ಹುಬ್ಬಳ್ಳಿಯ ಗ್ರೀನ್ ಮೊಬಿಲಿಟಿ ಕಾರಿಡಾರ್ ನ ಮೊದಲ ಹಂತ ಶೀಘ್ರದಲ್ಲೇ ಉದ್ಘಾಟನೆ

80 ಕೋಟಿ ರೂ. ವೆಚ್ಚದಲ್ಲಿ 9.2 ಕಿ.ಮೀ. ಉದ್ದದ ಹಸಿರು ಸಂಚಾರಿ ಪಥವನ್ನು (ಗ್ರೀನ್ ಮೊಬಿಲಿಟಿ ಕಾರಿಡಾರ್) ಹುಬ್ಬಳ್ಳಿಯಲ್ಲಿ ಅನುಷ್ಠಾನ ಮಾಡಲಾಗುತ್ತಿದೆ.

ಮೊದಲ ಹಂತದಲ್ಲಿ 7.2 ಕೋಟಿ ವೆಚ್ಚದಲ್ಲಿ 640 ಮೀಟರ್ ಉದ್ದದ ನಾಲಾ‌ ಅಭಿವೃದ್ಧಿ ಹಾಗೂ ಸೈಕಲ್ ಪಾತ್ ನಿರ್ಮಾಣ ಮಾಡಲಾಗಿದೆ.

ನಾಲಾ ಪಕ್ಕದಲ್ಲಿ ಸೈಕಲ್ ಪಾತ್, ಗಾರ್ಡನ್ ಅಭಿವೃದ್ಧಿ ಮಾಡಲಾಗುತ್ತಿದೆ. ಇದರಿಂದ ಸಾರ್ವಜನಿಕರು ಮಧ್ಯರಾತ್ರಿವರೆಗೆ ವಾಕ್ ಮಾಡಬಹುದು. ಯುರೋಪ್ ಯುನಿಯನ್ ದೇಶಗಳಲ್ಲಿ ಕೈಗೊಂಡ ಕಾಮಗಾರಿಗಿಂತ ಭಿನ್ನವಾಗಿದೆ.

Green Mobility Corridor Unkal Naala Hubli ಗ್ರೀನ್ ಮೊಬಿಲಿಟಿ ಕಾರಿಡಾರ್
ಉಣಕಲ್ ನಾಲಾ ಹಸಿರು ಸಂಚಾರಿ ಪಥ (ಗ್ರೀನ್ ಮೊಬಿಲಿಟಿ ಕಾರಿಡಾರ್ )ದ ಚಿತ್ರಣ

ಸ್ಮಾರ್ಟ್ ಸಿಟಿ ಯೋಜನೆಯಡಿ ಭಾರತದ ಮೊದಲ ಗ್ರೀನ್ ಮೊಬಿಲಿಟಿ ಕಾರಿಡಾರ್ ಅನ್ನು ಹುಬ್ಬಳ್ಳಿಯ ಉಣಕಲ್ ನಿಂದ ಗಬ್ಬೂರು ವರೆಗೆ (9.2 ಕಿ.ಮೀ) ಅಭಿವೃದ್ಧಿಪಡಿಸಲಾಗುತ್ತಿದೆ.

ಮುಂದಿನ 15 ದಿನಗಳಲ್ಲಿ ಅಭಿವೃದ್ಧಿಪಡಿಸಿದ 640 ಮೀಟರ್ ಪ್ರದೇಶವನ್ನು ಉದ್ಘಾಟನೆ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕ ಜಗದೀಶ್ ಶೆಟ್ಟರ್ ಹೇಳಿದರು.

ಹುಬ್ಬಳ್ಳಿಯ ಉಣಕಲ್ ನಾಲಾ ಹಿಂಭಾಗದ ಜಲಮಂಡಳಿ ಕಚೇರಿ, ಲಿಂಗರಾಜ ನಗರದ ಹತ್ತಿರ ಕೈಗೊಂಡಿರುವ ಹಸಿರುಪಥ (ಗ್ರೀನ್ ಮೊಬಿಲಿಟಿ ಕಾರಿಡಾರ್) ನಿರ್ಮಾಣ ಕಾಮಗಾರಿಯನ್ನು ಫ್ರೆಂಚ್ ಅಭಿವೃದ್ಧಿ ಏಜೆನ್ಸಿಯ ನಿಯೋಗದ (AFD-Agence Franchise Development) ಸದಸ್ಯರೊಂದಿಗೆ ವೀಕ್ಷಿಸಿ ಮಾತನಾಡಿದರು.

ಈ ಹಿಂದೆ ಮಳೆಗಾಲದಲ್ಲಿ ನಾಲಾ ತುಂಬಿ ಹರಿದು, ಸುತ್ತಮುತ್ತಲಿನ ನಿವಾಸಿಗಳಿಗೆ ತೊಂದರೆ ಉಂಟಾಗುತ್ತಿತ್ತು. ನಾಲಾವನ್ನು ಎತ್ತರಕ್ಕೆ ಏರಿಸಲಾಗಿದೆ.‌ ಕಲ್ಲುಗಳನ್ನು ಹಾಕಿ ನೀರು ಇಂಗುವಂತೆ ಮಾಡಲಾಗಿದೆ.

ಇದರಿಂದ ಅಂತರ್ಜಲದ ಮಟ್ಟವು ಕೂಡ ಹೆಚ್ಚಾಗಲಿದೆ. ಅಲ್ಲದೇ ಹಳೆಯ ನಾಲ್ಕು ಸೇತುವೆಗಳನ್ನು ಮರು ನಿರ್ಮಾಣ ಮಾಡಲಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ‌ ಕೈಗೊಂಡ ರಸ್ತೆ ಕಾಮಗಾರಿಗಳನ್ನು ಕೂಡಲೇ ಪೂರ್ಣಗೊಳಿಸಿ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕಾಗಿದೆ‌ ಎಂದರು.

ಫ್ರಾನ್ಸ್‌ದಿಂದ ಆಗಮಿಸಿರುವ ಸುಸ್ಥಿರ ನಗರಾಭಿವೃದ್ಧಿ ಕಾರ್ಯಗಳ ತಂಡದ ನಿಯೋಗವು ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡಿರುವ ಹಸಿರು ಸಂಚಾರಿ ಪಥ ಕಾಮಗಾರಿಯನ್ನು ವೀಕ್ಷಿಸಿದರು.

ಹುಬ್ಬಳ್ಳಿಯ ಗ್ರೀನ್ ಮೊಬಿಲಿಟಿ ಕಾರಿಡಾರ್ ನ ಮೊದಲ ಹಂತ ಶೀಘ್ರದಲ್ಲೇ ಉದ್ಘಾಟನೆ
ಯೋಜನೆಯ ಬಗ್ಗೆ ತಿಳಿದುಕೊಳ್ಳುತ್ತಿರುವ ಫ್ರಾನ್ಸ್ ನ ನಿಯೋಗ

ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅರ್ಬನ್ ಅಫೇರ್ಸ್ (NIUA) ನಿಯೋಗದ ನಿರ್ದೇಶಕ ಹಿತೇಶ್ ವೈದ್ಯ ಮಾತನಾಡಿ, ಸ್ಮಾರ್ಟ್ ಸಿಟಿ ಯೋಜನೆಯಡಿ ಈ ತರಹದ ಕಾಮಗಾರಿಯನ್ನು ಕೈಗೊಂಡಿರುವುದು ಬಹಳ ಸಂತಸ ತಂದಿದೆ.

ಮೊದಲ ಪ್ರಾಯೋಗಿಕ (Pilot) ಕಾಮಗಾರಿಯು ಮುಕ್ತಾಯದ ಹಂತದಲ್ಲಿದೆ. ಮುಂದಿನ ದಿನಗಳಲ್ಲಿ ಯೋಜನೆಯ ಉಳಿದ ಹಣವನ್ನು ಬಿಡುಗಡೆ ಮಾಡಲಾಗುವುದು. ಸಾರ್ವಜನಿಕ ಸ್ಥಳವನ್ನು ಈ ರೀತಿಯಾಗಿಯೂ ಬಳಕೆ ಮಾಡಿಕೊಳ್ಳಬಹುದು ಎಂದು ಈ ಯೋಜನೆ ನಮಗೆ ತಿಳಿಸಿಕೊಟ್ಟಿದೆ.

ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಯೋಜನೆಯ ತಂಡವು ಉತ್ತಮ ಕಾರ್ಯವನ್ನು ಮಾಡಿದೆ. ಆ ತಂಡವನ್ನು ಅಭಿನಂದಿಸಲೇಬೇಕು. ಮುಂದಿನ ಪೀಳಿಗೆಗೆ ಉಪಯುಕ್ತರವಾಗಲಿದೆ ಎಂದು ತಿಳಿಸಿದರು.

ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಯೋಜನೆಯ ಚೇರ್ಮನ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಆರ್.ವಿಶಾಲ್ ಅವರು ತಂಡಕ್ಕೆ ಮಾಹಿತಿ ನೀಡುತ್ತ, ಈಗಾಗಲೇ ಪ್ರಾಯೋಗಿಕ ಕಾಮಗಾರಿಯು ಕೊನೆಯ ಹಂತದಲ್ಲಿದೆ.

ಕೆಲವು ದಿನಗಳಲ್ಲಿ ಉದ್ಘಾಟಿಸಿ, ಸಾರ್ವಜನಿಕರ ಉಪಯೋಗಕ್ಕೆ ಅನುವು ಮಾಡಿಕೊಡಲಾಗುತ್ತದೆ. ಉಳಿದ ಅನುದಾನ ಬಂದ ತಕ್ಷಣ ಮುಂದಿನ ಹಂತದ ಕಾಮಗಾರಿಯನ್ನು ಕೈಗೊಳ್ಳಲಾಗುವುದು ಎಂದು ವಿವರಿಸಿದರು.

ಕಾರ್ಯಪಡೆಯ ನಾಯಕಿ ಜ್ಯೂಲಿಯೆಟ್ ಲಿ ಪ್ಯಾನೆರರ್(Juliette Le Pannerer), ಸಹನಾಯಕ ಜ್ಯೂಲಿಯೆನ್ ಬೊಗಿಲೆಟ್ಟೊ (Julien Bogiletto), ಸ್ಮಾರ್ಟ್ ಸಿಟಿ ವಲಯದ ವ್ಯವಸ್ಥಾಪಕಿ ಫ್ಯಾನಿ ರಗೋಟ್ (Fanny Ragot), ನಯೀಮ್ ಕೇರುವಾಲಾ, ವಿವೇಕ್ ಸಂಧು, ಡಾ.ಶಾಲಿನಿ ಮಿಶ್ರಾ, ಡಾ.ಮಹ್ಮದ್ ಆರೀಫ್, ಆಕಾಂಕ್ಷ ಲಾರೊಯಿಯಾ, ಇಂದರ್‌ಕುಮಾರ್ ಅವರು ಉಣಕಲ್ ನಾಲಾ ಹಿಂಭಾಗದ ಬಳಿ ನಿರ್ಮಿಸುತ್ತಿರುವ ಗ್ರೀನ್ ಮೊಬಿಲಿಟಿ ಕಾಮಗಾರಿ ವೀಕ್ಷಿಸಿದರು.

ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೆಶಕ ಶಕೀಲ್ ಅಹ್ಮದ್ ಮತ್ತಿತರರು ಕಾಮಗಾರಿಗಳ ಮಾಹಿತಿಯನ್ನು ನಿಯೋಗಕ್ಕೆ ಒದಗಿಸಿದರು.

Share this article!

Leave a Reply

Your email address will not be published. Required fields are marked *

error: Content is protected !!