ಗಿನ್ನೆಸ್ ದಾಖಲೆಗೆ ಧಾರವಾಡದ ಯುವ ಕಲಾವಿದ ಅಮರ್ ಕಾಳೆ

ಒಂದು ನಿಮಿಷದ ಅವಧಿಯಲ್ಲಿ 98 ಬಾರಿ ಹಸ್ತ ಮುದ್ರಿಕೆ ಕಲೆಯನ್ನು ನಿರ್ಮಿಸಿದ ಧಾರವಾಡದ ಯುವ ಕಲಾವಿದ ಅಮರ್ ರಾಜು ಕಾಳೆ ಅವರ ಸಾಧನೆ ಗಿನ್ನೆಸ್ ವಿಶ್ವ ದಾಖಲೆಗೆ ಸೇರ್ಪಡೆಯಾಗಿದೆ.

ಆಸಕ್ತಿಯ ಮೂಲಕ ಚಿತ್ರಕಲಾ ಕ್ಷೇತ್ರದಲ್ಲಿ ತಮ್ಮ ಪ್ರತಿಭೆಯನ್ನು ಮೆರೆಯುತ್ತಿರುವ ಯುವಕನ ಸಾಧನೆಯನ್ನು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅವರು ಪ್ರಶಂಸಿಸಿ ಅಭಿನಂದಿಸಿದರು.

ಕಳೆದ 2021ರ ಅಗಷ್ಟ 10ರಂದು ಗಿನ್ನೆಸ್ ವಿಶ್ವ ದಾಖಲೆ ಸಂಸ್ಥೆಯು ಧಾರವಾಡದ ಅರಣ್ಯ ಇಲಾಖೆಯ ಸಮುದಾಯ ಭವನದಲ್ಲಿ ನಿಗದಿಪಡಿಸಿದ್ದ ಪರೀಕ್ಷೆಯಲ್ಲಿ ಸಮಯಪಾಲನೆ, ಸಾಕ್ಷಿ ಮತ್ತಿತರ ಮಾನದಂಡಗಳನ್ನು ಪ್ರಮಾಣೀಕರಿಸುವವರ ಸಮ್ಮುಖದಲ್ಲಿ ಹಸ್ತ ಮುದ್ರಿಕೆಗಳನ್ನು ಮೂಡಿಸಿದ್ದರು.

ಅಮರ್ ಕಾಳೆ ಅವರು ಒಂದು ನಿಮಿಷದ ಅವಧಿಯಲ್ಲಿ 98 ಬಾರಿ ಹಸ್ತ ಮುದ್ರಿಕೆಗಳನ್ನು ಕಲಾತ್ಮಕವಾಗಿ ಕ್ಯಾನವಾಸ್ ಮೇಲೆ ಮೂಡಿಸುವದರ ಜೊತೆಗೆ ಮಧ್ಯ ಭಾಗದಲ್ಲಿ ‘ಕನ್ನಡನಾಡು’ ಎಂಬ ಪದವನ್ನು ಕೂಡ ಬರೆದಿದ್ದರು.

ಇವರ ಪ್ರಯತ್ನವನ್ನು ಸಂಸ್ಥೆಯಿಂದ ಗುರುತಿಸಲ್ಪಟ್ಟಿದ್ದ ಅಧಿಕೃತ ವ್ಯಕ್ತ್ತಿಗಳು ಹಾಗೂ ಹಿರಿಯ ಐಎಫ್‍ಎಸ್ ಅಧಿಕಾರಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್ ಕ್ಷೀರಸಾಗರ ಪ್ರಮಾಣ ಪತ್ರ ನೀಡಿ ಗಿನ್ನೆಸ್ ಸಂಸ್ಥೆಗೆ ಕಳಿಸಿದ್ದರು.

ಗಿನ್ನೆಸ್ ದಾಖಲೆಗಳ ಸಂಸ್ಥೆಯು ಪರಿಶೀಲನೆ ನಡೆಸಿ ಅಮರ್ ಕಾಳೆ ಅವರ ಸಾಧನೆಗೆ ಮನ್ನಣೆ ನೀಡಿ ದಾಖಲೆಗೆ ಸೇರಿಸಿಕೊಂಡಿದೆ. ಇದುವರೆಗೆ ಈ ವಿಭಾಗದಲ್ಲಿನ ದಾಖಲೆಯು ಅರಬ್ ರಾಷ್ಟ್ರದ ಬಳಿ ಇತ್ತು.

ಇದೀಗ ಅದು ಭಾರತದ ಧಾರವಾಡ ಯುವಕನ ಮುಡಿಗೆ ಏರಿದೆ. ಕಲಾವಿದ ಅಮರ್ ಕಾಳೆ ಅವರನ್ನು ಜಿಲ್ಲಾಧಿಕಾರಿ ನಿತೇಶ್ ಕೆ. ಪಾಟೀಲ್ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್ ಕ್ಷೀರಸಾಗರ ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಭಿನಂದಿಸಿದರು.

ಅಮರ್ ಕಾಳೆ ಅವರು ರಚಿಸಿರುವ ನಟ ಪುನೀತ್ ರಾಜಕುಮಾರ, ಗಂಗೂಬಾಯಿ ಹಾನಗಲ್, ಕೃಷ್ಣ ಹಾಗೂ ರಾಧೆ, ನಟರಾಜ, ಮೂಲರಾಮನನ್ನು ಪೂಜಿಸುತ್ತಿರುವ ರಾಘವೇಂದ್ರರು, ಸಿದ್ಧಾರೂಢರು ಸೇರಿದಂತೆ ಅನೇಕ ಆಕರ್ಷಕ ಕಲಾಕೃತಿಗಳನ್ನು ಜಿಲ್ಲಾಧಿಕಾರಿಗಳು ವೀಕ್ಷಿಸಿದರು.

ಜಿಲ್ಲಾಧಿಕಾರಿಗಳು ಮೆಚ್ಚುಗೆ ವ್ಯಕ್ತ ಪಡಿಸಿ, ಧಾರವಾಡದಲ್ಲಿ ಪ್ರದರ್ಶನ ಏರ್ಪಡಿಸಲು ಅವಕಾಶ ಕಲ್ಪಿಸುವುದಾಗಿ ಹೇಳಿದರು.

Share this article!

Leave a Reply

Your email address will not be published. Required fields are marked *

error: Content is protected !!