ಧಾರವಾಡ ಕೃಷಿ ಇಲಾಖೆಯಿಂದ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಸಿರಿಧಾನ್ಯ ಹಾಗೂ ಸಾವಯವ ಮೇಳಕ್ಕೆ ಜನಸಾಮಾನ್ಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ವಿವಿಧ ತಳಿಯ ಸಿರಿಧಾನ್ಯಗಳ ಪ್ರದರ್ಶನ ಹಾಗೂ ಮಾರಾಟದ ಮಳಿಗೆಗಳನ್ನು ಮೇಳದಲ್ಲಿ ಆಯೋಜಿಸಲಾಗಿದೆ.
ಕೃಷಿ ವಿಶ್ವವಿದ್ಯಾಲಯದ ಕೃಷಿ ವಿಜ್ಞಾನ ಕೇಂದ್ರ, ವಿವಿಧ ರೈತ ಉತ್ಪಾದಕ ಕಂಪನಿಗಳು, ಸ್ವಸಹಾಯ ರೈತ ಉತ್ಪಾದಕ ಕಂಪನಿಗಳು, ಸ್ವಸಹಾಯ ಸ್ತ್ರೀಶಕ್ತಿ ಗುಂಪುಗಳು, ಖಾಸಗಿ ಕಂಪನಿಗಳು ವಿವಿಧ ಸಿರಿಧಾನ್ಯ ಹಾಗೂ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ.
ರಾಗಿ, ಸಜ್ಜೆ, ನವಣೆ, ಅರಕ, ಉದಲು, ಕೊರಲು, ಸಾವೆ, ಬರಗು, ಮುಂತಾದ ಸಿರಿಧಾನ್ಯಗಳಿಂದ ಬ್ರೆಡ್, ಕುಕಿಸ್,ಮಿಲೆಟ್ ಡೋನೆಟ್, ಮಿಲೆಟ್ ರಸ್ಕ್, ಮಿಲೆಟ್ ರೊಟ್ಟಿ ಹಿಟ್ಟು ಸೇರಿ ವಿವಿಧ ಖಾದ್ಯಗಳು ಪ್ರದರ್ಶನ ಹಾಗೂ ಮಾರಾಟಕ್ಕೆ ಲಭ್ಯವಿದೆ.
ಧಾರವಾಡದ ಧರ್ಮಸ್ಥಳ ಮಂಜುನಾಥೇಶ್ವರ ಸಿರಿಧಾನ್ಯ ಸಂಸ್ಥೆಯಿಂದ ಒಟ್ಟು 40 ಉತ್ಪನ್ನಗಳನ್ನು ಉತ್ಪಾದಿಸಲಾಗುತ್ತಿದೆ.
ಸಿರಿ ಧರ್ಮಸ್ಥಳ ಮಿಲೆಟ ವತಿಯಿಂದ 3 ರೈತ ಉತ್ಪಾದಕರ ಕಂಪನಿಗಳನ್ನು ಆರಂಭಿಸಿದ್ದು 3 ಸಾವಿರ ರೈತರು ಕೊಪ್ಪಳ, ದಾವಣಗೆರೆ, ಚಿತ್ರದುರ್ಗ ಮುಂತಾದ ಕಡೆಗಳಲ್ಲಿ ಸಿರಿಧಾನ್ಯಗಳನ್ನು ಬೆಳೆಸುತ್ತಿದ್ದಾರೆ.
ಕುಂದಗೋಳದ ತೀರ್ಥ ಗ್ರಾಮದ ದೇವಧಾನ್ಯ ರೈತ ಉತ್ಪಾದಕರ ಕಂಪನಿಯು ವ್ಯವಸ್ಥಾಪಕಿ ಬೀಬಿಜಾನ್ ಮಾತನಾಡಿ ತಾವು ಸುತ್ತಲಿನ ರೈತರಿಗೆ 80 ಕ್ವಿಂಟಾಲ್ ವಿವಿಧ ಸಿರಿಧಾನ್ಯಗಳನ್ನು ಬಿತ್ತಲು ವಿತರಿಸಿದ್ದು, ತಾವೇ ಖರೀದಿಸುವುದಾಗಿ ತಿಳಿಸಿದರು.
ಅತ್ಯುತ್ತಮ ಸಹಜ ಹೆಲ್ತಿಮಿಕ್ಸ್ ಬಹುಬೇಡಿಕೆಯಲ್ಲಿದೆಯೆಂದರು. ಸಿರಿಧಾನ್ಯ ಮೇಳವನ್ನು ಧಾರವಾಡದ ಕರ್ನಾಟಕ ಕಾಲೇಜು ಆವರಣದಲ್ಲಿ ಏರ್ಪಡಿಸಲಾಗಿದೆ.
ರಾಗಿಯಲ್ಲಿ ಕಪ್ಪು ಸಾಸಿವೆ, 140 ದಿನದ ರಾಗಿ, ತೈದಲು ರಾಗಿ, ಗೆಜ್ಜೆರಾಗಿ, ಯಾಡ ರಾಗಿ, ಕರಿಕಡ್ಡಿ ರಾಗಿ, ನೇಪಾಳ ರಾಗಿ, ಕೆಂಪು, ನವಣೆ, ಜಗಳೂರು ರಾಣಿ, ಐಯನರಾಣಿ, ಕೋಳಿಮೊಟ್ಟೆ ರಾಗಿ, ಪಿಚಕಡ್ಡಿ ರಾಗಿ, ಗುಚ್ಚರಾಗಿ, ಕೊಕ್ಕರೆವಾರೆ ರಾಗಿ, ಜೇನುಗೂಡು ರಾಗಿ ಇಷ್ಟು ವೈವಿಧ್ಯಮಯ ಪ್ರಜಾತಿಗಳು ಕಂಡವು.