ಉಣಕಲ್‌ನ ನವೀನ ಹೋಟೇಲ್ ನಲ್ಲಿ ಭಾರತೀಯ ಸಂಬಾರು ಮಂಡಳಿ ಕೊಚ್ಚಿನ್ ಸಹಯೋಗದಲ್ಲಿ ಸಂಬಾರು ಪದಾರ್ಥ ಖರೀದಿದಾರರ ಮತ್ತು ಮಾರಾಟಗಾರರ ಸಮಾವೇಶ ಹಮ್ಮಿಕೊಳ್ಳಲಾಗಿತ್ತು.
ತೋಟಗಾರಿಕೆ ಇಲಾಖೆ, ಕರ್ನಾಟಕ ರಾಜ್ಯ ಸಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ ಹಾಗೂ ಭಾರತೀಯ ಸಂಬಾರು ಮಂಡಳಿ ಕೊಚ್ಚಿನ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಸಂಬಾರು ಪದಾರ್ಥಗಳ ಖರೀದಿದಾರರ ಮತ್ತು ಮಾರಾಟಗಾರರ ಸಮಾವೇಶವನ್ನು ಉದ್ಘಾಟಿಸಿ ಬಿ.ಎನ್. ಮಲ್ಲಿಕಾರ್ಜುನಪ್ಪ ಅವರು ಮಾತನಾಡಿದರು.
ವಾಣಿಜ್ಯ ಕ್ಷೇತ್ರದಲ್ಲಿ ಹುಬ್ಬಳ್ಳಿ ಮುಂಚೂಣಿಯಲ್ಲಿದೆ. ಬೆಳೆಗಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಂಬಾರು ಅಭಿವೃದ್ಧಿ ಮಂಡಳಿಯನ್ನು ಹುಬ್ಬಳ್ಳಿಯಲ್ಲಿ ಸ್ಥಾಪಿಸಲಾಗಿದೆ ಎಂದರು.
ರೈತರು ಇಂದು ಹಲವಾರು ಕಷ್ಟಗಳ ನಡುವೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ರೈತರು ಬೆಳೆದ ಬೆಳೆಗೆ ಯೋಗ್ಯ ಬೆಲೆ ದೊರೆಯಬೇಕು.
ಅವರಿಗೆ ಸೂಕ್ತ ರೀತಿಯ ಸಹಾಯ ಸಹಕಾರ ನೀಡುವುದು ಅವಶ್ಯಕವಾಗಿದೆ ಎಂದು ಕರ್ನಾಟಕ ರಾಜ್ಯ ಸಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ ನಿರ್ದೇಶಕ ಬಿ.ಎನ್. ಮಲ್ಲಿಕಾರ್ಜುನಪ್ಪ ಹೇಳಿದರು.
ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ವಿನಯ ಜವಳಿ ಮಾತನಾಡಿ, ಸಂಬಾರು ಮಂಡಳಿ ಹುಬ್ಬಳ್ಳಿಗೆ ಬರಲು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಪ್ರಯತ್ನ ಮಾಡಿದೆ.
ಕೈ ಕೆಸರಾದರೆ ಬಾಯಿ ಮೊಸರು ಎನ್ನುವ ನಾಣ್ಣುಡಿಯಂತೆ ರೈತರು ಶ್ರಮವಹಿಸುತ್ತಿದ್ದಾರೆ. ಅವರ ಶ್ರಮಕ್ಕೆ ಯೋಗ್ಯ ಬೆಲೆ ಸಿಗಬೇಕಾಗಿದೆ. ಎಲ್ಲರೂ ರೈತರೊಂದಿಗೆ ಉತ್ತಮ ಒಡನಾಟ ಇಟ್ಟುಕೊಳ್ಳಬೇಕು.
ಪ್ರತಿ ವರ್ಷ ಮೆಣಸು ಮೇಳವನ್ನು ಆಯೋಜನೆ ಮಾಡಲಾಗುತ್ತದೆ. ಬೆಳೆಗಾರರಿಗೆ ಒಳ್ಳೆಯ ಬೆಲೆ ಸಿಗಬೇಕು ಎಂಬ ಉದ್ದೇಶದಿಂದ ಈ ಸಮಾವೇಶ ಹಮ್ಮಿಕೊಂಡಿರುವುದು ಸಂತಸದ ವಿಷಯ.
ವಿದೇಶಿಗರು ಭಾರತೀಯ ಮೆಣಸಿನ ಆಹಾರಕ್ಕೆ ಮಾರು ಹೋಗಿದ್ದಾರೆ. ಅವರು ಭಾರತೀಯ ಆಹಾರವನ್ನು ಇಷ್ಟಪಡುತ್ತಾರೆ. ಭಾರತದಲ್ಲಿ ಸಂಬಾರು ಪದಾರ್ಥಗಳಿಗೆ ಉತ್ತಮ ಮಾರುಕಟ್ಟೆ ದೊರೆಯಬೇಕಾಗಿದೆ ಎಂದು ಹೇಳಿದರು.