2030ರ ಹೊತ್ತಿಗೆ ರಾಷ್ಟ್ರೀಯ ಶಿಕ್ಷಣ ನೀತಿ ಸಂಪೂರ್ಣ ಜಾರಿ

2030ರ ಹೊತ್ತಿಗೆ ರಾಷ್ಟ್ರೀಯ ಶಿಕ್ಷಣ ನೀತಿ ಯನ್ನು ರಾಜ್ಯಾದ್ಯಂತ ಸಂಪೂರ್ಣವಾಗಿ ಜಾರಿ ಮಾಡಲಾಗುವುದು. ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಸರಕಾರಿ ಕಾಲೇಜುಗಳಲ್ಲಿ ಅನುಷ್ಠಾನಕ್ಕೆ ತರಲಾಗುವುದು ಎಂದು ಉನ್ನತ ಶಿಕ್ಷಣ ಖಾತೆ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಹಿನ್ನೆಲೆಯಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ತಜ್ಞರೊಂದಿಗೆ ನಡೆಸಿದ ಚರ್ಚೆಯ ವೇಳೆ ಮಾತನಾಡಿದ ಅವರು, ಈ ಶೈಕ್ಷಣಿಕ ವರ್ಷದಿಂದಲೇ ಶಿಕ್ಷಣ ನೀತಿ ಜಾರಿ ಮಾಡುವ ವಿಶ್ವವಿದ್ಯಾಲಯಗಳು, ಸರಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸರಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ. ಸ್ವ ಇಚ್ಛೆಯಿಂದ ಯಾರೇ ಮುಂದೆ ಬಂದು ಜಾರಿ ಮಾಡಿದರೂ ಸರಕಾರ ಅವಕಾಶ ನೀಡಲಿದೆ ಎಂದರು.

ಶಿಕ್ಷಣ ನೀತಿಯನ್ನು ಆಮೂಲಾಗ್ರವಾಗಿ ಜಾರಿ ಮಾಡಲು 15 ವರ್ಷ ಕಾಲಾವಕಾಶ ಕೇಂದ್ರ ಸರಕಾರ ನೀಡಿದೆ. ಆದರೆ, 10  ವರ್ಷಗಳ ಅವಧಿಯಲ್ಲೇ ಜಾರಿ ಮಾಡಲು ರಾಜ್ಯ ಸರಕಾರ ನಿರ್ಧರಿಸಿ ಎಲ್ಲ ಕೆಲಸಗಳನ್ನು ಕೈಗೆತ್ತಿಕೊಂಡಿದೆ.

2040ರ ಹೊತ್ತಿಗೆ ರಾಜ್ಯವೂ ಸೇರಿ ಇಡೀ ದೇಶದ ಶೈಕ್ಷಣಿಕ ವ್ಯವಸ್ಥೆ ಸಂಪೂರ್ಣವಾಗಿ ಬದಲಾಗಿಬಿಟ್ಟಿರುತ್ತದೆ ಎಂದು ಅವರು ತಿಳಿಸಿದರು.‌ ಶಿಕ್ಷಣ ನೀತಿ ಜಾರಿಗೆ ಅನುಕೂಲವಾಗುವಂತೆ ಎಲ್ಲ ವಿಷಯಾವಾರು ಸಮಿತಿಗಳನ್ನು ರಚನೆಗಳನ್ನು ಆ ಬಗ್ಗೆ ಕಾರ್ಯಚೌಕಟ್ಟು ನಿಗದಿಪಡಿಸಿ ವರದಿ ನೀಡುವಂತೆ ಕೋರಲಾಗಿದೆ.

ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡುವ ಪ್ರಕ್ರಿಯೆಯಲ್ಲಿ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುವುದು. ವರದಿಗಳೆಲ್ಲ ಕೈ ಸೇರಿದ ಕೂಡಲೇ ಜಾರಿಯ ಪ್ರಕ್ರಿಯೆಗಳನ್ನು ಶುರು ಮಾಡಲಾಗುವುದು ಎಂದು ಅವರು ಹೇಳಿದರು.

ಈಗಾಗಲೇ ರಾಜ್ಯದಲ್ಲಿ ಡಿಜಿಟಲ್ ಕಲಿಕೆ ಮತ್ತು ಬೋಧನೆ ಅತ್ಯುತ್ತಮವಾಗಿ ಮುಂದುವರಿದಿದೆ. ಮುಂದಿನ ದಿನಗಳಲ್ಲಿ ಈ ವ್ಯವಸ್ಥೆ ಮತ್ತಷ್ಟು ವಿಸ್ತರಣೆಯಾಗಲಿದೆ ಎಂದು ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

ವಿವಿ ಕುಲಪತಿ ಕೆ.ಬಿ ಗುಡಸಿ, ರಾಜ್ಯ ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಡಾ.ಬಿ.ಟಿ.ತಿಮ್ಮೇಗೌಡ, ವಿಧಾನ ಪರಿಷತ್ ಸದಸ್ಯ ಎಸ್ ವಿ ಸಂಕನೂರ್, ಕಾನೂನು ವಿವಿ ಕುಲಪತಿ ಈಶ್ವರ ಭಟ್, ಧಾರವಾಡ ಕೃಷಿ ವಿಜ್ಞಾನ ವಿವಿ ಕುಲಪತಿ ಡಾ.ಚೆಟ್ಟಿ ಮುಂತಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು.

Share this article!

Leave a Reply

Your email address will not be published. Required fields are marked *

error: Content is protected !!