ಧಾರವಾಡ ಐಐಐಟಿ ಕ್ಯಾಂಪಸ್‍ಗೆ ಶಾಸಕ ಅರವಿಂದ ಬೆಲ್ಲದ ಭೇಟಿ

ಧಾರವಾಡ ಐಐಐಟಿಯ ನೂತನ ಕಟ್ಟಡದ ಉದ್ಘಾಟನೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೆಪ್ಟೆಂಬರ್ 26 ರಂದು ನೆರವೇರಿಸಲಿದ್ದಾರೆ.

ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ಅಂದು ಮಧ್ಯಾಹ್ನ 3 ರಿಂದ 4 ಗಂಟೆಯವರೆಗೆ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.

ಇಂದು ಮಧ್ಯಾಹ್ನ ಅವರು ಐಐಐಟಿ ಕ್ಯಾಂಪಸ್‍ಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದರು.

ಐಐಐಟಿ ಕ್ಯಾಂಪಸ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅತಿಥಿಗಳು ಸೇರಿದಂತೆ ಸುಮಾರು ಏಳನೂರು ಜನರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ.

ರಾಷ್ಟ್ರಪತಿಗಳಿಗೆ ಫಿಕ್ಸ್ ಆದ ಊಟದ ಮೆನು ಇದ್ದು ಆ ಪ್ರಕಾರ ಊಟ ಸಿದ್ದಪಡಿಸಲಾಗುತ್ತದೆ. ಅದರೊಂದಿಗೆ ಉತ್ತರ ಕರ್ನಾಟಕ ಶೈಲಿಯ ಊಟವು ಇರಲಿದೆ.

ಈ ವೇಳೆ ಐಐಐಟಿ ನಿರ್ಮಾಣಕ್ಕೆ ಜಾಗ ನೀಡಿದ ರೈತರು ಪಾಲ್ಗೊಳ್ಳಲಿದ್ದು, ಅವರಿಗೆ ಸನ್ಮಾನ ಮಾಡಲಾಗುವುದು. ರಾಷ್ಟ್ರಪತಿಗಳು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವ ಬಗ್ಗೆ ಇನ್ನೂ ಚರ್ಚಿಸಿಲ್ಲ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಾಜ್ಯಪಾಲರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರು, ರಾಜ್ಯ ಸಚಿವರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ಕಾರ್ಯಕ್ರಮದ ಸಿದ್ಧತೆಯು ಸಮರ್ಪಕವಾಗಿ ನಡೆಯುತ್ತಿದೆ ಎಂದು ಶಾಸಕ ಅರವಿಂದ ಬೆಲ್ಲದ ತಿಳಿಸಿದರು.

ಈ ಸಂದರ್ಭದಲ್ಲಿ ಧಾರವಾಡ ಐಐಐಟಿಯ ಕುಲಸಚಿವ ಚನ್ನಪ್ಪ ಅಕ್ಕಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೋಶ ಜಗಲಾಸರ್ ಸೇರಿದಂತೆ ಐಐಐಟಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Share this article!

Leave a Reply

Your email address will not be published. Required fields are marked *

error: Content is protected !!