ಕನ್ನಡ ನಾಡಿನ ಶ್ರೇಷ್ಠ ಕವಿಗಳಾದ ವರಕವಿ ಬೇಂದ್ರೆ ಅಂಗಳದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಚಿಗುರು ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯಕ್ರಮಗಳು ಹೆಚ್ಚೆಚ್ಚು ಜರುಗುತ್ತಿರುವುದು ಧಾರವಾಡದ ಸಾಂಸ್ಕೃತಿಕ ಹಿರಿಮೆ ಹೆಚ್ಚಿಸಿದೆ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಹೇಳಿದರು.
ನಗರದ ಬೇಂದ್ರೆ ಭವನದಲ್ಲಿ ಇಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಏರ್ಪಡಿಸಿದ್ದ ಚಿಗುರು ಬಾಲ ಪ್ರತಿಭೆಗಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇಂದಿನ ಮಕ್ಕಳು ಕೇವಲ ಆಸ್ತಿಯಾಗಿರದೆ ತಮ್ಮ ನಾಡಿನ ಸಾಂಸ್ಕೃತಿಕ ಹಿರಿಮೆಯಾಗಿವೆ ಎಂದು ಹೇಳಿದರು. ಇಂದಿನ ಮಕ್ಕಳು ಬಹಳ ಪ್ರತಿಭಾವಂತರಾಗಿದ್ದಾರೆ ಇದಕ್ಕೆ ನಮ್ಮ ಪಾಲಕರು ಮತ್ತು ಶಿಕ್ಷಕರು ಅಭಿನಂದನಾರ್ಹರಾಗಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಕ್ಕಳ ಸಾಹಿತಿ ನಿಂಗಣ್ಣ ಕುಂಟಿಯವರು ಮಾತನಾಡಿ, ತಮ್ಮ ಬಾಲ್ಯದ ಬೇಂದ್ರೆಯವರ ಒಡನಾಟದ ಕುರಿತು ಸ್ಮರಿಸಿ, ಬೇಂದ್ರೆಯವರ ಆಶೀರ್ವಾದದಿಂದ ನಾನು ಮಕ್ಕಳ ಸಾಹಿತಿಯಾದೆ. ಮಕ್ಕಳು ಶ್ರದ್ಧೆಯಿಂದ ಕಲಿತು ಸಾಧಿಸಿದಲ್ಲಿ ಅವರ ಸಂಕಲ್ಪ ಸಿದ್ಧಿಯಾಗುವುದು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟಿನ ಅಧ್ಯಕ್ಷ ಡಾ.ಡಿ.ಎಂ. ಹಿರೇಮಠ ಅವರು ಮಾತನಾಡಿದರು.
ಸಾಧನಕೇರಿ ವಿದ್ಯಾಭಿವೃದ್ಧಿ ಸಮಿತಿಯ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಎಮ್.ಜಿ. ಕೊಡ್ಲಿ, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಕೆ.ಎಸ್.ನಾಗರಾಳ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಅವರು ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಆರತಿ ದೇವಶಿಖಾಮಣಿ ನಿರೂಪಿಸಿದರು. ಬೇಂದ್ರೆ ಟ್ರಸ್ಟ್ ವ್ಯವಸ್ಥಾಪಕ ಪ್ರಕಾಶ ಬಾಳಿಕಾಯಿ ವಂದಿಸಿದರು.
ಕಾರ್ಯಕ್ರಮದ ನಂತರ ಬಾಲ ಪ್ರತಿಭೆಗಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಾಧನಕೇರಿ ವಿದ್ಯಾಭಿವೃದ್ಧಿ ಸಮಿತಿಯ ಶಾಲೆಯ ವಿದ್ಯಾರ್ಥಿಗಳು ನಾಡಗೀತೆಯನ್ನು, ವಿಶ್ವಾಂಬರಿ ನೃತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆಯ ವಿಧ್ಯಾರ್ಥಿಗಳು ಶಾಸ್ತ್ರೀಯ ನೃತ್ಯ ಪ್ರಸ್ತುತ ಪಡಿಸಿದರು.
ಪಲ್ಲವಿ ಚಾಕಲಬ್ಬಿ ಮತ್ತು ತಂಡದಿಂದ ಜಾನಪದ ಗೀತೆಗಳು, ಪ್ರೀತಂ.ಆರ್. ತಂಡದಿಂದ ನಾಟಕ ಪ್ರದರ್ಶನವು ಮನಮೋಹಕವಾಗಿ ಪ್ರದರ್ಶನಗೊಂಡಿತು.
ನಿಶಾದ್ ಗುಡಿ ಮತ್ತು ತಂಡದಿಂದ ಸುಗಮ ಸಂಗೀತಕ್ಕೆ ತಬಲಾದಲ್ಲಿ ಬಸವರಾಜ ಹಿರೇಮಠ ಹಾಗೂ ಹಾರ್ಮೋನಿಯಂದಲ್ಲಿ ವಿಜಯ ಅರ್ಕಸಾಲಿ ಸಾಥ್ ಸಂಗತ ನೀಡಿದರು.
ಸಹಸ್ರ ಕೋಂಬಳಿಯವರ ಸಿತಾರ ವಾದನಕ್ಕೆ ತಬಲಾದಲ್ಲಿ ಅಥರ್ವ ಘಂಟೆಣ್ಣನವರ ಸಾಥ್ ಸಂಗತ ನೀಡಿದರು. ಮುರಗೋಡ ಏಕಪಾತ್ರಾಭಿನಯ ಪ್ರದರ್ಶನ ನೀಡಿದರು.