ಧಾರವಾಡ ರಂಗಾಯಣವು ಭಾರತ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ 1824ರಲ್ಲಿ ಸಮರಸಾರಿ ಅವರನ್ನು ಅಕ್ಟೋಬರ್ 23ರಂದು ಸದೆ ಬಡಿದು ಪ್ರಪ್ರಥಮವಾಗಿ ವಿಜಯದುಂದುಭಿ ಮೊಳಗಿಸಿದ್ದ ಬೆಳ್ಳಿಚುಕ್ಕಿ ವೀರರಾಣಿ ಕಿತ್ತೂರು ರಾಣಿಚೆನ್ನಮ್ಮ ಅವರ ಗತವೈಭವ ಸಾರುವ ವೀರರಾಣಿ ಕಿತ್ತೂರು ಚನ್ನಮ್ಮ ಮೆಗಾ ನಾಟಕ ಪ್ರದರ್ಶನವನ್ನು ಡಿಸೆಂಬರ್ 24 ಮತ್ತು 25 ರಂದು ಧಾರವಾಡದಲ್ಲಿ ಪ್ರದರ್ಶಿಸಲಿದೆ.
ಈ ಐತಿಹಾಸಿಕ ಸಂದರ್ಭವನ್ನು ಇದು ಕನ್ನಡ ರಂಗಭೂಮಿಯ ಇತಿಹಾಸದಲ್ಲಿಯೇ ಬೃಹತ್ ನಾಟಕ ಪ್ರದರ್ಶನದ ಪ್ರಥಮ ಪ್ರಯತ್ನವಾಗಿದೆ ಎಂದು ಧಾರವಾಡ ರಂಗಾಯಣದ ನಿರ್ದೇಶಕ ರಮೇಶ ಎಸ್. ಪರಿವಿನಾಯ್ಕರ್ ಹೇಳಿದರು.
ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುವ ಸಂಭ್ರಮದಲ್ಲಿ ಇಡೀ ದೇಶವೇ ಪಾಲ್ಗೊಂಡಿದೆ.
ಅವರು ಇಂದು ಮಧ್ಯಾಹ್ನ ರಂಗಾಯಣದ ಕನ್ನಡ, ಸಾಂಸ್ಕøತಿಕ ಸಮುಚ್ಛಯ ಭವನದಲ್ಲಿ ಬೆಳ್ಳಿಚುಕ್ಕಿ ವೀರರಾಣಿ ಕಿತ್ತೂರು ಚನ್ನಮ್ಮ ಮೆಗಾ ನಾಟಕದ ಪ್ರೊಮೋ ಮತ್ತು ಭಿತ್ತಿಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದರು.
ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಿತ್ತೂರು ಸಂಸ್ಥಾನದ ಕೊಡುಗೆ ಅಗಣಿತವಾಗಿದೆ. ಭಾರತ ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿಚುಕ್ಕಿ ಎಂದೇ ರಾಣಿಚನ್ನಮ್ಮನನ್ನು ಇತಿಹಾಸದಲ್ಲಿ ದಾಖಲಿಸಲಾಗಿದೆ.
ಅವರೊಂದಿಗೆ ಸಂಗೊಳ್ಳಿ ರಾಯಣ್ಣ, ಬಿಚ್ಚುಗತ್ತಿ ಚನ್ನಬಸಪ್ಪ, ಅಮಟೂರ ಬಾಳಪ್ಪ, ಅವರಾದಿ ವೀರಪ್ಪ, ಸರ್ದಾರ ಗುರುಸಿದ್ದಪ್ಪ, ವಡ್ಡರ ಯಲ್ಲಣ್ಣ ಮುಂತಾದವರ ತ್ಯಾಗ, ಬಲಿದಾನ ದೇಶಾಭಿಮಾನ ಜನಮಾನಸಕ್ಕೆ ಅದರಲ್ಲೂ ಮುಖ್ಯವಾಗಿ ಯುವಜನತೆಗೆ ತಲುಪುವುದು ಅವಶ್ಯ ಮತ್ತು ಅಷ್ಟೇ ಸಂದರ್ಭೋಚಿತವಾಗಿದೆ ಎಂದು ಅವರು ಹೇಳಿದರು.
ಧಾರವಾಡ ರಂಗಾಯಣವು ಕಿತ್ತೂರು ರಾಣಿ ಚೆನ್ನಮ್ಮನ ಹೋರಾಟ ಮತ್ತು ದೇಶಾಭಿಮಾನದ ಇತಿಹಾಸವನ್ನು ಸಾರುವ ನಿಟ್ಟಿನಲ್ಲಿ, ಮಹಾರಾಷ್ಟ್ರ ಸರ್ಕಾರದ ಜನತಾ ರಾಜಾ ನಾಟಕದ ಮಾದರಿಯಲ್ಲಿ ಧ್ವನಿ-ಬೆಳಕಿನ ತಂತ್ರಜ್ಞಾನವನ್ನು ಅಳವಡಿಸಿಕೊಂಡು ವಿಶಾಲ ರಂಗಮಂಟಪದ ಮೇಲೆ ಜೀವಂತ ಆನೆ, ಕುದುರೆ, ಒಂಟೆಗಳನ್ನು ತರುವ ಮೂಲಕ ಒಂದು ಅತ್ಯದ್ಭುತವಾದ ಮೆಗಾ ನಾಟಕವನ್ನು ಪ್ರದರ್ಶಿಸಲು ಸಿದ್ಧತೆ ಮಾಡಿಕೊಂಡಿದೆ.
ಈ ರಂಗರೂಪಕದಲ್ಲಿ 150 ಜನ ಕಲಾವಿದರು, 50 ಜನ ತಂತ್ರಜ್ಞರು, ನಾಲ್ಕು ನಿರ್ದೇಶಕರು, ಹೀಗೆ ಒಟ್ಟು 250ಕ್ಕೂ ಹೆಚ್ಚು ಜನ ತೊಡಗಿಕೊಂಡಿದ್ದಾರೆ.
ಈ ನಾಟಕವನ್ನು ರಮೇಶ ಎಸ್. ಪರವಿನಾಯ್ಕರ ಪ್ರಧಾನ ನಿರ್ದೇಶಕರಾಗಿ ಮತ್ತು ಸಹ ನಿರ್ದೇಶಕರಾಗಿ ಕಲ್ಲಪ್ಪ ಪೂಜೇರ, ಸೂರ್ಯಕಲಾ .ಎಸ್. ಹಾಗೂ ವಿಶ್ವರಾಜ ಪಾಟೀಲ ಕೆಲಸ ಮಾಡುತ್ತಿದ್ದಾರೆ.
ಸಂಗೀತ ಸಂಯೋಜನೆ ಅರುಣ ಭಟ್, ರಾಘವ ಕಮ್ಮಾರ ನಿರ್ವಹಿಸಿದ್ದಾರೆ. ರಂಗಸಜ್ಜಿಕೆ ವಿಶ್ವನಾಥ ಮಂಡಿ ಮತ್ತು ರಂಗಪರಿಕರ ಮಹೇಶ ಆಚಾರಿಯವರು ಸಿದ್ಧಗೊಳಿಸಿದ್ದಾರೆ. ಇಂತಹ ಪ್ರಯೋಗ ಕರ್ನಾಟಕದ ಇತಿಹಾಸದಲ್ಲಿ ಪ್ರಥಮ ಪ್ರಯತ್ನವಾಗಿದೆ ಎಂದು ರಮೇಶ ಪರವಿನಾಯ್ಕರ್ ತಿಳಿಸಿದರು.
ಡಿಸೆಂಬರ್ 24 ಮತ್ತು 25 ರಂದು ಕರ್ನಾಟಕ ಕಲಾ ಕಾಲೇಜು ಮೈದಾನದಲ್ಲಿ ಮೆಗಾ ನಾಟಕ ಪ್ರದರ್ಶನಕ್ಕೆ ಬೃಹತ್ ವೇದಿಕೆ ನಿರ್ಮಿಸಲು ಸಿದ್ಧತೆಗಳು ಪ್ರಾರಂಭಗೊಂಡಿವೆ.
ನಾಟಕವನ್ನು ವೀಕ್ಷಿಸಲು ಸುಮಾರು ಹದಿನೈದು ಸಾವಿರ ಜನ ಆಗಮಿಸುವ ನೀರಿಕ್ಷೆ ಇದೆ. ಸ್ವಾತಂತ್ರ್ಯ ಸಂಗ್ರಾಮದ ನೈಜ ಸನ್ನಿವೇಶಗಳನ್ನು ತೋರಿಸಲು ಜೀವಂತ ಆನೆ, ಕುದುರೆ, ನೂರಾರು ಸೈನಿಕರ ದೃಶ್ಯಗಳನ್ನು ಕಟ್ಟಲಾಗಿದೆ.
ನಾಟಕದ ಪಾತ್ರ, ವಸ್ತುವಿಷಯ ಮತ್ತು ಸಾಹಿತ್ಯ, ನೈಜಘಟನೆಗಳ ಕುರಿತಂತೆ ಸುಳ್ಳದ ದೇಸಾಯಿ ಅವರ ವೃತ್ತಿ ರಂಗಭೂಮಿಯ ನಾಟಕ ಪ್ರತಿ, ಹೆಳವರ ದಾಖಲೆ, ಸಂಗೊಳ್ಳಿ, ಕಿತ್ತೂರು, ತುರುಮರಿ ಹೀಗೆ ಹಲವು ಪ್ರದೇಶಗಳಲ್ಲಿ ಸಂಶೋಧನೆ, ಜಾನಪದ ಇತಿಹಾಸ, ಲಂಡನ್ನಲ್ಲಿರುವ ಗೆಜೆಟ್ದಂತಹ ಹಲವು ದಾಖಲೆಗಳನ್ನು ಪರಿಶೀಲಿಸಿ, ಸಿದ್ಧಪಡಿಸಲಾಗಿದೆ.
ಇದಕ್ಕಾಗಿ ನಾಟಕ ರಚನೆ, ಸಂಶೋಧನೆ ಮತ್ತು ಪರಿಷ್ಕರಣಾ ಸಮಿತಿಯನ್ನು ಮಾಡಿ ಅತ್ಯಂತ ಮುತುವರ್ಜಿಯಿಂದ ನಾಟಕವನ್ನು ಸಿದ್ಧಪಡಿಸಲಾಗಿದೆ ಎಂದು ಅವರು ತಿಳಿಸಿದರು.
ಈ ನಾಟಕವು ಮೂರುವರೆ ಗಂಟೆಯ ಅವಧಿಯಾಗಿದ್ದು, ಚೆನ್ನಮ್ಮಳ ಯುದ್ಧ, ರಾಯಣ್ಣನ ಹೋರಾಟದ ಜೊತೆಗೆ ಹಲವು ಸಮುದಾಯಗಳ ವೀರಯೋಧರನ್ನು ಮತ್ತು ಅವರ ತ್ಯಾಗ ಹೋರಾಟದ ಘಟನೆಗಳನ್ನು ಈ ನಾಟಕದ ಮೂಲಕ ತೋರಿಸಲಾಗುತ್ತದೆ.
ಧಾರವಾಡದಲ್ಲಿ ಎರಡು ಪ್ರದರ್ಶನ, ಕಲಬುರ್ಗಿಯಲ್ಲಿ 5 ಪ್ರದರ್ಶನ, ಬೆಳಗಾವಿಯಲ್ಲಿ 03 ಪ್ರದರ್ಶನಗಳನ್ನು ಆರಂಭಿಕವಾಗಿ ಏರ್ಪಡಿಸಲಾಗುವದು. ಈ ನಾಟಕದ ವೀಕ್ಷಣೆಗೆ ರೂ. 250/- ಗಳ ಗೌರವ ಪಾಸ್ ನೀಡಲಾಗುವುದು ಎಂದು ಅವರು ತಿಳಿಸಿದರು.
ನಾಟಕದ ವೀಕ್ಷಣೆಗೆ ಟಿಕೇಟ್ ಸಿಗುವ ಸ್ಥಳ: ಡಿ. 24 ಮತ್ತು 25 ರಂದು ಕರ್ನಾಟಕ ಕಾಲೇಜು ಮೈದಾನದಲ್ಲಿ ಪ್ರದರ್ಶನಗೊಳ್ಳಲಿರುವ ವೀರರಾಣಿ ಕಿತ್ತೂರು ರಾಣಿ ಚನ್ನಮ್ಮ ಮೆಗಾ ನಾಟಕ ವೀಕ್ಷಣೆಗೆ ರೂ. 250/- ಗಳ ಪ್ರವೇಶ ಶುಲ್ಕ ನಿಗದಿಗೊಳಿಸಿ ಗೌರವ ಪಾಸ್ಗಳನ್ನು ಸಿದ್ಧಗೊಳಿಸಲಾಗಿದೆ.
ಸುಮಾರು 15 ಸಾವಿರಕ್ಕೂ ಹೆಚ್ಚು ಜನ ಕುಳಿತು ಏಕಕಾಲದಲ್ಲಿ ನಾಟಕ ವೀಕ್ಷಿಸಲು ಅನುಕೂಲವಾಗುವಂತೆ ಮೈದಾನ ಸಿದ್ಧಗೊಳಿಸಲಾಗಿದೆ.
ನಾಟಕ ವೀಕ್ಷಣೆಗೆ ಡಿ.15 ರಿಂದ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಕರ್ನಾಟಕ ಕಾಲೇಜು ಮುಖ್ಯ ಕಟ್ಟಡದ ಮುಂಭಾಗ, ಧಾರವಾಡ ರಂಗಾಯಣ ಕಚೇರಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಕಚೇರಿಗಳಲ್ಲಿ ಟಿಕೇಟ್ಗಳು ಮಾರಾಟಕ್ಕೆ ಲಭ್ಯವಿವೆ.
ಹೆಚ್ಚಿನ ಮಾಹಿತಿ ಹಾಗೂ ಟಿಕೇಟ್ಗಳಿಗಾಗಿ ವಿರೇಂದ್ರ ದೇಸಾಯಿ (9740160608), ಬಾಳಣ್ಣ ಶೀಗಿಹಳ್ಳಿ (9481729696) ಮತ್ತು ಕೆ.ಎಚ್. ನಾಯಕ (9035530257) ಅವರನ್ನು ಸಂಪರ್ಕಿಸಬಹುದೆಂದು ರಂಗಾಯಣ ನಿರ್ದೇಶಕ ರಮೇಶ ಪರವಿನಾಯ್ಕರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮೆಗಾ ನಾಟಕದ ಭಿತ್ತಿ ಪತ್ರಗಳನ್ನು ಬಿಡುಗಡೆ ಮಾಡಲಾಯಿತು. ಧಾರವಾಡ ರಂಗಾಯಣದ ಆಡಳಿತಾಧಿಕಾರಿ ಶಶಿಕಲಾ ಹುಡೇದ, ಹಿರಿಯ ರಂಗಕರ್ಮಿಗಳಾದ ಡಾ: ಬಾಳಣ್ಣ ಶೀಗಿಹಳ್ಳಿ, ಕೆ.ಎಚ್. ನಾಯಕ, ವಾರ್ತಾ ಇಲಾಖೆಯ ಸಹಾಯಕ ವಾರ್ತಾಧಿಕಾರಿ ಡಾ. ಸುರೇಶ್ ಹಿರೇಮಠ ಇದ್ದರು.