ಕೋವಿಡ್ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿದ್ದ ಪಡಿತರ ಚೀಟಿದಾರರ ಇ-ಕೆವೈಸಿ ಸಂಗ್ರಹ ಕಾರ್ಯವನ್ನು ಬರುವ ಜುಲೈ 1 ರಿಂದ ಮರು ಪ್ರಾರಂಭಿಸಲಾಗಿದ್ದು, ನ್ಯಾಯಬೆಲೆ ಅಂಗಡಿಯವರಿಗೆ ಇಲಾಖೆಯಿಂದಲೇ ಇ-ಕೆವೈಸಿ ಮಾಡುವ ಸಲುವಾಗಿ ಹಣ ಪಾವತಿಸುವುದರಿಂದ ಪಡಿತರ ಚೀಟಿದಾರರು ಯಾವುದೇ ರೀತಿಯ ಹಣ ನೀಡಬೇಕಿಲ್ಲ.
ಒಂದುವೇಳೆ ನ್ಯಾಯಬೆಲೆ ಅಂಗಡಿಯವರು ಹಣಕ್ಕಾಗಿ ಒತ್ತಾಯಿಸಿದರೆ ಆಹಾರ ಇಲಾಖೆಗೆ ಅಥವಾ ತಹಶೀಲ್ದಾರ ಕಚೇರಿಗೆ ದೂರು ನೀಡಬೇಕು. ಅಂತಹ ನ್ಯಾಯಬೆಲೆ ಅಂಗಡಿಯವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕ ವಿನಾಯಕ ಪಾಲನಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, 2019-20 ರ ಫೆಬ್ರವರಿವರೆಗೆ ಪಡಿತರ ಚೀಟಿದಾರರ ಮಾಹಿತಿಗಳನ್ನು ನ್ಯಾಯಬೆಲೆ ಅಂಗಡಿಗಳ ಮೂಲಕ ಇ-ಕೆವೈಸಿ ಕಾರ್ಯಕ್ರಮ ನಡೆಸಲಾಗಿತ್ತು.
ಜನವರಿ 2021ರಲ್ಲಿ ಇ-ಕೆವೈಸಿ ಕಾರ್ಯವನ್ನು ಪುನಃ ಪ್ರಾರಂಭಿಸಿ, ಮಾರ್ಚ್-2021 ರವರೆಗೆ ಜರುಗಿಸಲಾಗಿದ್ದು, ಕೋವಿಡ್-19ರ ಹಿನ್ನೆಲೆಯಲ್ಲಿ ಇ-ಕೆವೈಸಿ ಕಾರ್ಯವನ್ನು ಮತ್ತೆ ಸ್ಥಗಿತಗೊಳಿಸಲಾಗಿತ್ತು. ಇದೀಗ ಪಡಿತರ ಚೀಟಿದಾರರ ಇ-ಕೆವೈಸಿ ಮರು ಪ್ರಾರಂಭಿಸಲು ಸರ್ಕಾರ ನಿರ್ದೇಶಿಸಿದೆ. ಎಲ್ಲಾ ಪಡಿತರ ಚೀಟಿಗಳಲ್ಲಿ ಕುಟುಂಬದ ಮುಖ್ಯಸ್ಥರು ಮತ್ತು ಸಂಬಂಧ, ಲಿಂಗ, ಜಾತಿ, ಎಲ್‍ಪಿಜಿ ವಿವರ ಮತ್ತು ಮೊಬೈಲ್ ಸಂಖ್ಯೆಗಳನ್ನು ಅತ್ಯಂತ ತುರ್ತಾಗಿ ಸಂಗ್ರಹಿಸಬೇಕಾಗಿದೆ.
ಜಿಲ್ಲೆಯಲ್ಲಿ ಚಾಲ್ತಿ ಇರುವ ಅಂತ್ಯೋದಯ, ಆದ್ಯತಾ ಪಡಿತರ ಚೀಟಿಗಳ ಇ-ಕೆವೈಸಿ ಸಂಗ್ರಹಿಸುವ ಕಾರ್ಯವನ್ನು ನ್ಯಾಯಬೆಲೆ ಅಂಗಡಿಗಳ ಮೂಲಕ ಜುಲೈ 1 ರಿಂದ ಮರು ಪ್ರಾರಂಭಿಸಲಾಗುವುದು.
ನ್ಯಾಯಬೆಲೆ ಅಂಗಡಿಗಳು ಮೊದಲ ಹಂತದಲ್ಲಿ ಇ-ಕೆವೈಸಿ ಮಾಡದಿರುವ ಅಂತ್ಯೋದಯ (ಎಎವೈ), ಆದ್ಯತಾ (ಪಿಎಚ್‍ಎಚ್) ಪಡಿತರ ಚೀಟಿಗಳ ಇ-ಕೆವೈಸಿಯನ್ನು ಮಾಡಬೇಕು. ಈಗಾಗಲೇ ಇ-ಕೆವೈಸಿ ಆಗಿರುವ ಅಥವಾ 2020 ಫೆಬ್ರವರಿ ನಂತರ ವಿತರಿಸುವ ಹೊಸ ಪಡಿತರ ಚೀಟಿಗಳ ಇ-ಕೆವೈಸಿ ಆಗಿರುವುದರಿಂದ ಪುನಃ ಇ-ಕೆವೈಸಿ ಮಾಡಿಸುವ ಅಗತ್ಯವಿರುವುದಿಲ್ಲ. ಪಡಿತರ ಚೀಟಿದಾರರಿಗೆ ಸಂಬಂಧಿಸಿದ ಮಾಹಿತಿಗಳನ್ನು ಮಾತ್ರ ನ್ಯಾಯಬೆಲೆ ಅಂಗಡಿಯವರು ಜುಲೈ 1 ರಿಂದ ಪ್ರಾರಂಭಿಸಬೇಕು.
ಮೊಬೈಲ್ ಸಂಖ್ಯೆ ಸಂಗ್ರಹಣೆಗೆ ಸಂಬಂಧಿಸಿದಂತೆ ಪ್ರತಿ ಪಡಿತರ ಚೀಟಿಗೆ ಕನಿಷ್ಠ ಒಬ್ಬ ಸದಸ್ಯನ ಮೊಬೈಲ್ ಸಂಖ್ಯೆ ಸಂಗ್ರಹಿಸಬೇಕು. ಒಬ್ಬರಿಗಿಂತ ಹೆಚ್ಚು ಸದಸ್ಯರ ಮೊಬೈಲ್ ಸಂಖ್ಯೆಯನ್ನು ಸಹ ಸಂಗ್ರಹಿಸಬಹುದು. ಒಂದು ಕುಟುಂಬದಲ್ಲಿ ಒಂದೇ ಮೊಬೈಲ್ ಸಂಖ್ಯೆ ಇದ್ದರೆ ಎಲ್ಲಾ ಸದಸ್ಯರಿಗೂ ನಮೂದಿಸಬೇಕು.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಂತೆ ಕುಟುಂಬದ ಹಿರಿಯ ಮಹಿಳೆಯನ್ನು ಕುಟುಂಬದ ಮುಖ್ಯಸ್ಥರಾಗಿ ಆಯ್ಕೆ ಮಾಡಬೇಕು. ಒಂದು ವೇಳೆ ಮಹಿಳಾ ಸದಸ್ಯರು ಇರದಿದ್ದರೆ ಅತ್ಯಂತ ಹಿರಿಯ ಪುರುಷ ಸದಸ್ಯ ಕುಟುಂಬ ಮುಖ್ಯಸ್ಥರಾಗುತ್ತಾರೆ. ಸಂಬಂಧಗಳನ್ನು ದಾಖಲಿಸುವಾಗ ಕುಟುಂಬದ ಮುಖ್ಯಸ್ಥರೊಂದಿಗೆ ಸದಸ್ಯರಿಗಿರುವ ಕೌಟಂಬಿಕ ಸಂಬಂಧವನ್ನು ನಿಖರವಾಗಿ ದಾಖಲಿಸಬೇಕು.
ಇ-ಕೆವೈಸಿ ಮಾಡುವಾಗ ನೀಡಬೇಕಾದ ವಿವರ
ಇ-ಕೆವೈಸಿ ಮಾಡುವಾಗ ಪಡಿತರ ಚೀಟಿದಾರರು ಜಾತಿ ವಿವರ (ಎಸ್.ಸಿ,ಎಸ್.ಟಿ ಇತರೆ), ಎಲ್‍ಪಿಜಿ ವಿವರ, ಇ-ಕೆವೈಸಿ ವಿವರ ನೀಡಬೇಕು. ಯಾವುದೇ ಸದಸ್ಯರ ಇ-ಕೆವೈಸಿ ಸಂಗ್ರಹಕ್ಕೆ ಕುಷ್ಟರೋಗ, ವಿಶೇಷ ಚೇತನರು, ಹಾಸಿಗೆ ಹಿಡಿದವರು, ವಯೋವೃದ್ಧರು, ಮರಣ, ಕುಟುಂಬದ ಜೊತೆ ವಾಸವಾಗಿಲ್ಲದ ಕಾರಣಗಳಿಗಾಗಿ ವಿನಾಯಿತಿ ನೀಡಲಾಗಿದೆ. ಜಾತಿ ವಿವರ ನಮೂದಿಸುವಾಗ ಎಸ್‍ಸಿ, ಎಸ್‍ಟಿ ಇತರೆ ವರ್ಗಗಳ ವಿವರ ನಮೂದಿಸಬೇಕು. ನ್ಯಾಯಬೆಲೆ ಅಂಗಡಿ ಮಾಲೀಕರು ಜಾತಿ ಪ್ರಮಾಣ ಪತ್ರದ ವಿವರಗಳನ್ನು ದಾಖಲಿಸಬೇಕು.
ಆಧಾರ್ ದೃಢೀಕರಣ ಇ-ಕೆವೈಸಿ ಯನ್ನು ನಿರ್ವಹಿಸುವ ನ್ಯಾಯಬೆಲೆ ಅಂಗಡಿಗಳಿಗೆ ಆಧಾರ್ ದೃಢೀಕರಣ ಇ-ಕೆವೈಸಿಯನ್ನು ಮಾಡುವ ಸಲುವಾಗಿ ಪ್ರತಿ ಫಲಾನುಭವಿಗೆ ರೂ.5/- ರಂತೆ ಒಟ್ಟಾರೆ ಒಂದು ಕುಟುಂಬದ ಆಧಾರ್ ದೃಢೀಕರಣ ‘ಇ-ಕೆವೈಸಿ’ಯನ್ನು ಪೂರ್ಣಗೊಳಿಸಿದಲ್ಲಿ ಗರಿಷ್ಠ ಮೊತ್ತ ರೂ.20/-ಗಳನ್ನು ಇಲಾಖಾ ವತಿಯಿಂದ ನೇರವಾಗಿ ನ್ಯಾಯಬೆಲೆ ಅಂಗಡಿಕಾರರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುವುದು.
ಆದ್ದರಿಂದ ಯಾವುದೇ ಕಾರಣಕ್ಕೂ ಪಡಿತರ ಚೀಟಿದಾರರು ನ್ಯಾಯಬೆಲೆ ಅಂಗಡಿಕಾರರಿಗೆ ‘ಇ-ಕೆವೈಸಿ’ ಮಾಡಿಸಿಕೊಳ್ಳಲು ಹಣ ಪಾವತಿಸುವಂತಿಲ. ಒಂದು ವೇಳೆ ನ್ಯಾಯಬೆಲೆ ಅಂಗಡಿಕಾರರು ಪಡಿತರ ಚೀಟಿದಾರರಿಂದ ಹಣವನ್ನು ಪಡೆದ ಬಗ್ಗೆ ದೂರುಗಳೇನಾದರೂ ಬಂದಲ್ಲಿ ಅಂತಹ ನ್ಯಾಯಬೆಲೆ ಅಂಗಡಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು.
ನ್ಯಾಯಬೆಲೆ ಅಂಗಡಿಗಳು ಪ್ರತಿ ತಿಂಗಳ 1 ರಿಂದ 10ನೇ ತಾರೀಖಿನ ಅವಧಿಯಲ್ಲಿ ನಿರ್ವಹಿಸಬೇಕು. ಹಾಗೂ ಈ ಕಾರ್ಯವನ್ನು ಸಪ್ಟಂಬರ-2021 ರೊಳಗೆ ಪೂರ್ಣಗೊಳಿಸಬೇಕೆಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕ ವಿನಾಯಕ ಪಾಲನಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.