ಧಾರವಾಡದಲ್ಲಿ ಜನವರಿ 12 ರಿಂದ ರಾಷ್ಟ್ರೀಯ ಯುವಜನೋತ್ಸವ

ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ಜನವರಿ 12 ರಿಂದ 16 ರವರೆಗೆ ಧಾರವಾಡಹುಬ್ಬಳ್ಳಿ ಮಹಾನಗರದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಂಯುಕ್ತವಾಗಿ ರಾಷ್ಟ್ರೀಯ ಯುವಜನೋತ್ಸವ ಆಯೋಜಿಸಿದ್ದಾರೆ.

ಭಾರತದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರು ಯುವಜನೋತ್ಸವವನ್ನು ಉದ್ಘಾಟಿಸಲಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ ಅವರು ಹೇಳಿದರು.

ಅವರು ನಿನ್ನೆ ಮಧ್ಯಾಹ್ನ ಯುವಜನೋತ್ಸವ ಆಯೋಜನೆಗಾಗಿ ಧಾರವಾಡ ಮಹಾನಗರದ  ವಿವಿಧ ಸ್ಥಳಗಳಿಗೆ ಭೇಟಿ ನೀಡಿದ ನಂತರ ಕವಿವಿ ಸಿಂಡಿಕೇಟ್ ಸಭಾಂಗಣದಲ್ಲಿ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ, ಮಾತನಾಡಿದರು.

ಜನವರಿ 12 ರಿಂದ 16 ರವರೆಗೆ ನಡೆಯಲಿರುವ ರಾಷ್ಟ್ರೀಯ ಯುವಜನೋತ್ಸವದಲ್ಲಿ ವಿವಿಧ ರಾಜ್ಯಗಳ ಸುಮಾರು 7,500 ಕ್ಕೂ ಹೆಚ್ಚು ಜನ ಪ್ರತಿನಿಧಿಗಳು, ಆಯಾ ರಾಜ್ಯಗಳ ಸಾಂಸ್ಕೃತಿಕ ರಾಯಭಾರಿಗಳು ಭಾಗವಹಿಸಿ, ತಮ್ಮ ಕಲೆ, ಸಂಸ್ಕೃತಿ ಗಳನ್ನು ಬಿಂಬಿಸಲಿದ್ದಾರೆ.

ರಾಷ್ಟ್ರೀಯ ಯುವಜನೋತ್ಸವದಲ್ಲಿ ಆಹಾರ ಮೇಳ ಆಯೋಜಿಸಿದ್ದು, ವಿವಿಧ ರಾಜ್ಯಗಳ ಆಹಾರ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳವೂ ನಡೆಯಲಿದೆ.

ರಾಷ್ಟ್ರೀಯ ಯುವಜನೋತ್ಸವನ್ನು ಯಶಸ್ವಿಯಾಗಿ ಸಂಘಟಿಸಲು ಮತ್ತು ರಾಷ್ಟ್ರಕ್ಕೆ ಧಾರವಾಡದ ಕಲೆ, ಸಂಸ್ಕೃತಿ, ಸಾಹಿತ್ಯ ಮತ್ತು ಆಹಾರ ಉತ್ಪನ್ನಗಳನ್ನು ಪರಿಚಯಿಸಲು ಜಿಲ್ಲಾಡಳಿತ ಸಿದ್ದತೆ ಆರಂಭಿಸಿದೆ.

ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆ, ಕಾರ್ಯಕ್ರಮ, ಚಿತ್ರಕಲೆ, ಸಂಗೀತ, ನೃತ್ಯ, ಹಾಡು, ಯುವ ಸಮಾವೇಶ ಮುಂತಾದವುಗಳ ಆಯೋಜನೆಗೆ ಧಾರವಾಡ ನಗರದಲ್ಲಿ ವಿವಿಧ ಸ್ಥಳಗಳನ್ನು  ಜಿಲ್ಲಾಡಳಿತ ಗುರುತಿಸಿದೆ ಎಂದು ಸಚಿವರು ತಿಳಿಸಿದರು.

ಪ್ರತಿ ದಿನ ಸಂಜೆ 6 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ಕೆಸಿಡಿ ಮುಖ್ಯ ಕಟ್ಟಡದ ಮುಂಭಾಗದಲ್ಲಿ ಯುವಜನೋತ್ಸವದ ನಿಮಿತ್ಯ ವಿವಿಧ ರೀತಿಯ ಸಾಂಸ್ಕೃತಿ, ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ.

ಹೊರ ರಾಜ್ಯಗಳಿಂದ ಆಗಮಿಸುವ ಸ್ಫರ್ಧಾಳುಗಳಿಗೆ ಕರ್ನಾಟಕ ವಿಶ್ವವಿದ್ಯಾಲಯ, ಕೃಷಿ ವಿಶ್ವವಿದ್ಯಾಲಯ ಮತ್ತು ವಿವಿಧ ವಸತಿನಿಲಯಗಳನ್ನು ವಸತಿಗಾಗಿ ಗುರುತಿಸಲಾಗಿದೆ. ಕೆಎಸ್ಆರ್ ಟಿಸಿ, ಜಿಲ್ಲಾಡಳಿತದಿಂದ ಸಮರ್ಪಕ ಸಾರಿಗೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಸಚಿವರು ಹೇಳಿದರು.

 ರಾಜ್ಯ ಸರಕಾರದ ಮಂತ್ರಿಗಳ, ಹಿರಿಯ ಅಧಿಕಾರಿಗಳ ಮತ್ತು ಜಿಲ್ಲೆಯ ಜನಪ್ರತಿನಿಧಿಗಳ ಸಮನ್ವಯ ಮತ್ತು ಮಾರ್ಗದರ್ಶನದಲ್ಲಿ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರ ನೇತೃತ್ವದಲ್ಲಿ ಜಿಲ್ಲೆಯ ಹಿರಿಯ ಅಧಿಕಾರಿಗಳ ವಿವಿಧ ಸಮಿತಿಗಳನ್ನು ರಚಿಸಿ ಕಾರ್ಯ ಹಂಚಿಕೆ ಮಾಡಲಾಗಿದೆ.

ವಸತಿ, ಸಾರಿಗೆ,ವೇದಿಕೆ, ಸಾಂಸ್ಕೃತಿಕ, ಸ್ವಾಗತ, ಆಹಾರ ಹೀಗೆ ಅಗತ್ಯ ಸಮಿತಿಗಳನ್ನು ಮಾಡಿಕೊಂಡು, ಅಧಿಕಾರಿಗಳು ಈಗಾಗಲೇ ಸಿದ್ದತೆ ಆರಂಭಿಸಿದ್ದಾರೆ.

ಮುಂದಿನ ಎರಡುಮೂರು ದಿನಗಳಲ್ಲಿ ಕಾರ್ಯಕ್ರಮ ಉದ್ಘಾಟನೆ ಸ್ಥಳ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುವ ಸ್ಥಳ ಅಂತಿಮಗೊಳಿಸಲಾಗುವುದು ಎಂದು ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.

ರಾಷ್ಟ್ರೀಯ ಯುಜನೋತ್ಸವದಲ್ಲಿ ಸ್ಥಳೀಯ ಕಲಾವಿದರಿಗೂ ಪ್ರದರ್ಶನಕ್ಕೆ ಅವಕಾಶ ಸೀಗುವಂತೆ ಮಾಡಲಾಗುವುದು.

ಜಿಲ್ಲೆಯ ಎಲ್ಲ ಜನರು ದೇಶದ ಬೇರೆಬೇರೆ ರಾಜ್ಯಗಳ ಕಲೆ, ಸಂಸ್ಕೃತಿ, ಆಹಾರ ಉತ್ಪನ್ನಗಳನ್ನು ತಿಳಿಯಲು ಅನಕೂಲವಾಗುವಂತೆ ಕೆಯುಡಿ, ಕೆಸಿಡಿ, ಸೃಜನಾ ರಂಗಮಂದಿರ, ಕಲಾಭವನ, ಆರ್.ಎನ್.ಶೆಟ್ಟಿ ಕ್ರೀಡಾಂಗಣಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲು  ಅಧಿಕಾರಿಗಳಿಗೆ ತಿಳಿಸಲಾಗಿದೆ.

ಯುವಜನೋತ್ಸವದಲ್ಲಿ ಜಿಲ್ಲೆಯ ವಿವಿಧ ಕಾಲೇಜು, ವಿವಿಗಳು ಸೇರಿದಂತೆ ಸ್ಥಳಿಯ ಯುವಪ್ರತಿಭೆಗಳನ್ನು  ಸಕ್ರಿಯವಾಗಿ ತೊಡಗಿಸಿಕೊಂಡು ಕಾರ್ಯಕ್ರಮ ಯಶಸ್ವಿಗೊಳಿಸಲು ಯೋಜನೆ ರೂಪಿಸಲಾಗಿದೆ ಎಂದು ಕೇಂದ್ರ ಸಚಿವರು ತಿಳಿಸಿದರು.

ರಾಷ್ಟ್ರೀಯ ಯುವಜನೋತ್ಸವಕ್ಕೆ ಕೇಂದ್ರ ಸರಕಾರದ ಯುವಜನಸೇವಾ ಮತ್ತು ಕ್ರೀಡಾ ಮಂತ್ರಾಲಯ ರೂ.10 ಕೋಟಿ ಮತ್ತು ರಾಜ್ಯ ಸರಕಾರವು ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ ಮೂಲಕ ರೂ.10 ಕೋಟಿ ಅನುದಾನ ನೀಡಿವೆ.

ಜಿಲ್ಲೆಯ ಪ್ರಮುಖ ಕೈಗಾರಿಕಾ ಕಂಪನಿ ಹಾಗೂ ವಿವಿಧ ಉದ್ಯಮಗಳ ಪ್ರಾಯೋಜಕತ್ವ ಪಡೆಯಲು ನಿರ್ಧರಿಸಲಾಗಿದೆ. ಒಟ್ಟಾರೆ ಉತ್ಸವಕ್ಕೆ ಯಾವುದೇ ಆರ್ಥಿಕ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಲಾಗುವುದು.

ರಾಷ್ಟಕ್ಕೆ ನಮ್ಮ ಜಿಲ್ಲೆಯ ಹಿರಿಮೆಯನ್ನು ಪರಿಚಯಿಸುವ ಕಾರ್ಯವನ್ನು ಅತ್ಯಂತ ಹೆಮ್ಮೆಯಿಂದ ಮಾಡಲಾಗುವುದು ಎಂದು ಅವರು ತಿಳಿಸಿದರು.

ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಸ್ವಾಗತಿಸಿ, ಪಿಪಿಟಿ ಮೂಲಕ ರಾಷ್ಟ್ರೀಯ ಯುವಜನೋತ್ಸವದ ಸಿದ್ದತೆಗಳನ್ನು ಪ್ರಸ್ತುತ ಪಡಿಸಿದರು.

ಅವರು ಮಾತನಾಡಿ ಯುವಜನೋತ್ಸವದಲ್ಲಿ ಹಲವಾರು ಸ್ಪರ್ಧೆಗಳನ್ನು ಮತ್ತು ಪ್ರದರ್ಶನಗಳನ್ನು ಆಯೋಜಿಸಲಾಗುತ್ತದೆ. ಮತ್ತು ವಿವಿಧ ಮೇಧಾವಿಗಳೊಂದಿಗೆ ಯುವಜನತೆಯ ಜೊತೆಗೆ ಸಂವಾದ ಕಾರ್ಯಕ್ರಮ, ಕಲಾ ಕೃತಿಗಳ ರಚನೆ, ಯುವ ಸಮೂಹದ  ಪ್ರತಿಭೆಯ ಪ್ರದರ್ಶನಕ್ಕೆ ವೇದಿಕೆ ಮಾಡಿಕೊಡಲಾಗುತ್ತದೆ.

ಸಾಂಸ್ಕೃತಿಕ ಸಂಜೆಯಂತಹ ಕಾರ್ಯಕ್ರಮಗಳಲ್ಲಿ ವಿವಿಧ ಜಾನಪದ, ಕಲೆ ಪ್ರದರ್ಶನಕ್ಜೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಜಿಲಾಧಿಕಾರಿಗಳು ತಿಳಿಸಿದರು.

ಕೇಂದ್ರ ಸಚಿವರು ಹಾಗೂ ಶಾಸಕರು ಪತ್ರಿಕಾಗೋಷ್ಠಿ ಪೂರ್ವದಲ್ಲಿ ಕವಿವಿಯ ರಾಣಿ ಚನ್ನಮ್ಮ ಕ್ರೀಡಾಂಗಣ, ಸುವರ್ಣಮಹೋತ್ಸವ ಕಟ್ಟಡ, ಕವಿವಿಯ ಹಸಿರು ಉದ್ಯಾನ ವಿಕ್ಷೀಸಿ, ಸಿಂಡಿಕೇಟ್ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಯುವಜನೋತ್ಸವ ಸಿದ್ದತೆಗಳ ಕುರಿತು ಸಭೆ ಜರುಗಿಸಿದರು.

Share this article!

One thought on “ಧಾರವಾಡದಲ್ಲಿ ಜನವರಿ 12 ರಿಂದ ರಾಷ್ಟ್ರೀಯ ಯುವಜನೋತ್ಸವ

Leave a Reply

Your email address will not be published. Required fields are marked *

error: Content is protected !!