೌಶಲ್ಯ, ಪ್ರತಿಭೆಯನ್ನು ಹೆಚ್ಚಿಸಿಕೊಳ್ಳಲು ಎಲ್ಲ ರೀತಿಯ ಕಾರ್ಯಕ್ರಮಗಳನ್ನು ಸರ್ಕಾರ ಅನುಷ್ಠಾನಗೊಳಿಸುತ್ತಿದೆ.

ಎಲ್ಲ ಸಮಸ್ಯೆಗೆ ಶಿಕ್ಷಣವೊಂದೇ ಪರಿಹಾರ. ಶಿಕ್ಷಣವನ್ನು ಬಲವಾಗಿ ನಂಬಬೇಕು ಎಂದು ಹೇಳಿದರು.

 ಕರ್ನಾಟಕ ವಿಶ್ವವಿದ್ಯಾಲಯವು ಪರಮ ವೈಭವದ ಪವಿಸ್ರ ಸ್ಥಳ. ನಿಜವಾದ ಸುಧಾರಣೆ ಅಭಿವೃದ್ಧಿಗೆ ಇದೊಂದು ಅಮೃತ ಕಾಲ. ಇಡೀ ವಿಶ್ವವ್ಯಾಪ್ತಿಯಲ್ಲಿ ಭಾರತಕ್ಕೆ ಎಲ್ಲ ರೀತಿಯ ಅವಕಾಶ ದೊರೆಯುತ್ತಿದೆ.

ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಬೆರಳಿನ ತುದಿಯಲ್ಲಿಯೇ ಮಾಹಿತಿ ಹಾಗೂ ಅವಕಾಶಗಳು ದೊರೆಯುವಂತೆ ಮಾಡಲಾಗುತ್ತಿದೆ. ಎಲ್ಲ ವಿಶ್ವವಿದ್ಯಾಲಯಗಳು ಡಿಜಿಟಲೀಕರಣಗೊಂಡಿವೆ.

ವಿಜ್ಞಾನ, ತಂತ್ರಜ್ಞಾನ, ಅಧ್ಯಯನ, ಸಂಶೋಧನೆಯಲ್ಲಿ ಕರ್ನಾಟಕ ನಂಬರ್ ಒನ್ ಆಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯು ಇಡೀ ಭಾರತದಲ್ಲಿಯೇ ಯಶಸ್ವಿಯಾಗಿ, ಅದ್ಭುತವಾಗಿ, ಪರಿಣಾಮಕಾರಿಯಾದಂತಹ ನೀತಿಯಾಗಿದೆ.

ವಿಶ್ವವಿದ್ಯಾಲಯಗಳು ಬದುಕು, ಭವಿಷ್ಯ ನಿರ್ಮಾಣದ ದೇವಸ್ಥಾನವಾಗಿದೆ. ಇಡೀ ಸಮಾಜದ ನಂಬಿಕೆ ವಿಶ್ವವಿದ್ಯಾಲಯಗಳ ಮೇಲಿದೆ.

ಈ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳು ಪ್ರಾಮಾಣಿಕವಾಗಿ ಶ್ರದ್ಧೆ, ಭಕ್ತಿಯಿಂದ ಗುಣಮಟ್ಟದ ಹಾಗೂ ಪರಿಣಾಮಕಾರಿಯಾದ ಶಿಕ್ಷಣ ನೀಡುವಲ್ಲಿ ಬದ್ಧರಾಗಬೇಕು. ಸರ್ಕಾರವು ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧವಾಗಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಕುಲಪತಿ ಡಾ|| ಕೆ.ಬಿ. ಗುಡಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉನ್ನತ ಶಿಕ್ಷಣ ನಿರ್ದೇಶಕ ಡಾ.ಎಸ್.ಎಂ. ಶಿವಪ್ರಸಾದ, ಸಿಂಡಿಕೇಟ್ ಸದಸ್ಯರಾದ ಡಾ. ಕಲ್ಮೇಶ್ ಹಾವೇರಿಪೇಟ್, ಡಾ. ಎಸ್.ಸಿ. ಚಿಕ್ಕನಗೌಡ್ರ ಹಾಜರಿದ್ದರು.

ಡಾ. ಸುಧೀಂದ್ರ ದೇಶಪಾಂಡೆ, ಜಯಪ್ರಕಾಶ ಬಾದಾಮಿ, ಪ್ರಕಾಶ ರಾಯಕರ್, ಸಂದೀಪ ಬೂದಿಹಾಳ, ಡಾ. ಹಂಸವೇಣಿ, ಹಣಕಾಸು ಅಧಿಕಾರಿ ಡಾ.ಸುರೇಶ್, ಕುಲಸಚಿವ ಡಾ. ಕೃಷ್ಣಮೂರ್ತಿ, ಶಿಕ್ಷಣ ತಜ್ಞ ಅರುಣ ಶಹಾಪೂರ ಉಪಸ್ಥಿತರಿದ್ದರು.

 ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥ ಡಾ. ಮಟ್ಟಿಹಾಳ ಕಾರ್ಯಕ್ರಮ ನಿರೂಪಿಸಿದರು.

Share this article!

Leave a Reply

Your email address will not be published. Required fields are marked *

error: Content is protected !!