ಧಾರವಾಡ ತಾಲ್ಲೂಕಿನ ತೋಟಗಾರಿಕೆ ಇಲಾಖೆ ವತಿಯಿಂದ ಕಳೆದ 2020-21 ನೇ ಸಾಲಿನಲ್ಲಿ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಅಂಬೊಳ್ಳಿ ಗ್ರಾಮದ ವಿಶ್ವಂಬರ ಬನ್ಸಿ ಅವರು 2 ಎಕರೆ 20 ಗುಂಟೆ ಜಮೀನಿನಲ್ಲಿಹೊಸ ತೋಟ ನಿರ್ಮಿಸಿಕೊಂಡು 110 ಟನ್ ಬಾಳೆ ಹಣ್ಣು ಬೆಳೆದಿದ್ದಾರೆ.
ಈ ಹೊಸ ಬಾಳೆ ತೋಟ ನಿರ್ಮಿಸಿಕೊಳ್ಳಲು ರೈತರಾದ ವಿಶ್ವಂಬರ ಬನ್ಸಿ ಅವರಿಗೆ ಇಲಾಖೆಯಿಂದ ರೂ.30,600/- ಅನುದಾನವನ್ನು ನೀಡಲಾಗಿದೆ. ಪ್ರಸಕ್ತ ಬಾಳೆ ಬೆಳೆಯು ಕಟಾವಿಗೆ ಬಂದಿದ್ದು ಪ್ರತಿ ಗೊಣಿ ಸರಾಸರಿ 30 ರಿಂದ 35 ಕೆ.ಜಿ ಇಳುವರಿ ನೀಡಿದೆ.
ಇಲ್ಲಿವರೆಗೂ 100 ರಿಂದ 110 ಟನ್ ಕಟಾವು ಮಾಡಿ ತಲಾ 8/- ರೂ. ರಂತೆ ಪ್ರತಿ ಕೆ.ಜಿ ಗೆ ಮಾರಾಟ ಮಾಡಿ ರೂ. 8,80,000/- ಗಳಿಸಿರುತ್ತಾರೆ. ಉಪನಿರ್ದೇಶಕ ಕಾಶಿನಾಥ ಭದ್ರನ್ನವರ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಶಿವಯೋಗಿ ಅವರು ಮಾರ್ಗದರ್ಶನ ಮಾಡಿದ್ದಾರೆ.
ಮೊದಲನೇ ವರ್ಷ ಖರ್ಚು ವೆಚ್ಚ ತೆಗೆದು 7,00,000 ಲಕ್ಷ ನಿವ್ವಳ ಆದಾಯ ಗಳಿಸಿರುವುದಾಗಿ ರೈತ ವಿಶ್ವಂಬರ ಬನ್ಸಿ ತಿಳಿಸಿದ್ದಾರೆ ಹಾಗೂ ಈ ಯಸಶ್ವಿಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಾಂತ್ರಿಕವಾಗಿ ಮಾಹಿತಿ ನೀಡಿ ಇಲಾಖೆಯಿಂದ ಸಹಾಯಧನ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ರೈತರಿಗೆ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಕಾಲಕಾಲಕ್ಕೆ ತಾಂತ್ರಿಕ ಬೇಸಾಯ ಕುರಿತು ಸಲಹೆ ಸೂಚನೆಗಳನ್ನು ಹೋಬಳಿ ಮಟ್ಟದ ಅಧಿಕಾರಿ ವಾಯ್. ಎ. ಕುರುಬೆಟ್ಟ ಅವರು ನೀಡಿದ್ದಾರೆ.
ಈ ರೈತರು ಪ್ರಸಕ್ತ ಸಾಲಿನಲ್ಲಿ ಇನ್ನೂ 2 ಎಕರೆ 20 ಗುಂಟೆ ಜಮೀನಿನಲ್ಲಿ ಬಾಳೆ ಪ್ರದೇಶ ವಿಸ್ತರಣೆಯನ್ನು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (MGNREGA) ಯೋಜನೆಯಡಿಯಲ್ಲಿ ಅನುಷ್ಟಾನ ಮಾಡಲು ಆಸಕ್ತಿ ವ್ಯಕ್ತಪಡಿಸಿರುತ್ತಾರೆ.
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (MGNREGA) ಯೋಜನೆಯಡಿ ಮಾವು, ಪೇರಲ, ಲಿಂಬು ಹಾಗೂ ಕರಿಬೇವು ಸಸಿಗಳನ್ನು ಇಲಾಖಾ ನರ್ಸರಿಗಳಿಂದ ರಿಯಾಯಿತಿ ದರದಲ್ಲಿ ರೈತರಿಗೆ ನೀಡಲು ಅವಕಾಶವಿದ್ದು, ರೈತರು ಇದರ ಸದುಪಯೋಗ ಪಡೆಯಬಹುದು.