ಡಿಸೆಂಬರ್ 14 ರಂದು ಹುಬ್ಬಳ್ಳಿಯಲ್ಲಿ ಮುಖ್ಯಮಂತ್ರಿಗಳಿಂದ ನಮ್ಮ ಕ್ಲಿನಿಕ್‍ ಗೆ ಚಾಲನೆ

ಕರ್ನಾಟಕ ರಾಜ್ಯದಾದ್ಯಂತ ಸ್ಥಾಪಿಸಲಾಗಿರುವ ಒಟ್ಟು 438 ನಮ್ಮ ಕ್ಲಿನಿಕ್‍ ಗಳನ್ನು ಡಿಸೆಂಬರ್ 14 ರಂದು ಹುಬ್ಬಳ್ಳಿಯ ಭೈರಿದೇವರಕೊಪ್ಪದಿಂದ ಏಕ ಕಾಲಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಲಿದ್ದಾರೆ.

ನಗರ ಪ್ರದೇಶದ ಬಡ ದುರ್ಬಲ ವರ್ಗದ ಜನರಿಗೆ ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ನಮ್ಮ ಕ್ಲಿನಿಕ್‍ (Namma Clinic) ಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಹೇಳಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಈ ಕುರಿತು ಆಯೋಜಿಸಲಾದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಡಿ.14 ರಂದು ಬೆಳಿಗ್ಗೆ ಭೈರಿದೇವರಕೊಪ್ಪದ ರೇಣುಕಾನಗರದಲ್ಲಿ ಮುಖ್ಯಮಂತ್ರಿಗಳು ನಮ್ಮ ಕ್ಲಿನಿಕ್ ಉದ್ಘಾಟಿಸಲಿದ್ದಾರೆ. ಎಲ್ಲ 438 ನಮ್ಮ ಕ್ಲಿನಿಕ್‍ಗಳನ್ನು ವರ್ಚುವಲ್ ಮೂಲಕ ಏಕಕಾಲಕ್ಕೆ ಚಾಲನೆ ನೀಡಲಿದ್ದಾರೆ.

ಆರೋಗ್ಯ ಸಚಿವರಾದ ಡಾ.ಕೆ. ಸುಧಾಕರ, ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲೆಯ ಎಲ್ಲ ಶಾಸಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.

ನಗರ ಪ್ರದೇಶಗಳ ಬಡ ಜನತೆಗೆ ನಮ್ಮ ಕ್ಲಿನಿಕ್‍ಗಳು 12 ಆರೋಗ್ಯ ಸೇವೆಗಳ ಮೂಲಕ ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಒದಗಿಸಲು, ನಿರಂತರ ಆರೈಕೆಯನ್ನು ನೀಡುವ ನಿಟ್ಟಿನಲ್ಲಿ ದ್ವಿತೀಯ ಮತ್ತು ತೃತೀಯ ಹಂತದ ಆರೋಗ್ಯ ಕೇಂದ್ರಗಳಿಗೆ ರೆಫರಲ್ ಸೇವೆಗಳನ್ನು ಒದಗಿಸಲಿವೆ.

ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಸುಧಾರಿಸಲು, ಸೂಕ್ತವಾದ ಕಾರ್ಯವಿಧಾನಗಳನ್ನು ಬಲಪಡಿಸಲು ಹಾಗೂ ಸಮುದಾಯದ ಸಹಭಾಗಿತ್ವವನ್ನು ಉತ್ತೇಜಿಸುವಲ್ಲಿ ನಮ್ಮ ಕ್ಲಿನಿಕ್‍ಗಳು ಸಹಾಯಕಾರಿಯಾಗಲಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಶಿ ಪಾಟೀಲ ಮಾತನಾಡಿ, ನಮ್ಮ ಕ್ಲಿನಿಕ್ 1000 ಚದರ ಅಡಿ ವಿಸ್ತೀರ್ಣ ಹೊಂದಿದ್ದು ಇಲ್ಲಿ ನಿರೀಕ್ಷಣಾ ಸ್ಥಳ, ಹೊರ ರೋಗಿಗಳ ಕೊಠಡಿ, ಚುಚ್ಚು ಮದ್ದು ನೀಡುವ ಕೊಠಡಿ, ಪ್ರಯೋಗಶಾಲೆಗಳನ್ನು ಹೊಂದಿರಲಿವೆ.

ಯೋಗ ಕೂಠಡಿ, ಔಷಧಿ ದಾಸ್ತಾನು ಮತ್ತು ವಿತರಣಾ ಕೊಠಡಿ, ಆಡಳಿತ ಕಛೇರಿ, ಹೀಗೆ ಪ್ರತ್ಯೇಕ ಕೊಠಡಿಗಳಿದ್ದು ಆಸ್ಪತ್ರೆ ಸಿಬ್ಬಂದಿ, ಮಹಿಳಾ ಮತ್ತು ಪುರುಷ ರೋಗಿಗಳಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದೆ.

ನಮ್ಮ ಕ್ಲಿನಿಕ್‍ಗಳಲ್ಲಿ ಒಬ್ಬರು ವೈದ್ಯಾಧಿಕಾರಿ, ಒಬ್ಬರು ಶುಶ್ರೂಷಕರು, ತಲಾ ಒಬ್ಬೊಬ್ಬ ಪ್ರಯೋಗಶಾಲಾ ತಂತ್ರಜ್ಞರು ಹಾಗೂ ಕಿರಿಯ ದರ್ಜೆ ಸಹಾಯಕರು, ಒಬ್ಬರು ಡಿ ದರ್ಜೇ ನೌಕರರು ಕಾರ್ಯನಿರ್ವಹಿಸಲಿದ್ದಾರೆ.

ನಮ್ಮ ಕ್ಲಿನಿಕ್‍ಗಳು ಬೆಳಗ್ಗೆ 9 ರಿಂದ ಸಂಜೆ 4-30 ರವರೆಗೆ ಸೋಮವಾರದಿಂದ ಶನಿವಾರದವರೆಗೆ ಕಾರ್ಯನಿರ್ವಹಿಸುತ್ತವೆ ಎಂದು ಅವರು ತಿಳಿಸಿದರು.

ನಮ್ಮ ಕ್ಲಿನಿಕ್‍ಗಳಲ್ಲಿ 12 ಪ್ರಮುಖ ಆರೋಗ್ಯ ಸೇವೆಗಳನ್ನು ನೀಡುವುದರ ಜೊತೆಗೆ ಈ ಕೆಳಕಂಡ ಸೇವೆಗಳನ್ನು ನೀಡಲಾಗುತ್ತದೆ. ಗರ್ಭಿಣಿ ಮತ್ತು ಜನನ ಸಮಯದ ಆರೈಕೆ, ನವಜಾತ ಮತ್ತು ಶಿಶುವಿನ ಸಮಗ್ರ ಆರೋಗ್ಯ, ಆರೈಕೆ, ಬಾಲ್ಯ ಮತ್ತು ಹದಿಹರೆಯದವರ ಸಮಗ್ರ ಆರೋಗ್ಯ ಸೇವೆಗಳು.

ಸಾರ್ವತ್ರಿಕ ಲಸಿಕಾ ಸೇವೆಗಳು, ಕುಟುಂಬ ಕಲ್ಯಾಣ ಗರ್ಭನಿರೋಧಕ ಸೇವೆಗಳು ಮತ್ತು ಇತರ ಸಂತಾನೋತ್ಪತ್ತಿ ಆರೈಕೆ ಕೇಂದ್ರಗಳು, ಸಾಂಕ್ರಾಮಿಕ ರೋಗಗಳ ನಿರ್ವಹಣೆ, ಸಾಮಾನ್ಯ ಮತ್ತು ಸಣ್ಣ ಪ್ರಮಾಣದ ಖಾಯಿಲೆಗಳಿಗೆ ಹೊರ ರೋಗಿ ಸೇವೆಗಳು‌.

ಸಾಂಕ್ರಾಮಿಕ ಟಿ.ಬಿ., ಕುಷ್ಟ ರೋಗ ಇತ್ಯಾದಿ ಮತ್ತು ಅಸಾಂಕ್ರಾಮಿಕ ರೋಗಗಳ ಮಧುಮೇಹ ದೀರ್ಘಾವಧಿ ಶ್ವಾಸಕೋಶ ಕಾಯಿಲೆ, ಕೀಲು ನೋವು ಮತ್ತು ಸಂಧಿವಾತ, ಸ್ತನ ಮತ್ತು ಗರ್ಭಕಂಠ ಕ್ಯಾನ್ಸರ್, ಸ್ಕ್ರೀನಿಂಗ್, ತಡೆಗಟ್ಟುವಿಕೆ ಮತ್ತು ನಿರ್ವಹಣೆ, ಮೂಲಭೂತ ಬಾಯಿ ಆರೋಗ್ಯ ಸೇವೆಗಳು.

ಮೂಲಭೂತ ನೇತ್ರ ಹಾಗೂ ಕಿವಿ, ಮೂಗು, ಗಂಟಲು ಆರೋಗ್ಯ ಆರೈಕೆ ಸೇವೆಗಳು, ಮಾನಸಿಕ ಆರೋಗ್ಯದ ಮೂಲಭೂತ ಸ್ಕ್ರೀನಿಂಗ್ ಸೇವೆಗಳು, ಮೂಲಭೂತ ವೃದ್ದಾಪ್ಯ ಆರೈಕೆ ಮತ್ತು ಉಪಶಮನಕಾರಿ ಆರೈಕೆ ಸೇವೆಗಳು, ಸುಟ್ಟ ಗಾಯಗಳು, ಅಪಘಾತ.

ಮತ್ತಿತರ ಗಾಯಗಳು ಸೇರಿದಂತೆ ತುರ್ತು ವೈದ್ಯಕೀಯ ಸೇವೆಗಳು, ಉಚಿತ ಆರೋಗ್ಯ ತಪಾಸಣೆ, ಉಚಿತ ಔಷಧ, ಉಚಿತ ಪ್ರಯೋಗಶಾಲಾ ಸೇವೆಗಳು ರಕ್ತ ಹೀನತೆ, ಸಕ್ಕರೆ ಕಾಯಿಲೆ, ಮೂತ್ರ ಪರೀಕ್ಷೆ, ಕ್ಷಯ ಪರೀಕ್ಷೆ, ಡೆಂಗಿ, ಮಲೇರಿಯಾದಂತಹ ಕನಿಷ್ಠ 14 ಪರೀಕ್ಷೆಗಳ ಸೇವೆಯನ್ನು ನೀಡಲಾಗುತ್ತದೆ ಎಂದರು.

ಸಭೆಯಲ್ಲಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಉಪ ಆಯುಕ್ತ ಡಾ: ಗೋಪಾಲ ಬ್ಯಾಕೋಡಿ, ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ, ಆರೋಗ್ಯಾಧಿಕಾರಿ ಡಾ. ಹೊನಕೇರಿ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

Share this article!

Leave a Reply

Your email address will not be published. Required fields are marked *

error: Content is protected !!