ಹುಬ್ಬಳ್ಳಿಯ ಲಕ್ಷ್ಮೀ ಗೋಲ್ಡ್ ಪ್ಯಾಲೇಸ ರವರು ಬಂಗಾರ ಹಿಂದಿರುಗಿಸದೇ ಸತಾಯಿಸಿ ಸೇವಾ ನ್ಯೂನ್ಯತೆ ಎಸಗಿರುತ್ತಾರೆಂದು ಧಾರವಾಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ಗ್ರಾಹಕರೊಬ್ಬರು ದೂರನ್ನು ಸಲ್ಲಿಸಿದ್ದರು.
ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕಿನ ಗುರ್ಲ ಹೊಸೂರ, ಚಿದಂಬರ ನಗರದ ನಿವಾಸಿಯಾದ ಸತೀಶ ಇಜಂತಕರ ಎಂಬುವವರು ತಮ್ಮ ಮಗಳಾದ ಬನಶ್ರೀ ಹೆಸರಿನಲ್ಲಿ ಆದಿತ್ಯ ಗೋಲ್ಡ್ ಪರ್ಚೇಜ್ ಯೋಜನೆಯಡಿ ಒಟ್ಟು 19 ಕಂತುಗಳಲ್ಲಿ ರೂ.2,00,000/- ಬಂಗಾರದ ಆಭರಣ ಪಡೆಯಲು ಕಟ್ಟಿದ್ದರು.
ಸದರಿ ಹಣಕ್ಕೆ ಸಮಾನಾಂತರವಾಗಿ ಒಟ್ಟು 64,011 ಗ್ರಾಂ. ಬಂಗಾರವನ್ನು ಯೋಜನಾ ಅವಧಿ ಮುಕ್ತಾಯವಾದರೂ ಸದರಿ ಯೋಜನೆಯ ನಿಯಮಾನುಸಾರ ತನಗೆ ನೀಡಿಲ್ಲವೆಂದು ಅವರು ತಿಳಿಸಿದ್ದಾರೆ.
ಸದರಿ ದೂರಿನ ಬಗ್ಗೆ ಆಯೋಗದ ಅಧ್ಯಕ್ಷರಾದ ಈಶಪ್ಪ ಭೂತೆ ಹಾಗೂ ವಿ.ಅ. ಬೋಳಶೆಟ್ಟಿ ಮತ್ತು ಪಿ.ಸಿ.ಹಿರೇಮಠ ಅವರು ಕೂಲಂಕುಷವಾಗಿ ವಿಚಾರಣೆ ನಡೆಸಿದ್ದಾರೆ.
ಯೋಜನೆಯ ಒಪ್ಪಂದದಂತೆ ದೂರುದಾರರಿಂದ ಹಣ ಪಡೆದು ಅದಕ್ಕೆ ಸಮಾನಾಂತರ ಮೌಲ್ಯದ ಬಂಗಾರ ಕೊಡದೇ ಲಕ್ಷ್ಮೀ ಗೋಲ್ಡ್ ಪ್ಯಾಲೇಸ ರವರು ದೂರುದಾರನಾದ ತನ್ನ ಗ್ರಾಹಕನಿಗೆ ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ತೀರ್ಪು ನೀಡಿದ್ದಾರೆ.
ಅಗತ್ಯವಿರುವ ಹೆಚ್ಚಿನ ಹಣ ಪಡೆದು ಫಿರ್ಯಾದಿದಾರರಿಗೆ 64,011 ಗ್ರಾಂ. ತೂಕದ 24 ಕ್ಯಾರೇಟನ ಚಿನ್ನ ನೀಡುವಂತೆ ಹಾಗೂ ಸೇವಾ ನ್ಯೂನ್ಯತೆ ಎಸಗಿದ್ದಕ್ಕಾಗಿ ಪರಿಹಾರ ನೀಡುವಂತೆ ಆದೇಶ ಹೊರಡಿಸಿದ್ದಾರೆ.
ಫಿರ್ಯಾದಿಗೆ ಆಗಿರುವ ತೊಂದರೆ ಹಾಗೂ ಮಾನಸಿಕ ಹಿಂಸೆಗೆ ರೂ.25,000/- ಪರಿಹಾರ ಹಾಗೂ ರೂ.10,000/- ಪ್ರಕರಣದ ಖರ್ಚು ವೆಚ್ಚ ನೀಡಲು ಆದೇಶಿಸಿದ್ದಾರೆ.