ಧಾರವಾಡ ಜಿಲ್ಲಾಡಳಿತದಿಂದ ವಿಶ್ವ ಮಧುಮೇಹ ದಿನ ಆಚರಣೆ

ಧಾರವಾಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಎನ್.ಸಿ.ಡಿ ಘಟಕದಿಂದ ಇಂದು ಜಿಲ್ಲಾ ಆಸ್ಪತ್ರೆಯಲ್ಲಿ ವಿಶ್ವ ಮಧುಮೇಹ ದಿನ ಆಚರಣೆ ನಡೆಸಲಾಯಿತು.

ಶಿಕ್ಷಣದಿಂದ ಭವಿಷ್ಯದ ರಕ್ಷಣೆ (Education to Protect Tomorrow) ಎಂಬ ಘೋಷವಾಕ್ಯದೊಂದಿಗೆ ವಿಶ್ವ ಮಧುಮೇಹ ದಿನಾಚರಣೆ ಅಂಗವಾಗಿ ಉಚಿತ ಮಧುಮೇಹ, ರಕ್ತದೊತ್ತಡ ಮತ್ತು ಸಾಮಾನ್ಯ ಕ್ಯಾನ್ಸರ್ ಉಚಿತ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶಶಿ ಪಾಟೀಲ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಮಧುಮೇಹ ವಿಶ್ವದಾದ್ಯಂತ ಹೆಚ್ಚಾಗುತ್ತಿದೆ.

ಬದಲಾದ ಜೀವನ ಶೈಲಿ, ಅನಿಯಮಿತ ಆಹಾರ ಅಭ್ಯಾಸ, ದೈಹಿಕ ಶ್ರಮ ಇಲ್ಲದಿರುವುದು ಇವೆಲ್ಲವು ಮಧುಮೇಹಕ್ಕೆ ಕಾರಣವಾಗಿವೆ. 30 ವರ್ಷ ಮೇಲ್ಪಟ್ಟ ಎಲ್ಲರೂ ಮಧುಮೇಹ ತಪಾಸಣೆಗೆ ಒಳಗಾಗಬೇಕು.

ಆರೋಗ್ಯ ಉಪಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕಾ ಆಸ್ಪತ್ರೆ ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಮಧುಮೇಹ ತಪಾಸಣೆ ಲಭ್ಯವಿದ್ದು, ಸಾರ್ವಜನಿಕರು ಸರ್ಕಾರದ ಈ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕು ಹಾಗೂ ಮಧುಮೇಹ ಖಚಿತಪಟ್ಟಲ್ಲಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕೆಂದು ತಿಳಿಸಿದರು.

ಧಾರವಾಡ ಜಿಲ್ಲೆಯಲ್ಲಿ ಏಪ್ರೀಲ್ 2022 ರಿಂದ ಅಕ್ಟೋಬರ್ 2022 ರವರೆಗೆ ಎನ್‍ಸಿಡಿ ಕ್ಲಿನಿಕ್‍ಗಳಲ್ಲಿ ಒಟ್ಟು 56,219 ಜನರಿಗೆ ಮಧುಮೇಹ ತಪಾಸಣೆ ಮಾಡಿದ್ದು, ಇದರಲ್ಲಿ 694 ಜನರಲ್ಲಿ ಮಧುಮೇಹ ಇರುವ ಹೊಸ ಪ್ರಕರಣಗಳು ದೃಢಪಟ್ಟಿವೆ.

ಹೊಸ ಮತ್ತು ಹಳೆಯ ರೋಗಿಗಳು ಸೇರಿ 4,458 ಮಧುಮೇಹ ಇರುವ ಜನರಿಗೆ ಭೌತಿಕ ಚಿಕಿತ್ಸೆಯನ್ನು ನೀಡಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಶಿ ಪಾಟೀಲ ಅವರು ತಿಳಿಸಿದರು.

ಜಿಲ್ಲಾ ಎನ್.ಸಿ.ಡಿ. ಕಾರ್ಯಕ್ರಮಾಧಿಕಾರಿಗಳು ಮತ್ತು ಜಿಲ್ಲಾ ಸರ್ವೇಕ್ಷಣಾಧಿಕಾರಿಗಳಾದ ಡಾ.ಸುಜಾತಾ ಹಸವೀಮಠ ಪ್ರಾಸ್ತಾವಿಕವಾಗಿ ಮಾತನಾಡಿ, ದೈಹಿಕ ಶ್ರಮವಿಲ್ಲದಿರುವುದು, ಧೂಮಪಾನ, ಮದ್ಯಪಾನ, ಒತ್ತಡದ ಜೀವನಶೈಲಿಯಿಂದ ಮಧುಮೇಹ ಪ್ರಕರಣಗಳು ಹೆಚ್ಚಾಗುತ್ತಿವೆ.

ಅಗತ್ಯ ಮುಂಜಾಗ್ರತಾ ಕ್ರಮಗಳಿಂದ ಮಧುಮೇಹವನ್ನು ದೂರವಿಡಬಹುದು. ಮಧುಮೇಹವಿದ್ದಲ್ಲಿ ವೈದ್ಯಕೀಯ ಸಲಹೆ ಅನುಸಾರವಾಗಿ ಚಿಕಿತ್ಸೆ ಪಡೆದುಕೊಳ್ಳಬೇಕು, ನಿಯಮಿತ ಆಹಾರ ಸೇವನೆ ಮತ್ತು ದಿನನಿತ್ಯ ಮುಂಜಾನೆ ನಡಿಗೆಯಿಂದ ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದು ಎಂದು ತಿಳಿಸಿದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಶಿವಕುಮಾರ ಮಾನಕರ ಮಾತನಾಡಿ, ಜಿಲ್ಲಾ ಆಸ್ಪತ್ರೆಯ ಸೌಲಭ್ಯಗಳ ಕುರಿತು, ಮಧುಮೇಹ ರೋಗದ ಲಕ್ಷಣ ಮತ್ತು ಚಿಕಿತ್ಸೆಯ ಕುರಿತು ವಿವರಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಆಸ್ಪತ್ರೆಯ ಮುಖ್ಯ ಚಿಕಿತ್ಸಕ ಡಾ.ಸ್ವಾಮಿ, ಜಿಲ್ಲಾ ಎನ್.ಸಿ.ಡಿ. ಕ್ಲಿನಿಕ್‍ನ ಜನರಲ್ ಫಿಜಿಸಿಯನ್ ಡಾ.ವಾಸಂತಿ ಜೀರಗಳ, ಎನ್.ಪಿ.ಎಚ್.ಸಿ.ಇ ಮತ್ತು ಎನ್.ಪಿ.ಪಿ.ಸಿ ವೈದ್ಯಾಧಿಕಾರಿಗಳು, ಜಿಲ್ಲಾ ಐ.ಇ.ಸಿ ವಿಭಾಗದ ಸಿಬ್ಬಂದಿಯವರು, ಜಿಲ್ಲಾ ಎನ್.ಸಿ.ಡಿ ಘಟಕ ಮತ್ತು ಎನ್.ಸಿಡಿ ಕ್ಲಿನಿಕ್ ಸಿಬ್ಬಂದಿಯವರು ಉಪಸ್ಥಿತರಿದ್ದರು.

Share this article!

Leave a Reply

Your email address will not be published. Required fields are marked *

error: Content is protected !!