ಕೋವಿಡ್ 3ನೇ ಅಲೆಯನ್ನು ನಿಯಂತ್ರಿಸಿ, ಜಿಲ್ಲೆಯಲ್ಲಿನ ಸೋಂಕಿತರಿಗೆ ಅಗತ್ಯ ಮಾಹಿತಿ ನೀಡಿ ಸಕಾಲಕ್ಕೆ ಆರೋಗ್ಯ ಚಿಕಿತ್ಸೆ ನೆರವು ನೀಡಲು ಧಾರವಾಡ ಜಿಲ್ಲಾಡಳಿತವು ಕೋವಿಡ್ ಸಹಾಯವಾಣಿ ಮತ್ತು ವಾರ್ ರೂಮ್ ಆರಂಭಿಸಿದೆ.
ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಈ ಕುರಿತು ಪ್ರಕಟಣೆ ನೀಡಿದ್ದಾರೆ. ಕೋವಿಡ್ ದೃಢಪಟ್ಟ ಸೋಂಕಿತರಿಗೆ ಅಗತ್ಯ ಮಾಹಿತಿ ನೀಡಲಾಗುವುದು.
ಅಲ್ಲದೇ ಸೋಂಕಿತರು ಆಸ್ಪತ್ರೆಗೆ ದಾಖಲಾಗಲು ಬಯಸಿದರೆ ಕೋವಿಡ್ ವಾರ್ ರೂಮ್ ಸಿಬ್ಬಂದಿ ಅಗತ್ಯ ಮಾಹಿತಿ ನೀಡಿ ನೆರವಾಗುತ್ತಿದ್ದಾರೆ.
ಹುಬ್ಬಳ್ಳಿಯ ದೇಶಪಾಂಡೆ ಫೌಂಡೇಶನ್‍ನಲ್ಲಿ ಆರಂಭಿಸಿರುವ ಸಹಾಯವಾಣಿಗೆ ದಿನದ 24 ಗಂಟೆ ಕರ್ತವ್ಯ ನಿರ್ವಹಿಸಲು ಮೂರು ಪಾಳಿಗಳಲ್ಲಿ ಪ್ರತ್ಯೇಕ ಸಿಬ್ಬಂದಿ ನೇಮಿಸಲಾಗಿದೆ.
ಕೋವಿಡ್ ಸೋಂಕಿತರಿಗೆ ಅಗತ್ಯ ಚಿಕಿತ್ಸೆ ನೀಡಲು ಕಿಮ್ಸ್, ಜಿಲ್ಲಾ ಆಸ್ಪತ್ರೆ, ತಾಲೂಕಾ ಆಸ್ಪತ್ರೆಗಳು, ಎಲ್ಲ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಶೇ.50 ರಷ್ಟು ಹಾಸಿಗೆಗಳನ್ನು ಮೀಸಲಿಡಲಾಗಿದೆ.
ಜ.16 ವರೆಗೆ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಸೇರಿ ಒಟ್ಟು 3235 ಬೆಡ್‍ಗಳನ್ನು ಚಿಕಿತ್ಸೆಗಾಗಿ ಸಿದ್ಧಗೊಳಿಸಲಾಗಿದೆ.
ಕೋವಿಡ್ ಸಂಬಂಧಿತ ಆರೋಗ್ಯ ಸಲಹೆ, ಯಾವುದೇ ತೊಂದರೆ, ಸಮಸ್ಯೆಗಳಿದ್ದಲ್ಲಿ ಸಂಪರ್ಕಿಸಲು ಜಿಲ್ಲಾಡಳಿತ ಸಹಾಯವಾಣಿಗಳನ್ನು ಆರಂಭಿಸಿದೆ
ಸಾರ್ವಜನಿಕರು ಈ ಸಹಾಯವಾಣಿಯ ಸದುಪಯೋಗ ಪಡೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅವರು ವಿನಂತಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾಧಿಕಾರಿಗಳ ಕಚೇರಿ ಸಹಾಯವಾಣಿ-1077, ಆರೋಗ್ಯ ಸಹಾಯವಾಣಿ-104 ಮತ್ತು ಹುಬ್ಬಳ್ಳಿ ದೇಶಪಾಂಡೆ ಫೌಂಡೇಶನ್‍ನಲ್ಲಿ ಆರಂಭಿಸಿರುವ ಸಹಾಯವಾಣಿ ಮೊಬೈಲ್ ಸಂಖ್ಯೆ: 8047168111 ಕರೆಮಾಡಿ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.