ಹುಬ್ಬಳ್ಳಿ ಧಾರವಾಡದ ಸಮಗ್ರ ಅಭಿವೃದ್ಧಿಗೆ ಆದ್ಯತೆ: ಮುಖ್ಯಮಂತ್ರಿ

ರಾಜ್ಯದ ಎರಡನೇ ಪ್ರಮುಖ ನಗರವಾದ ಹುಬ್ಬಳ್ಳಿ ಧಾರವಾಡದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

ಹುಬ್ಬಳ್ಳಿ ಧಾರವಾಡ ಅವಳಿ ನಗರಗಳ ಬೆಳೆವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಮೂಲಸೌಕರ್ಯ, ಉದ್ಯಮ ಅಭಿವೃದ್ದಿ, ಹಾಗು ನಗರದ ಸಮಸ್ಯೆ ಪರಿಹಾರಕ್ಕೆ ಆದ್ಯತೆ ನೀಡಲಾಗುವುದು ಎಂದು ಅವರು ತಿಳಿಸಿದರು.

ಮುಖ್ಯಮಂತ್ರಿಯವರು ಅತಿವೃಷ್ಟಿಯಿಂದಾಗಿ ಯಲ್ಲಾಪುರ ತಾಲೂಕಿನ ಅರಬೈಲ್ ಘಾಟ್ ನಲ್ಲಿ ಉಂಟಾದ ಹಾನಿ ವೀಕ್ಷಣೆ ಮಾಡಲು ಹೋಗುವ ಮುನ್ನ ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.

‘ಹುಬ್ಬಳ್ಳಿ ನನಗೆ ಅತ್ಯಂತ ಪ್ರಿಯವಾದ ಊರು. ಇಲ್ಲಿ ನನಗೆ ಅಪಾರ ಸಂಖ್ಯೆಯಲ್ಲಿ ಸ್ನೇಹಿತರ ಬಳಗ ಇದೆ. ಮುಖ್ಯಮಂತ್ರಿಯಾಗಿ ನಾನು ಹುಬ್ಬಳ್ಳಿಗೆ ಬರುತ್ತೇನೆ ಎಂದು ಅಂದುಕೊಂಡಿರಲಿಲ್ಲ’ ಎಂದು ಅವರು ಹೇಳಿದರು.

ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ಹಾಗು ಹುಬ್ಬಳ್ಳಿ ಧಾರವಾಡದ ಶಾಸಕರೊಂದಿಗೆ ಚರ್ಚಿಸಿ ಅವರ ಸಲಹೆಯಂತೆ ನಗರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಅವರು ಹೇಳಿದರು.

ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜನಿಸಿದ್ದು ಹುಬ್ಬಳ್ಳಿಯಲ್ಲಿ. ಅವರು ತಮ್ಮ ಶಾಲಾ ವಿದ್ಯಾಭ್ಯಾಸವನ್ನು ಹುಬ್ಬಳ್ಳಿಯ ದೇಶಪಾಂಡೆ ನಗರದ ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪೂರೈಸಿದ್ದಾರೆ.

ನಂತರ ತಮ್ಮ ಪಿಯುಸಿ ವಿದ್ಯಾಭ್ಯಾಸವನ್ನು ಪಿ.ಸಿ.ಜಾಬಿನ್ ಕಾಲೇಜಿನಲ್ಲಿ ಮುಗಿಸಿ (ವಿಜ್ಞಾನ ವಿಭಾಗ), ಹುಬ್ಬಳ್ಳಿಯ ಬಿ.ವಿ.ಭೂಮರೆಡ್ಡಿ ತಾಂತ್ರಿಕ ಮಹಾವಿದ್ಯಾಲಯದಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ.

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಪ್ರಥಮ ಬಾರಿಗೆ ಬಸವರಾಜ ಬೊಮ್ಮಾಯಿ ಅವರು ಹುಬ್ಬಳ್ಳಿಗೆ ಆಗಮಿಸಿದ್ದಾರೆ.‌ ಹುಬ್ಬಳ್ಳಿಯ ಅಮರಗೋಳದಲ್ಲಿ ತಾಯಿ ಗಂಗಮ್ಮ ಎಸ್.ಬೊಮ್ಮಾಯಿ ಹಾಗೂ ತಂದೆ ಮಾಜಿ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ಅವರ ಸಮಾಧಿಗಳಿಗೆ ಪೂಜೆ ಸಲ್ಲಿಸಿ, ಗೌರವ ಸಮರ್ಪಿಸಿದರು.

ಹುಬ್ಬಳ್ಳಿ ಧಾರವಾಡದ ಸಮಗ್ರ ಅಭಿವೃದ್ಧಿಗೆ ಆದ್ಯತೆ: ಮುಖ್ಯಮಂತ್ರಿ
ಮುಖ್ಯಮಂತ್ರಿಗಳು ತಮ್ಮ ತಂದೆ, ತಾಯಿಯವರ ಸಮಾಧಿಗೆ ಗೌರವ ಸಮರ್ಪಿಸಿದರು.

ನಂತರ ಅವರು ಹುಬ್ಬಳ್ಳಿಯ ರಂಭಾಪುರಿ ಕಲ್ಯಾಣ ಮಂಟಪದಲ್ಲಿ ಇಂದು ರಂಭಾಪುರಿ ಪೀಠದ ಪರಮಪೂಜ್ಯ ಡಾ. ವೀರಸೋಮೇಶ್ವರ ಜಗದ್ಗುರುಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

Share this article!

Leave a Reply

Your email address will not be published. Required fields are marked *

error: Content is protected !!