ಕರ್ನಾಟಕ ಲೋಕಾಯುಕ್ತ ಧಾರವಾಡ ಕಛೇರಿಯ ಪೊಲೀಸ್ ಅಧಿಕಾರಿಗಳು ಧಾರವಾಡ ಜಿಲ್ಲೆಯ ವಿವಿಧ ತಾಲೂಕುಗಳಿಗೆ ಡಿಸೆಂಬರ್ 13 ರಿಂದ 17 ರವರೆಗೆ ಭೇಟಿ ನೀಡಿ, ಸಾರ್ವಜನಿಕರಿಂದ ದೂರು, ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ.
ಡಿಸೆಂಬರ್ 13 ರಂದು ಅಣ್ಣಿಗೇರಿ ಪುರಸಭೆ ಕಾರ್ಯಾಲಯ ಸಭಾಭವನದಲ್ಲಿ, ಡಿಸೆಂಬರ್ 14 ರಂದು ಧಾರವಾಡ ತಾಲೂಕ ಪಂಚಾಯತ ಕಾರ್ಯಾಲಯ ಸಭಾಭವನದಲ್ಲಿ ಅಹವಾಲು ಸ್ವೀಕರಿಸಲಿದ್ದಾರೆ.
ಕಲಘಟಗಿ ತಹಶೀಲ್ದಾರ್ ಕಾರ್ಯಾಲಯದಲ್ಲಿ, ಹುಬ್ಬಳ್ಳಿ ಮಿನಿ ವಿಧಾನಸೌಧ ತಾಲೂಕ ಪಂಚಾಯತ ಕಾರ್ಯಾಲಯ ಸಭಾಭವನದಲ್ಲಿ ಡಿಸೆಂಬರ್ 15 ರಂದು ದೂರನ್ನು ನೀಡಬಹುದು.
ಅಲ್ಲದೇ ಅಳ್ನಾವರ ಪಟ್ಟಣ ಪಂಚಾಯತ ಕಾರ್ಯಾಲಯ ಸಭಾಭವನದಲ್ಲಿ ಅಹವಾಲು ಸ್ವೀಕರಿಸಲಿದ್ದಾರೆ.
ಡಿಸೆಂಬರ್ 17 ರಂದು ನವಲಗುಂದ ತಾಲೂಕು ಪಂಚಾಯತ್ ಕಾರ್ಯಾಲಯ ಸಭಾಭವನದಲ್ಲಿ ಹಾಗೂ ಕುಂದಗೋಳ ತಹಶೀಲ್ದಾರ ಕಾರ್ಯಾಲಯದಲ್ಲಿ ಸಾರ್ವಜನಿಕರಿಂದ ದೂರು, ಅಹವಾಲು ಸ್ವೀಕರಿಸಲಿದ್ದಾರೆ.
ಅಹವಾಲು ಸ್ವೀಕಾರ ದಿನಗಳಂದು ಗೊತ್ತುಪಡಿಸಿರುವ ಸ್ಥಳಗಳಲ್ಲಿ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಬೆಳಿಗ್ಗೆ 11 ರಿಂದ ಮಧ್ಯಾಹ್ನ 02 ಗಂಟೆಯವರೆಗೆ ಲಭ್ಯವಿರುವರು.
ಯಾವುದೇ ಸರಕಾರಿ ಅಧಿಕಾರಿ, ನೌಕರರು ಸರ್ಕಾರಿ ಸೇವೆ ಒದಗಿಸುವಲ್ಲಿ ಲಂಚಕ್ಕೆ ಬೇಡಿಕೆ ಇಟ್ಟಲ್ಲಿ ಆ ಬಗ್ಗೆ ದೂರು ನೀಡಬಹುದು ಎಂದು ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.