ಧಾರವಾಡ ಜಿಲ್ಲೆಯ ಉಸ್ತುವಾರಿ ಕಾರ್ಯದರ್ಶಿಗಳು ಹಾಗೂ ಹುಬ್ಬಳ್ಳಿ – ಧಾರವಾಡ ಸ್ಮಾರ್ಟ್ ಸಿಟಿ ಸಂಸ್ಥೆಯ ಅಧ್ಯಕ್ಷರಾಗಿರುವ ಡಾ || ರವಿಕುಮಾರ ಸುರಪುರ ಅವರು ಸ್ಮಾರ್ಟ್ ಸಿಟಿ ಯೋಜನೆಯಡಿ ಹುಬ್ಬಳ್ಳಿಯಲ್ಲಿ ಕೈಗೊಳ್ಳಲಾಗುತ್ತಿರುವ ಕಾಮಗಾರಿಗಳ ಪರಿವೀಕ್ಷಣೆ ಮಾಡಿದರು.
ಪ್ರಗತಿಯಲ್ಲಿರುವ ಕಾಮಗಾರಿಗಳಾದ ತೋಳನಕೆರೆಯ ಪುನರ್ ಅಭಿವೃದ್ಧಿ ಕಾಮಗಾರಿಯ ಸ್ಥಳ , ಮಲ್ಟಿಲೆವಲ್ ಕಾರ್ ಪಾರ್ಕಿಂಗ್ ನಿರ್ಮಾಣ ಕಾಮಗಾರಿ , ಕೋರ್ಟ ಸರ್ಕಲ್ , ಜನತಾ ಬಜಾರ ಪುನರ್ ನಿರ್ಮಾಣ ಕಾಮಗಾರಿ , ಸಂಗೊಳ್ಳಿ ರಾಯಣ್ಣ ವೃತ್ತ , ಮೀನು ಮಾರುಕಟ್ಟೆಯ ಪುನರ್ ನಿರ್ಮಾಣ ಕಾಮಗಾರಿ , ಗಣೇಶಪೇಟ , ಸ್ಮಾರ್ಟ ರಸ್ತೆಗಳ ನಿರ್ಮಾಣ ಕಾಮಗಾರಿ : ಪ್ಯಾಕೇಜ್ -02 ,ಬೆಂಗೇರಿ ಮಾರುಕಟ್ಟೆಯ ಪುನರ್ ನಿರ್ಮಾಣ ಕಾಮಗಾರಿಗಳ ಪರಿವೀಕ್ಷಣೆ ಮಾಡಿದರು.
ಘನತ್ಯಾಜ್ಯ ತೋಳನಕೆರೆಗೆ ಸೇರದಂತೆ ಕ್ರಮಕೈಗೊಳ್ಳಬೇಕು. ಕಾಮಗಾರಿಯನ್ನು ಎರಡು ತಿಂಗಳ ಒಳಗೆ ಪೂರ್ಣಗೊಳಿಸಬೇಕು . ಪಕ್ಷಿವಿಹಾರಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖಾ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ನರ್ಸರಿ ,ಉತ್ತಮ ಗಿಡ- ಮರಗಳನ್ನು ಬೆಳೆಸುವ ಯೋಜನೆಯನ್ನು ಒಂದು ತಿಂಗಳಲ್ಲಿ ಕೈಗೊಳ್ಳಲು ನಿರ್ದೇಶಿಸಿದರು.
ಮಲ್ಟಿಲೇವಲ್ ಕಾರ್ ಪಾರ್ಕಿಂಗ್ ( ಬಹುಮಹಡಿ ವಾಹನ ನಿಲುಗಡೆ ) ಸ್ಥಳದಲ್ಲಿ ಮುಂಜಾಗ್ರತೆ ಕ್ರಮವಾಗಿ ಅಗತ್ಯವಿರುವ ತಡೆಗೋಡೆ ನಿರ್ಮಿಸಿ, ಜನಹಾನಿಯಾಗದಂತೆ ಸುರಕ್ಷತೆ ಕ್ರಮಗಳನ್ನು ಕೈಗೊಂಡು , ಸಾರ್ವಜನಿಕರಿಗೆ ಅನಾನುಕೂಲವಾಗದಂತೆ ಕ್ರಮಗಳನ್ನು ಕೈಗೊಳ್ಳಲು ತಿಳಿಸಿದರು. ಕಾಮಗಾರಿಗಳನ್ನು ಒಂದು ತಿಂಗಳ ನಂತರ ಅವಲೋಕಿಸಿ ಪ್ರಗತಿ ಕಂಡು ಬರದಿದ್ದರೆ ನಿಯಮಾನುಸಾರ ಕ್ರಮ ಕೈಗೊಳ್ಳಲು ಸೂಚಿಸಿದರು.
ಸ್ಮಾರ್ಟ ರಸ್ತೆಗಳ ಪ್ಯಾಕೇಜ್ -02 ಕಾಮಗಾರಿಗಳು ಮಳೆ ನೀರು ಚರಂಡಿಗೆ ಅಳವಡಿಸಿರುವ ಚೇಂಬರ್ ಕವರ್ಗಳನ್ನು ವಿನ್ಯಾಸದಂತೆ 50 ಮೀಟರ್ ನಿಯಮಿತ ಅಂತರದಲ್ಲಿ ಅಳವಡಿಸಬೇಕು. ಕಾಮಗಾರಿಯ ಗುಣಮಟ್ಟವನ್ನು ಪರೀಕ್ಷಿಸುತ್ತಿರಬೇಕು ಎಂದು ಅವರು ಹೇಳಿದರು.
ಜನತಾ ಬಜಾರ , ಮೀನು ಮಾರುಕಟ್ಟೆ ಮತ್ತು ಬೆಂಗೇರಿ ಮಾರುಕಟ್ಟೆ ಸೇರಿದಂತೆ ಎಲ್ಲಾ ಕಾಮಗಾರಿಗಳ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು. ತ್ವರಿತವಾಗಿ ಜನತಾ ಬಜಾರ ಕಾಮಗಾರಿಯನ್ನು 8 ತಿಂಗಳ ಅವಧಿಯಲ್ಲಿ ಹಾಗೂ ಉಳಿದ ಕಾಮಗಾರಿಯನ್ನು ಮೂರು ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸುವಂತೆ ನಿರ್ದೇಶಿಸಿದರು.
ಹುಬ್ಬಳ್ಳಿ – ಧಾರವಾಡ ಸ್ಮಾರ್ಟ ಸಿಟಿ ಲಿ ವ್ಯವಸ್ಥಾಪಕ ನಿರ್ದೇಶಕ ಶಕೀಲ್ ಅಹ್ಮದ್, ಮುಖ್ಯ ಅಭಿಯಂತರರು , ಕಾರ್ಯಪಾಲಕ ಅಭಿಯಂತರರಗಳು , ಸಹಾಯಕ ಕಾರ್ಯಪಾಲಕ ಅಭಿಯಂತರರು ಹಾಗೂ ಇತರೆ ಅಧಿಕಾರಿಗಳು ಹಾಜರಿದ್ದರು.