ಧಾರವಾಡದಲ್ಲಿ ಅಂತರಾಷ್ಟ್ರೀಯ ವಲಸೆ ಕೇಂದ್ರದ ವಿಭಾಗೀಯ ಕಚೇರಿ ಆರಂಭ

ಧಾರವಾಡ ತಾಲೂಕಿನ ರಾಯಾಪುರದಲ್ಲಿ ಅಂತರಾಷ್ಟ್ರೀಯ ವಲಸೆ ಕೇಂದ್ರದ ವಿಭಾಗೀಯ ಕಚೇರಿಯನ್ನು ರಾಜ್ಯ ಸರಕಾರ ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿ ಆರಂಭಿಸಿದೆ.

ಈ ಕಚೇರಿಯು ಧಾರವಾಡ, ಗದಗ, ಹಾವೇರಿ, ವಿಜಯಪುರ, ಬಾಗಲಕೋಟ, ಬೆಳಗಾವಿ, ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿಯನ್ನು‌ ಹೊಂದಿದೆ.

ಹೊರ ದೇಶಗಳಲ್ಲಿ ಉದ್ಯೋಗ ಮಾಡಲು ಆಸಕ್ತಿ ಇರುವ ಸುಮಾರು 194 ಜನರು ಈ ಕೇಂದ್ರ ದಲ್ಲಿ ಈಗಾಗಲೇ ನೋಂದಣಿ ಆಗಿದ್ದು, ಕೃಷಿ, ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಆಸಕ್ತ 20 ಜನರಿಗೆ ಜಪಾನ್ ಮತ್ತು ರೊಮೇನಿಯಾ ದೇಶಗಳ ಉದ್ಯಮಿಗಳಿಂದ ಸಂದರ್ಶನಕ್ಕೆ ಆಯ್ಕೆ ಆಗಿದ್ದಾರೆ.

ಧಾರವಾಡದಲ್ಲಿ ಅಂತರಾಷ್ಟ್ರೀಯ ವಲಸೆ ಕೇಂದ್ರದ ವಿಭಾಗೀಯ ಕಚೇರಿ ಆರಂಭ
ಸಾಂದರ್ಭಿಕ ಚಿತ್ರ: ಅಂತರಾಷ್ಟ್ರೀಯ ವಲಸೆ ಕೇಂದ್ರ, ಧಾರವಾಡ

ಜಿಲ್ಲಾ ಕೌಶಲ್ಯಾಭಿವೃದ್ಧಿ ಘಟಕ ಹಾಗೂ ಇತರ ಇಲಾಖೆಗಳಿಂದ ವಿವಿಧ ವಿಷಯಗಳಲ್ಲಿ ಕಳೆದ ಎರಡು ವರ್ಷದಲ್ಲಿ 20,181 ಜನರಿಗೆ ಕೌಲ್ಯಾಭಿವೃದ್ದಿ ತರಬೇತಿಯನ್ನು ನೀಡಲಾಗಿದ್ದು, ಯುವ ಸಮೂಹದಿಂದ ಉತ್ತಮ ಸ್ಪಂದನೆ ದೊರೆತಿದೆ.

ಉದ್ಯೋಗಾಕಾಂಕ್ಷಿಗಳ ನೊಂದಾಯಿತ ಸಂಖ್ಯೆ ಹೆಚ್ಚಿದೆ ಎಂದು ಜಿಲ್ಲಾ ಕೌಶಲ್ಯ ಸಮಿತಿ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಹೇಳಿದರು.

ಅವರು ನಿನ್ನೆ ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಕೌಶಲ್ಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ, ಅವರು ಮಾತನಾಡಿದರು.

Hubbballi Infra Google News

ಅಗತ್ಯವಿರುವ ಜನರಿಗೆ ಕೌಶಲ್ಯ ತರಬೇತಿ, ಉದ್ಯೋಗ ನೀಡಲು ವಿವಿಧ ಇಲಾಖೆಗಳ ಸಮನ್ವಯದಲ್ಲಿ ಉಪಸಮಿತಿಗಳನ್ನು ರಚಿಸಲಾಗಿದೆ. ಎಲ್ಲ ಉಪಸಮಿತಿಗಳಿಗೆ ಮುಖ್ಯಸ್ಥರಾಗಿರುವ ಅಧಿಕಾರಿಗಳು ಆದ್ಯತೆ ನೀಡಿ, ಸಮಿತಿ ಕಾರ್ಯಗಳನ್ನು ನಿಗಧಿತ ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು.

ಈ ಕುರಿತ ಕ್ರಿಯಾಯೋಜನೆ, ವರದಿಗಳನ್ನು ಜಿಲ್ಲಾ ಕೌಶಲ್ಯ ಸಮಿತಿಗೆ ಎರಡು ವಾರದಲ್ಲಿ ಸಲ್ಲಿಸಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು.

ಸರಕಾರದ ಮುಖ್ಯಮಂತ್ರಿ ಕೌಶಲ್ಯಾಭಿವೃದ್ಧಿ ಯೋಜನೆಯಡಿ 5,085 ಮತ್ತು ಪ್ರಧಾನಮಂತ್ರಿ ಕೌಶಲ್ಯಾಭಿವೃದ್ಧಿ ಯೋಜನೆಯಡಿ 654, ಆರೋಗ್ಯ ಕ್ಷೇತ್ರದಲ್ಲಿ 270 ಸೇರಿ 6009 ಜನರಿಗೆ ತರಬೇತಿ ನೀಡಲಾಗುತ್ತಿದೆ.

ಕೈಮಗ್ಗ ಜವಳಿ, ಎಟಿಡಿಸಿ, ಜಿಟಿಟಿಸಿ, ಲಿಡಕರ್, ಮಹಿಳಾ ಮಕ್ಕಳ ಇಲಾಖೆ, ರುಡಸೆಟ್, ಸಿಡಾಕ್ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಡಢ-ನಲ್ಮ್ ಯೋಜನೆಯಡಿ 14,172 ಜನರಿಗೆ ಕೌಶಲ್ಯ ಅಭಿವೃದ್ಧಿಗಾಗಿ ಜಿಲ್ಲೆಯ ಒಟ್ಟು 20,181 ಜನರಿಗೆ 39 ವಿಷಯಗಳಲ್ಲಿ ಕೌಶಲ್ಯ ತರಬೇತಿಯನ್ನು ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ರಾಜ್ಯ ಸರಕಾರದಿಂದ 2018 ರಲ್ಲಿ ಆರಂಭಿಸಿರುವ kaushalkar.com ವೆಬ್ ಸೈಟ್ ಮೂಲಕ ಇಲ್ಲಿಯವರೆಗೆ ಜಿಲ್ಲೆಯ 80,097 ಒಟ್ಟು ಜನ ವಿವಿಧ ತರಬೇತಿಗಳಿಗಾಗಿ ತಮ್ಮ ಹೆಸರು ನೋಂದಾಯಿಸಿದ್ದಾರೆ.

ಇಲ್ಲಿಯವರೆಗೆ ಜಿಲ್ಲೆಯಲ್ಲಿ ಕೌಶಲ್ಯ ಅಭಿವೃದ್ಧಿ ಇಲಾಖೆಯಿಂದ ನಾಲ್ಕು ಉದ್ಯೋಗ ಮೇಳ ಆಯೋಜಿಸಲಾಗಿದ್ದು, 412 ಜನರಿಗೆ ಉದ್ಯೋಗ ಕಲ್ಪಿಸಲಾಗಿದೆ.

ತರಬೇತಿ ಪಡೆದ ಶೇ.60ರಷ್ಟು ಯುವಕರು ಖಾಸಗಿ ಕೈಗಾರಿಕೆ, ಕಂಪನಿಗಳಲ್ಲಿ ಉದ್ಯೋಗ ಪಡೆದಿದ್ದಾರೆ ಎಂದು ತರಬೇತಿ ನೀಡಿದ ಸಂಸ್ಥೆಗಳು ವರದಿ ನೀಡಿವೆ. ಸಂಬಂದಿಸಿದ ಅಧಿಕಾರಿಗಳು ಕ್ಷೇತ್ರ ಭೇಟಿ ನೀಡಿ, ಮಾರ್ಗದರ್ಶನ ನೀಡುತ್ತಿದ್ದಾರೆ ಎಂದು ಅವರು ಹೇಳಿದರು.

ಮುಂದಿನ ದಿನಗಳಲ್ಲಿ ಇನ್ನು ಹೆಚ್ಚು ಜನರಿಗೆ ಅಂತರಾಷ್ಟ್ರೀಯ ವಲಸೆ ಕೇಂದ್ರದಿಂದ ಹೊರ ದೇಶಗಳಲ್ಲಿ ಉದ್ಯೋಗ ಕಲ್ಪಿಸಲು ಜಿಲ್ಲಾ ಕೌಶಲ್ಯ ಸಮಿತಿ ವಿಶೇಷ ಕ್ರಿಯಾ ಯೋಜನೆ ರೂಪಿಸಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.

ಕೈಗಾರಿಕಾ ಸಂಪರ್ಕ ಕೋಶದಿಂದ ವಿವಿಧ ಕೈಗಾರಿಕೆಗಳಲ್ಲಿ ಯುವಕರಿಗೆ ತರಬೇತಿ ಅಥವಾ ಈಗಾಗಲೇ ಉದ್ಯೋಗ ನಿರತರ ಕೌಶಲ್ಯ ಉನ್ನತಿಕರಣಕ್ಕೆ ಅಗತ್ಯ ತರಬೇತಿ ನೀಡಲು 650 ಜನರ ಗುರಿ ನೀಡಲಾಗಿದ್ದು, ಈಗಾಗಲೇ 490 ಜನರನ್ನು ಗುರುತಿಸಿ, ಅಗತ್ಯ ತರಬೇತಿಗೆ ಕ್ರಮಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಕೌಶಲ್ಯ ಅಭಿವೃದ್ಧಿ ಇಲಾಖೆಯಿಂದ ಸ್ವಯಂಉದ್ಯೋಗಕ್ಕೆ ಹೆಚ್ಚು ಒತ್ತು ನೀಡಬೇಕು. ಪಿಯು ಮತ್ತು ಡಿಗ್ರಿ ಕಾಲೇಜುಗಳಲ್ಲಿ ಉದ್ಯೋಗ ಪರಿಚಯ ಕಾರ್ಯಕ್ರಮಗಳನ್ಬು ಆಯೋಜಿಸಬೇಕು.

ಹುಬ್ಬಳ್ಳಿ-ಧಾರವಾಡ ಮತ್ತು ಧಾರವಾಡ ಸುತ್ತಲಿನ ಜಿಲ್ಲೆಗಳಿಗೆ ಹೊಂದುವ, ಅಗತ್ಯವಿರುವ ಉದ್ಯೋಗಗಳನ್ನು ಕೇಂದ್ರೀಕರಿಸಿ, ತರಬೇತಿ ಮಾದರಿಗಳನ್ನು ತಯಾರಿಸಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಗ್ರಾಮ ಪಂಚಾಯತ್ ಮತ್ತು ನಗರ ಸ್ಥಳೀಯ ಸಂಸ್ಥೆಗಳು ತರಬೇತಿಗೆ ಆಯ್ಕೆ ಮಾಡುವಾಗ ಅರ್ಹರಿಗೆ ಆದ್ಯತೆ ನೀಡಬೇಕು ಮತ್ತು ಆಯ್ಕೆ ಮಾಡಿದ ಅಭ್ಯರ್ಥಿಗಳು ಪಡೆಯುವ ತರಬೇತಿಯನ್ನು ನಿರಂತರ ನಿಗಾವಹಿಸಿ, ಪರಿಶೀಲಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

Share this article!

Leave a Reply

Your email address will not be published. Required fields are marked *

error: Content is protected !!