ರಾಷ್ಟ್ರೀಯ ರೈತರ ದಿನಾಚರಣೆಯ ಅಂಗವಾಗಿ ಕೃಷಿ ಇಲಾಖೆ, ಐ.ಸಿ.ಎ.ಆರ್.-ಕೃಷಿ ವಿಜ್ಞಾನ ಕೇಂದ್ರ, ಧಾರವಾಡ, ಹಾಗೂ ಜಿಲ್ಲಾ ಕೃಷಿಕ ಸಮಾಜ ಇವರ ಸಹಯೋಗದಲ್ಲಿ ಇಂದು (ಡಿ.23) ರೈತರ ಮತ್ತು ಕೃಷಿ ವಿಜ್ಞಾನಿಗಳ ಸಂವಾದ ಮತ್ತು ಕಿಸಾನ ಗೋಷ್ಠಿಯನ್ನು ಐ.ಸಿ.ಎ.ಆರ್.-ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಯಿತು.
ಭಾರತ ದೇಶದ 5 ನೇ ಪ್ರಧಾನ ಮಂತ್ರ್ರಿಗಳಾದ ಶ್ರೀ ಚೌಧರಿ ಚರಣಸಿಂಗ್‍ರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಹಾಗೂ ಸಸಿಗೆ ನಿರೇರೆಯುವ ಮೂಲಕ ರಾಷ್ಟ್ರೀಯ ರೈತರ ದಿನ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕ ರಾಜಶೇಖರ ಬಿಜಾಪೂರ ಅವರು ಮಾತನಾಡಿ, ಬದಲಾಗುತ್ತಿರುವ ಹವಾಮಾನ ವೈಪರಿತ್ಯಕ್ಕನುಗುಣವಾಗಿ ರೈತರು ಬೆಳೆ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು.
ಆಧುನಿಕ ತಂತ್ರಜ್ಞಾನಗಳಿಗಾಗಿ ಕೃಷಿ ವಿಶ್ವವಿದ್ಯಾಲಯದೊಂದಿಗೆ ನಿರಂತರ ಸಂಪರ್ಕದಲ್ಲಿರಲು ತಿಳಿಸಿದರು.
ಧಾರವಾಡ ಕೃಷಿ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿಯ ಸದಸ್ಯ ವೈ.ಎನ್. ಪಾಟೀಲ ಅವರು ಮಾತನಾಡಿ, ಕೃಷಿಯಲ್ಲಿ ಹೆಚ್ಚಿನ ಲಾಭ ಪಡೆಯಲು ಕೃಷಿ ಸಂಬಂಧಿತ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿ, ರೈತರೊಂದಿಗೆ ತಮ್ಮ ಕುರಿ ಮತ್ತು ಮೇಕೆ ಸಾಕಾಣಿಕೆ ಘಟಕದ ನಿರ್ವಹಣಾ ಅನುಭವ ಹಂಚಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಬಸವರಾಜ ಸಿ. ಕುಂದಗೋಳ ಅವರು ಮಾತನಾಡಿ, ರೈತರು ನೂತನ ಕೃಷಿ ತಾಂತ್ರಿಕತೆಗಳನ್ನು ಅಳವಡಿಸಿಕೊಂಡು ಕೃಷಿಯನ್ನು ಸುಸ್ಥಿರಗೊಳಿಸಿಕೊಳ್ಳಲು ತಿಳಿಸಿದರು.
ಪ್ರಗತಿಪರ ರೈತ ಮಹಿಳೆ ಹಾಗೂ ವೃತ್ತಿಯಲ್ಲಿ ವೈದ್ಯರಾಗಿರುವ ಡಾ. ದ್ರಾಕ್ಷಾಯಿಣಿ ರಾಮನಗೌಡ ಅವರು ತಮ್ಮ ಕೃಷಿ ಅನುಭವಗಳೊಂದಿಗೆ ಪ್ರತಿ ರೈತ ಕುಟುಂಬದಲ್ಲಿ ದೇಸಿ ಹಸು ಸಾಕಾಣಿಕೆ ಮಾಡಿ ಹಂತ ಹಂತವಾಗಿ ಸಾವಯವ ಕೃಷಿಗೆ ಬದಲಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲೆಯ 7 ಪ್ರಗತಿಪರ ರೈತ, ರೈತ ಮಹಿಳೆಯರಿಗೆ ಅವರ ಕೃಷಿ ಸಾಧನೆಗಳನ್ನು ಗುರುತಿಸಿ ಆತ್ಮ ಯೋಜನೆಯಡಿ ಸನ್ಮಾನ ಮಾಡಲಾಯಿತು.
ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕೃಷಿ ವಿಜ್ಞಾನ ಕೇಂದ್ರಗಳ ನೋಡಲ್ ಅಧಿಕಾರಿಗಳಾದ ಡಾ. ಶ್ರೀಪಾದ ಕುಲಕರ್ಣಿ, ಐ.ಸಿ.ಎ.ಆರ್.-ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ.ಎಸ್.ಎ. ಬಿರಾದಾರ, ತೋಟಗಾರಿಕೆ ವಿಶ್ವ ವಿದ್ಯಾಲಯದ ಕುಂಬಾಪುರ ಫಾರ್ಮನ ಬೇಸಾಯ ಶಾಸ್ತ್ರಜ್ಞರಾದ ಡಾ. ಆನಂದ ಮಾಸ್ತಿಹೊಳಿ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಅತಿಥಿ ಉಪನ್ಯಾಸ ನೀಡಿದರು.