ಸ್ವ-ಸಹಾಯ ಸಂಘದ ಮಹಿಳಾ ಸದಸ್ಯರಿಗೆ 6 ದಿನಗಳ ಉದ್ಯಮಶೀಲತಾಭಿವೃದ್ಧಿ ತರಬೇತಿಯನ್ನು ನಿನ್ನೆ ಚಾಲನೆ ನೀಡಲಾಯಿತು.
ಕರ್ನಾಟಕ ರಾಜ್ಯ ಗ್ರಾಮಿಣ ಜೀವನೋಪಾಯ ಉತ್ತೇಜನ ಸಂಸ್ಥೆಯ (ಕೆ.ಎಸ್.ಆರ್.ಎಲ್.ಪಿ.ಎಸ್) ರಾಜ್ಯ ಅಭಿಯಾನ ನಿರ್ದೇಶಕರಾದ ರಾಗಪ್ರಿಯ ಅವರು ಧಾರವಾಡ, ಮೈಸೂರು ಹಾಗೂ ಬಳ್ಳಾರಿ ಜಿಲ್ಲೆಯ ತರಬೇತಿಗಳಿಗೆ ಚಾಲನೆ ನೀಡಿದರು.
ಉದ್ಯಮಶೀಲತೆಯ ಮಹತ್ವ, ಸ್ವ-ಸಹಾಯ ಸಂಘದ ಗ್ರಾಮೀಣ ಮಹಿಳೆಯರು ತಯಾರಿಸಿದ ಉತ್ಪನ್ನಗಳಿಗೆ ಈಗಾಗಲೇ ಆನ್‍ಲೈನ್ ಮಾರ್ಕೆಟಿಂಗ್ ವೇದಿಕೆಗಳಾದ ಅಮೆಜಾನ್, ಫ್ಲಿಪ್‌ಕಾರ್ಟ್ ಹಾಗೂ ಮಿಶೋ ಜೊತೆಗೆ ಸರ್ಕಾರವು ಒಪ್ಪಂದ ಮಾಡಿಕೊಂಡಿದೆ.
ರಾಜ್ಯದ ಅನೇಕ ಮಹಿಳೆಯರು ತಯಾರಿಸಿದ ಉತ್ಪನ್ನಗಳಿಗೆ ಆನ್‍ಲೈನ್ ಮಾರುಕಟ್ಟೆ ಸೌಲಭ್ಯವನ್ನು ಸರ್ಕಾರದ ವತಿಯಿಂದ ಮಾಡಿಸಿಕೊಡಲಾಗುತ್ತಿದೆ ಎಂದು ತಿಳಿಸಿದರು.
ಎಲ್ಲಾ ಮಹಿಳಾ ಉದ್ಯಮ ಆಕಾಂಕ್ಷಿಗಳು ಉದ್ಯಮಶೀಲತಾ ತರಬೇತಿಯ ಪ್ರತಿಯೊಂದು ವಿಷಯಗಳನ್ನು ಪರಿಣಿತ ತಜ್ಞರಿಂದ ಸಿಡಾಕ್ ಸಂಸ್ಥೆಯಿಂದ ಪಡೆದು ಎಲ್ಲ ಮಹಿಳೆಯರು ಸ್ವಾವಲಂಬಿಗಳಾಗಲು ಅವರು ಕರೆಕೊಟ್ಟರು.
ಸಿಡಾಕ್ ನಿರ್ದೇಶಕ ಬಸವರಾಜ ಗೊಟೂರ ಅವರು ಇಡಿಪಿ ತರಬೇತಿ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಬಿ.ಎಸ್. ಮೂಗನೂರುಮಠ ಅವರು ಸರ್ಕಾರವು ಪಟ್ಟಿ ಮಾಡಿದ ಅನೇಕ ಸಂಭಾವ್ಯ ಚಟುವಟಿಕೆಗಳ ಬಗ್ಗೆ ಮಹಿಳೆಯರಿಗೆ ಅರಿವು ನೀಡಿದರು.
ಧಾರವಾಡ ಜಿಲ್ಲೆಯಲ್ಲಿ ಈಗಾಗಲೇ ಜಿಲ್ಲಾ ಪಂಚಾಯತ್ ವತಿಯಿಂದ ಸಾವಿರಾರು ಮಹಿಳೆಯರಿಗೆ ಉದ್ಯಮಶೀಲತೆ ತರಬೇತಿಯನ್ನು ನೀಡಿದ್ದು, ಅನೇಕ ಮಹಿಳಾ ಸಂಸ್ಥೆಗಳು ಈಗಾಗಲೇ ಆನ್‍ಲೈನ್ ಮಾರುಕಟ್ಟೆ ವ್ಯವಹಾರವನ್ನು ನಡೆಸುತ್ತಿದ್ದಾರೆ ಎಂದರು.
ಜಿಲ್ಲಾ ಅಗ್ರಣೀಯ ಬ್ಯಾಂಕ್‍ನ ವ್ಯವಸ್ಥಾಪಕರಾದ ಪ್ರಭುದೇವ ಎನ್.ಜಿ. ಅವರು ಲಾಭದಾಯಕವಾಗುವ ಚಟುವಟಿಕೆಗಳ ಯೋಜನಾ ವರದಿ ತಯಾರಿಸಿಕೊಂಡು ಬ್ಯಾಂಕ್‍ಗಳಿಗೆ ಸಾಲಕ್ಕಾಗಿ ಬೇಟಿಯಾದರೆ ಸಂಬಂಧಪಟ್ಟ ಬ್ಯಾಂಕ್ ವ್ಯವಸ್ಥಾಪಕರಿಗೆ ಸೂಚಿಸಿ ಸಾಲ ಸೌಲಭ್ಯ ಕೊಡಿಸುವ ವ್ಯವಸ್ಥೆ ಮಾಡಲಾಗುವುದೆಂದು ತಿಳಿಸಿದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಭೀಮಪ್ಪ ಎಮ್.ಎನ್. ಇವರು ಮಾತನಾಡುತ್ತಾ, ಉದ್ಯಮ ಆಕಾಂಕ್ಷಿಗಳು ಧೃಡಸಂಕಲ್ಪ ಹೊಂದಿ ಸ್ಥಳೀಯ ಸಮಸ್ಯೆಗಳನ್ನು ಅರಿತುಕೊಂಡು ಪರಿಹಾರ ನೀಡುವ ಬಗ್ಗೆ ಯೋಚಿಸಬೇಕೆಂದು ಹೇಳಿದರು.
ಸಮಸ್ಯಗಳಿಗೆ ಪರಿಹಾರ ಕೊಡುವಂತಹ ಉದ್ಯೋಗಗಳನ್ನು ಪ್ರಾರಂಭಿಸಲು ಮುಂದೆ ಬಂದಲ್ಲಿ ಶಿಕ್ಷ್ಷಣಾರ್ಥಿಗಳಿಗೆ ಅವಶ್ಯವಿರುವ ಸಾಲ ಹಾಗೂ ರಿಯಾಯಿತಿಗಳನ್ನು ಜಿಲ್ಲಾ ಕೈಗಾರಿಕಾ ಕೇಂದ್ರದ ವತಿಯಿಂದ ನೀಡಲಾಗುವುದೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಿಡಾಕ್‍ನಿಂದ ತರಬೇತಿ ಪಡೆದು ಯಶಸ್ವಿ ಉದ್ದಿಮೆದಾರಳಾದ ಆಶಾ ಕುಲಕರ್ಣಿ ಅವರಿಗೆ ಇಲಾಖೆ ಹಾಗೂ ಸಿಡಾಕ್ ಸಂಸ್ಥೆ ವತಿಯಿಂದ ಅವರು ಸಾಧಿಸಿದ ಯಶಸ್ಸನ್ನು ಸ್ಮರಿಸಿ ಸನ್ಮಾನಿಸಲಾಯಿತು.
ಸಿಡಾಕ್‍ನ ಜಂಟಿ ನಿರ್ದೇಶಕ ಚಂದ್ರಶೇಖರ ಅಂಗಡಿ ವಂದಿಸಿದರು. ಸಿಡಾಕ್ ತರಬೇತಿದಾರರಾದ ಮೌನೇಶ ಬಡಿಗೇರ ಕಾರ್ಯಕ್ರಮ ನಿರೂಪಿಸಿದರು ಹಾಗೂ ರೋಹಿಣಿ ಘಂಟಿ ಕಾರ್ಯಕ್ರಮ ಸಮನ್ವಯಿಸಿದರು.
ಕಾರ್ಯಕ್ರಮದಲ್ಲಿ ಒಟ್ಟು 35 ಸ್ವ-ಸಹಾಯ ಸಂಘದ ಧಾರವಾಡ ತಾಲೂಕಿನ ಮಹಿಳೆಯರು ಭಾಗವಹಿಸಿದ್ದಾರೆ. ಇಂದಿನ ತಾಂತ್ರಿಕ ಅಧಿವೇಶನವನ್ನು ರಾಧಾ ರಾಮದುರ್ಗ ಅವರು ನಡೆಸಿಕೊಟ್ಟರು.
ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳಾದ ಡಾ. ಚಂದ್ರಪ್ಪ ಎಮ್.ಎಸ್. ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.