ಅಂತರಾಷ್ಟ್ರೀಯ ದತ್ತು ಮಾಸಾಚರಣೆ, ಹಾಗೂ ಸಂವಿಧಾನ ದಿನಾಚರಣೆಯನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಧಾರವಾಡದಲ್ಲಿ ನಿನ್ನೆ ಆಯೋಜಿಸಲಾಗಿತ್ತು.
ಕಾನೂನು ಸೇವೆಗಳ ಪ್ರಾಧಿಕಾರವು ಸಾರ್ವಜನಿಕರಿಗೆ ಉಚಿತ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ ಹಮ್ಮಿಕೊಳ್ಳುತ್ತಿದ್ದು, ಸಮಾಜದಲ್ಲಿ ಕಟ್ಟಕಡೆಯ ಜನರಿಗೂ ಸಹ ತಲುಪುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ.
ವೈದ್ಯಕೀಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲು ಅಣಿಯಾಗುತ್ತಿರುವ ನರ್ಸಿಂಗ ವಿದ್ಯಾಥಿಗಳಿಗೆ ಕಾನೂನು ಅರಿವು ನೆರವು ಅವಶ್ಯಕತೆ ಇದೆ ಎಂದು ಮನಗಂಡು ತಮ್ಮ ಕಾಲೇಜಿನಲ್ಲಿ ಈ ಒಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಈ ಹಿನ್ನೆಲೆಯಲ್ಲಿ ಎಲ್ಲ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆಯಬೇಕು. ನಮ್ಮ ಸಂವಿಧಾನವು ಸಾಕಷ್ಟು ಹಕ್ಕುಗಳನ್ನು ನೀಡಿದ್ದು, ಅದರ ಜೊತೆಗೆ ಕರ್ತವ್ಯಗಳನ್ನು ಕೂಡ ನಿರ್ವಹಿಸಲು ತಿಳಿಸಿದೆ.
ನಮ್ಮ ಕರ್ತವ್ಯಗಳನ್ನು ಸರಿಯಾಗಿ ನಿಭಾಯಿಸಿದ್ದಲ್ಲಿ ಉತ್ತಮವಾದಂತಹ ಸಮಾಜವನ್ನು ನಿರ್ಮಿಸಲು ಸಾಧ್ಯ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶೆ ಪುಷ್ಪಲತಾ ಸಿ.ಎಮ್. ಅವರು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿ ಸ್ಥಾನವನ್ನು ವಹಿಸಿದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಆರ್.ಎಮ್ ಕಂಟೆಪ್ಪಗೌಡ್ರ ಅವರು ಮಾತನಾಡಿ, ನಮ್ಮ ಇಲಾಖೆಯಿಂದ ದತ್ತು ಪ್ರಕ್ರಿಯೆ ಜಾರಿಯಲ್ಲಿದೆ.
ಯಾವುದೇ ಆಸ್ಪತ್ರೆಯವರು ಕಾನೂನು ಬಾಹಿರ ದತ್ತು ನೀಡಿದಲ್ಲಿ ಬಾಲನ್ಯಾಯಕಾಯ್ದೆ 2015 ರ ಪ್ರಕಾರ 7 ವರ್ಷ ಜೈಲು ಶಿಕ್ಷೆ 1 ಲಕ್ಷ ರೂಪಾಯಿ ದಂಡ ವಿಧಿಸಬಹುದಾಗಿದೆ.
ಇಂತಹ ಪ್ರಕರಣಗಳು ಕಂಡು ಬಂದಲ್ಲಿ ಕೂಡಲೇ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಪೊಲೀಸ್ ಇಲಾಖೆಗಳಿಗೆ ತಿಳಿಸುವ ಮೂಲಕ ಒಂದು ಮಗುವಿನ ಭವಿಷ್ಯವನ್ನು ರೂಪಿಸುವಲ್ಲಿ ಕೈಜೋಡಿಸಬೇಕು.
ಕಾನೂನು ಪ್ರಕ್ರಿಯೆ ಮೂಲಕ ಮಗುವನ್ನು ದತ್ತು ಪಡೆದಲ್ಲಿ ಜೀವನ ಸುದಂರವಾಗಿರುತ್ತದೆ ದತ್ತು ಪ್ರಕ್ರಿಯೆಯು ಒಂದು ಕಾನೂನು ಬದ್ಧ ಪ್ರಕ್ರಿಯೆಯಾಗಿದ್ದು, ಪಾರದರ್ಶಕವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ನರ್ಸಿಂಗ ಕಾಲೇಜಿನ ಪ್ರಾಂಶುಪಾಲರಾದ ಡೇವಿಡ್ ಎ. ಕೋಲಾ ಅವರು ಕಾನೂನಿನ ಅರಿವು ವಿದ್ಯಾರ್ಥಿಗಳಿಗೆ ಅತೀ ಅವಶ್ಯಕವಾಗಿದೆ.
ನಮ್ಮ ಕಾಲೇಜಿನಲ್ಲಿ ಈ ಒಂದು ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಬಹಳ ಸೂಕ್ತವಾಗಿದೆ. ಕಾರ್ಯಕ್ರಮದಲ್ಲಿ ಕಾನೂನಿನ ಅರಿವಿನ ಬಗ್ಗೆ ಎಲ್ಲ ವಿದ್ಯಾರ್ಥಿಗಳು ಸದುಪಯೋಗಪಡೆದುಕೊಳ್ಳಬೇಕೆಂದು ತಿಳಿಸಿದರು.
ದತ್ತು ಮಾರ್ಗಸೂಚಿ ಹಾಗೂ ಮಕ್ಕಳಿಗಾಗಿರುವ ವಿವಿಧ ಕಾನೂನುಗಳ ಕುರಿತು ಅಸಾಂಸ್ಥಿಕ ರಕ್ಷಣಾಧಿಕಾರಿ ಪ್ರಕಾಶ ಕೊಡ್ಲಿವಾಡ ಹಾಗೂ ಲೀಗಲ್ ಕಂ ಪ್ರೊಬೆಶನ್ ಆಫೀಸರ್ ನೂರಜಹಾನ್ ಕಿಲ್ಲೇದಾರ ಅವರು ಉಪನ್ಯಾಸ ನೀಡಿದರು.
ಸ್ನಾತಕೋತ್ತರ ವಿದ್ಯಾರ್ಥಿನಿ ಪದ್ಮಶ್ರೀ ನಿರೂಪಿಸಿದರು. ಜಯಮ್ಮ ವಂದಿಸಿದರು, ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ತಹಶೀಲ್ದಾರ ಮಹಮ್ಮದ ಅಲಿ, ಉಪನ್ಯಾಸಕ ನಾಗೇಶ ಹೆಜ್ಜೆವಾಡಿಮಠ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ನರ್ಸಿಂಗ ಕಾಲೇಜ ವಿದ್ಯಾರ್ಥಿಗಳು, ಬೋಧಕ, ಬೋಧಕೇತರ ಸಿಬ್ಬಂದಿಗಳು ಹಾಜರಿದ್ದರು.
ಧಾರವಾಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ. ಮಕ್ಕಳ ರಕ್ಷಣಾ ನಿರ್ದೆಶನಾಲಯ, ಬೆಂಗಳೂರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಧಾರವಾಡ. ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ನರ್ಸಿಂಗ ಕಾಲೇಜು, ಧಾರವಾಡ ಇವರ ಸಹಯೋಗದಲ್ಲಿ ಆಯೋಜಿಸಲಾಗಿತ್ತು.