ಧಾರವಾಡ ಜಿಲ್ಲೆಯಲ್ಲಿ ಓರ್ವ ಮಹಿಳೆಗೆ ಓಮಿಕ್ರಾನ್ ಸೋಂಕು ದೃಢ, ಈಗ ಸಂಪೂರ್ಣ ಗುಣಮುಖ

ರಾಜ್ಯದಲ್ಲಿ ಇಂದು ಕೋವಿಡ್-19 ರ ಒಮಿಕ್ರಾನ್ ರೂಪಾಂತರದ ಐದು ಹೊಸ ಪ್ರಕರಣಗಳು ದೃಢಪಟ್ಟಿದ್ದು ಇದರಲ್ಲಿ ಧಾರವಾಡ ಜಿಲ್ಲೆಯ 54 ವರ್ಷದ ಮಹಿಳೆಯಲ್ಲಿ ಓಮಿಕ್ರಾನ್ ಸೋಂಕು ದೃಢಪಟ್ಟಿದೆ.

ಆದರೆ ಅಗತ್ಯ ಚಿಕಿತ್ಸೆ, ಔಷಧಿ ಪಡೆದುಕೊಂಡು ಈಗ ಅವರು ಸಂಪೂರ್ಣ ಗುಣಮುಖರಾಗಿದ್ದು, ಜಿಲ್ಲೆಯ ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು. ಇಂದು ಬೆಳಿಗ್ಗೆ ಅವರು ಕಚೇರಿ ಸಭಾಂಗಣದಲ್ಲಿ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿ, ಈ ಮಾಹಿತಿ ನೀಡಿದರು.

ಸೋಂಕಿತ ಮಹಿಳೆಯು ಕಳೆದ ಡಿ.4 ರಂದು ಜ್ವರ ಲಕ್ಷಣ ಬಂದ ಹಿನ್ನೆಲೆಯಲ್ಲಿ ಕೋವಿಡ್ ಟೆಸ್ಟ್ ಮಾಡಿಸಿದ್ದರು. ಡಿಸೆಂಬರ್ 5ಕ್ಕೆ ಪಾಸಿಟಿವ್ ವರದಿ ಬಂದಿತ್ತು. ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ನಂತರ ಅವರ ಗಂಟಲು ದ್ರವವನ್ನು ಜಿನೋಮ್ ಸ್ವಿಕೆನ್ಸ್‍ಗೆ ಕಳುಹಿಸಲಾಗಿತ್ತು. ಈಗ ಅದು ಓಮಿಕ್ರಾನ್ ಸೋಂಕು ಎಂದು ವರದಿ ಬಂದಿದೆ.

ಆದರೆ ನಿಯಮಾನುಸಾರ ಎಲ್ಲ ಮುಂಜಾಗೃತೆ ವಹಿಸಿ ಸೋಂಕಿತ ಮಹಿಳೆಗೆ ಅಗತ್ಯ ಚಿಕಿತ್ಸೆ, ಔಷಧಿ ಮತ್ತು ಆರೋಗ್ಯ ಸಲಹೆ ನೀಡಿರುವುದರಿಂದ ಅವರು ಈಗ ಸಂಪೂರ್ಣ ಗುಣಮುಖರಾಗಿದ್ದಾರೆ ಎಂದರು ಜಿಲ್ಲಾಧಿಕಾರಿ ತಿಳಿಸಿದರು.

ಕೋವಿಡ್ ಮಾರ್ಗಸೂಚಿಗಳ ಪ್ರಕಾರ ಪಾಸಿಟಿವ್ ಬಂದಿದ್ದ ಮಹಿಳೆಗೆ ಕಳೆದ 2 ದಿನಗಳಲ್ಲಿ 2 ಬಾರಿ ಕೋವಿಡ್ ಟೆಸ್ಟ್ ಮಾಡಲಾಗಿದ್ದು, ನಿನ್ನೆ ಒಂದು ಮತ್ತು ಇಂದು ಬೆಳಿಗ್ಗೆ ಒಂದು ನೆಗೆಟಿವ್ ವರದಿ ಬಂದಿವೆ. ಯಾವುದೇ ಆತಂಕಪಡುವ ಅಗತ್ಯವಿಲ್ಲ.

ಸೊಂಕಿತರ ಪ್ರಥಮ ಸಂಪರ್ಕದ 4 ಜನ ಹಾಗೂ ದ್ವಿತೀಯ ಸಂಪರ್ಕದ 133 ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದ್ದು ಎಲ್ಲರದ್ದು ನೆಗೆಟಿವ್ ವರದಿ ಬಂದಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಸೋಂಕಿತ ಮಹಿಳೆಯ ವಾಸದ ಮನೆ ಹಾಗೂ ಕರ್ತವ್ಯ ನಿರ್ವಹಿಸುತ್ತಿದ್ದ ಸ್ಥಳದಲ್ಲಿ ಅಗತ್ಯ ಮುಂಜಾಗೃತೆ ವಹಿಸಿ ಕ್ರಮ ಕೈಗೊಳ್ಳಲಾಗಿದೆ. ಮತ್ತು ಕಚೇರಿಗೆ ರಜೆ ನೀಡಲಾಗಿದೆ.

ಸೋಂಕಿತ ಮಹಿಳೆಯು ಕೋವಿಡ್ ಮಾರ್ಗಸೂಚಿಗಳ ಪ್ರಕಾರ 10 ಮತ್ತು 7 ಸೇರಿ ಒಟ್ಟು 17 ದಿನ ಹೋಮ್ ಐಸೋಲೇಷನ್ ಆಗಿದ್ದು, ಇನ್ನು ಒಂದು ವಾರ ಹೋಂ ಐಸೋಲೇಷನ್‍ದಲ್ಲಿ ಇರುವಂತೆ ಸಲಹೆ ನೀಡಲಾಗಿದೆ.

ಸೋಂಕಿತ ಮಹಿಳೆ ಸಂಪೂರ್ಣ ಗುಣಮುಖವಾಗಿರುವುದರಿಂದ ಸಾರ್ವಜನಿಕರು ಯಾವುದೇ ಭಯ, ಆತಂಕಗಳಿಗೆ ಒಳಗಾಗದೆ ಕೋವಿಡ್ ಆರೋಗ್ಯ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದರು.

Share this article!

Leave a Reply

Your email address will not be published. Required fields are marked *

error: Content is protected !!