ಇಂದು ಧಾರವಾಡದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮ ಮೆಗಾ ನಾಟಕದ ಉದ್ಘಾಟನೆ

ವೀರರಾಣಿ ಕಿತ್ತೂರು ಚೆನ್ನಮ್ಮ ಮೆಗಾ ನಾಟಕವನ್ನು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿವರು ಇಂದು ಸಂಜೆ 6 ಗಂಟೆಗೆ ಉದ್ಘಾಟಿಸಲಿದ್ದಾರೆ ಎಂದು ಧಾರವಾಡ ರಂಗಾಯಣದ ನಿರ್ದೇಶಕ ರಮೇಶ ಪರವಿನಾಯ್ಕರ ತಿಳಿಸಿದರು.

ಧಾರವಾಡ ರಂಗಾಯಣ, ಜಿಲ್ಲಾಡಳಿತ ಹಾಗೂ ಧ್ವನಿ ಟ್ರಸ್ಟ್ಟ್ ಧಾರವಾಡ ಇವರ ಸಹಯೋಗದೊಂದಿಗೆ ಇಂದು ಮತ್ತು ನಾಳೆ ಸಂಜೆ 6 ಗಂಟೆಗೆ ಧಾರವಾಡದ ಕರ್ನಾಟಕ ಕಾಲೇಜು ಆವರಣದಲ್ಲಿ ನಾಟಕದ ಪ್ರದರ್ಶನ ನಡೆಯಲಿದೆ.

ಅವರು ನಿನ್ನೆ ಬೆಳಿಗ್ಗೆ ಕೆಸಿಡಿ ಆವರಣದಲ್ಲಿ ನಿರ್ಮಿಸಿರುವ ಮೆಗಾ ನಾಟಕದ ಮುಖ್ಯ ವೇದಿಕೆಯ ಮುಂಭಾಗದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದರು. 

ಭಾರತೀಯ ವಿಶೇಷವಾಗಿ ಕನ್ನಡ ರಂಗಭೂಮಿಯಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮ ಅಂತಹ ಐತಿಹಾಸಿಕ ನಾಟಕದ ಮೆಗಾ ಪ್ರದರ್ಶನವನ್ನು ಧಾರವಾಡ ರಂಗಾಯಣದಿಂದ ಪ್ರಥಮ ಭಾರಿಗೆ ಆಯೋಜಿಸಲಾಗಿದೆ.

ವೀರರಾಣಿ ಕಿತ್ತೂರ ಚನ್ನಮ್ಮನ ಕುರಿತ ವಾಸ್ತವ ಸಂಗತಿಗಳನ್ನು ಅನೇಕ ವಿದ್ವಾಂಸರು, ಸಂಶೋಧಕರು ಮತ್ತು ರಂಗ ತಜ್ಷರು ಪರಿಶೀಲಿಸಿ, ಪ್ರಸ್ತುತ ನಡೆಸುತ್ತಿದ್ದಾರೆ.

ರಾಜ್ಯ ಸರ್ಕಾರ ಅನುದಾನ ನೀಡಿದ್ದು ಇನ್ನು ಹೆಚ್ಚಿನ ಅನುದಾನದ ಅಗತ್ಯವಿದ್ದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು. ಇಂದು ಮತ್ತು ನಾಳೆ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ನೀಡಲು ತೀರ್ಮಾನಿಸಲಾಗಿದೆ.

ನಾಟಕಕ್ಕೆ ಪ್ರೋತ್ಸಾಹದಾಯಕವಾಗಿ ಆರ್ಥಿಕ ನೆರವಾಗಲು ಟಿಕೇಟ್‍ಗಳನ್ನು ಮಾಡಲಾಗಿದ್ದು ವಿವಿಧ ಸರ್ಕಾರಿ ಕಚೇರಿ, ಶಾಲಾ ಕಾಲೇಜುಗಳಿಗೆ ನೀಡಲಾಗಿದೆ. ಸಾರ್ವಜನಿಕರು ನಾಟಕ ಪ್ರದರ್ಶನವನ್ನು ವೀಕ್ಷಿಸಿ ಪ್ರೋತ್ಸಾಹಿಸಬೇಕೆಂದು ಅವರು ಹೇಳಿದರು.

ಸಂಶೋಧಕ ಹಾಗೂ ಕನ್ನಡ ವಿದ್ವಾಂಸ ಡಾ.ವೀರಣ್ಣ ರಾಜೂರ ಅವರು ಮಾತನಾಡಿ, ಅಧ್ಬುತವಾದ ರಂಗ ಸಜಿಕ್ಕೆಯಲ್ಲಿ ಅದ್ದೂರಿ ಪ್ರಯೋಗವನ್ನು ಮಾಡಲಾಗುತ್ತಿದೆ. ವೀರರಾಣಿ ಕಿತ್ತೂರ ಚನ್ನಮ್ಮನ ತ್ಯಾಗ, ಬಲಿದಾನ ಮತ್ತು ಸಾಹಸಗಳನ್ನು ಇಂದಿನ ಯುವ ಪಿಳಿಗೆಗೆ ಪ್ರೇರಣೆ ಆಗುವಂತೆ ನಾಟಕವನ್ನು ಹೆಣೆಯಲಾಗಿದೆ.

ಉಹಾಪೋಹಗಳ ಹೊರತಾಗಿಯು ಸಂಶೋಧಕರು, ವಿದ್ವಾಂಸರು ಶಿಫಾರಸ್ಸು ಮಾಡಿದ ವಾಸ್ತವ ಅಂಶಗಳನ್ನು ಮೇಘ ನಾಟಕದಲ್ಲಿ ಅಳವಡಿಸಿಕೊಳ್ಳಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಗದಗ ಡಂಬಳ ತೋಂಟದಾರ್ಯ ಮಠದ ಜಗದ್ಗುರು ತೋಂಟದ ಡಾ. ಸಿದ್ಧರಾಮ ಮಹಾಸ್ವಾಮಿಗಳು, ಧಾರವಾಡ ಮುರುಘಾಮಠದ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು ಹಾಜರಿರುತ್ತಾರೆ.

ಹುಕ್ಕೇರಿ ಹಿರೇಮಠದ ಷ.ಬ್ರ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು, ಕಿತ್ತೂರು ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೇಂದ್ರ ಮಹಾಸ್ವಾಮಿಗಳು ಸಾನಿಧ್ಯ ವಹಿಸುವರು.

ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಅವರು ಉದ್ಘಾಟಿಸುವರು. ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ ಜೋಶಿ, ವಿಧಾನ ಪರಿಷತ್ತ ಸಭಾಪತಿ ಬಸವರಾಜ ಹೊರಟ್ಟಿ ಅವರು ಉಪಸ್ಥಿತರಿರುವರು.

Share this article!

Leave a Reply

Your email address will not be published. Required fields are marked *

error: Content is protected !!