ಸೆಪ್ಟೆಂಬರ್ 26 ರಂದು ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹುಬ್ಬಳ್ಳಿ–ಧಾರವಾಡ ಮಹಾನಗರದ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರ ಅಧ್ಯಕ್ಷತೆಯಲ್ಲಿ ನಿನ್ನೆ ಬೆಳಿಗ್ಗೆ ಕಚೇರಿ ಸಭಾಂಗಣದಲ್ಲಿ ರಾಷ್ಟ್ರಪತಿ ಗಳ ಕಾರ್ಯಕ್ರಮದ ಕುರಿತು ಪೂರ್ವ ಸಿದ್ಧತಾ ಸಭೆ ಜರುಗಿತು.
ಸಭೆ ಉದ್ದೇಶಿಸಿ ಮಾತನಾಡಿದ ಅವರು, ಸೆಪ್ಟೆಂಬರ್ 26 ರಂದು ಗೌರವಾನ್ವಿತ ರಾಷ್ಟ್ರಪತಿ ಗಳು ಮೈಸೂರಿನಿಂದ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಾರೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ಹುಬ್ಬಳ್ಳಿಯ ಜಿಮಖಾನಾ ಮೈದಾನದಲ್ಲಿ ಆಯೋಜಿಸಿರುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪೌರಸನ್ಮಾನ ಸ್ವೀಕರಿಸಲಿದ್ದಾರೆ.
ಕಾರ್ಯಕ್ರಮದ ನಂತರ ಅವರು ಧಾರವಾಡ ತಾಲೂಕಿನ ಸತ್ತೂರಿನಲ್ಲಿ ಸ್ಥಾಪಿತವಾಗಿರುವ ಧಾರವಾಡ ಐಐಐಟಿ ಕಟ್ಟಡ ಉದ್ಘಾಟಣೆ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ರಾಷ್ಟ್ರಪತಿಗಳ ಆಗಮನದಿಂದ ಹಿಡಿದು ನಿರ್ಗಮನದವರೆಗೆ ಕಡ್ಡಾಯವಾಗಿ ಶಿಷ್ಟಾಚಾರ ಪಾಲನೆ ಆಗಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಪೋಲಿಸ್, ಕಂದಾಯ, ಹೆಸ್ಕಾಂ, ಬಿಎಸ್ಎನ್ಎಲ್, ಆರೋಗ್ಯ ಇಲಾಖೆ, ಅಗ್ನಿಶಾಮಕ, ಆಹಾರ ಇಲಾಖೆ ಸೇರಿದಂತೆ ಕಾರ್ಯಕ್ರಮ ಸಂಬಂಧಿತ ಇಲಾಖೆಗಳ ಎಲ್ಲ ಅಧಿಕಾರಿಗಳು ತಮಗೆ ವಹಿಸಿದ ಕಾರ್ಯಗಳನ್ನು ಅಚ್ಚುಕಟ್ಟಾಗಿ ಮಾಡಬೇಕು.
ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಐಐಐಟಿ ಧಾರವಾಡದ ಕುಲಸಚಿವರು ಕಾರ್ಯಕ್ರಮ ವಿವರಗಳನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕೆಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.
ಸಭೆಯ ಪೂರ್ವದಲ್ಲಿ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಗಳೊಂದಿಗೆ ಜರುಗಿದ ವೀಡಿಯೊ ಸಂವಾದದಲ್ಲಿ ರಾಷ್ಟ್ರಪತಿಗಳ ಕಾರ್ಯಕ್ರಮದ ಸಿದ್ಧತೆಗಳನ್ನು ವಿವರಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ.ಸುರೇಶ ಇಟ್ನಾಳ, ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಲೋಕೇಶ ಜಗಲಾಸರ್, ಉಪಪೋಲಿಸ್ ಆಯುಕ್ತ ಸಾಹೀಲ್ ಬಾಗ್ಲಾ, ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ, ಹೆಸ್ಕಾಂ ಎಂ.ಡಿ. ಡಿ.ಭಾರತಿ, ಐಐಐಟಿ ಧಾರವಾಡದ ಕುಲಸಚಿವ ಚನ್ನಪ್ಪ ಅಕ್ಕಿ, ಉಪವಿಭಾಗಾಧಿಕಾರಿ ಅಶೋಕ ತೇಲಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿ ತಮ್ಮ ಇಲಾಖೆ ಸಿದ್ಧತೆಗಳನ್ನು ವಿವರಿಸಿದರು.