ಧಾರವಾಡ ಜಿಲ್ಲೆಯಲ್ಲಿ ಲಸಿಕಾ ಅಭಿಯಾನ ಅಭೂತಪೂರ್ವ ಯಶಸ್ಸು

ಧಾರವಾಡ ಜಿಲ್ಲೆಯಲ್ಲಿ ಇಂದು (ಸೆ.17) ಆಯೋಜಿಸಿದ್ದ ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮವಾದ ಬೃಹತ್ ಲಸಿಕಾ ಅಭಿಯಾನವು ಅಭೂತಪೂರ್ವ ಯಶಸ್ಸು ಕಂಡಿದೆ.

ಇಂದು ಬೆಳಿಗ್ಗೆ 7 ಗಂಟೆಯಿಂದ  ಆರಂಭವಾದ ಲಸಿಕಾಕರಣದಲ್ಲಿ ಸಂಜೆ 6 ಗಂಟೆಯವರೆಗೆ ಒಂದೇ ದಿನ 96.185 ಜನ ಲಸಿಕೆ ಪಡೆದಿದ್ದು, ಗುರಿಗಿಂತ ಹೆಚ್ಚುವರಿ ಸಾಧನೆಯಾಗಿದೆ.

ಲಸಿಕಾಕರಣವು ರಾತ್ರಿ 9 ಗಂಟೆಯವರೆಗೆ ಮುಂದುವರಿಯಲಿದ್ದು, ಈ ಯಶಸ್ಸಿಗೆ ಕಾರಣರಾಗಿರುವ ಜಿಲ್ಲೆಯ ಎಲ್ಲ ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಗೂ ಜಿಲ್ಲಾಡಳಿತ ಕರೆಗೆ ಸ್ಪಂದಿಸಿ ಸಕ್ರಿಯವಾಗಿ ಲಸಿಕಾ ಅಭಿಯಾನದಲ್ಲಿ ಭಾಗಿಯಾಗಿರುವ ಜಿಲ್ಲೆಯ ನಾಗರಿಕರಿಗೆ ಜಿಲ್ಲಾಡಳಿತದ ಪರವಾಗಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಕೃತಜ್ಞತೆಗಳನ್ನು ತಿಳಿಸಿದ್ದಾರೆ.

 ಈ ಕುರಿತು ಪ್ರಕಟಣೆ ನೀಡಿರುವ ಅವರು, ಕಳೆದ ಎರಡು ವರ್ಷಗಳಿಂದ ರಾಷ್ಟ್ರ, ರಾಜ್ಯವನ್ನು ಬಾಧಿಸುತ್ತಿರುವ ಕೋವಿಡ್-19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಸಾರ್ವಜನಿಕರಿಗೆ ಉಚಿತವಾಗಿ ಕೋವಿಡ್ ನಿರೋಧಕ ಲಸಿಕೆಗಳನ್ನು ನೀಡಲು ಕ್ರಮ ಕೈಗೊಳ್ಳಲಾಗಿದೆ.

ಮುಖ್ಯಮಂತ್ರಿಯವರಾದ ಬಸವರಾಜ ಬೊಮ್ಮಾಯಿ ಅವರು ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮವಾಗಿ ವಿಶೇಷ ಬೃಹತ್ ಕೋವಿಡ್ ಲಸಿಕಾ ಅಭಿಯಾನವನ್ನು ಘೋಷಿಸಿದ್ದಾರೆ. ರಾಜ್ಯದ ಜನರ ಸ್ವಾಸ್ಥ್ಯಕ್ಕಾಗಿ ಇಂದು (ಸೆ.17) ಜಿಲ್ಲೆಯಾದ್ಯಂತ ಬೃಹತ್ ಲಸಿಕಾ ಅಭಿಯಾನವನ್ನು ಆಯೋಜಿಸಲು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದ್ದರು.

ಅದರಂತೆ ಧಾರವಾಡ ಜಿಲ್ಲೆಯಲ್ಲಿ ಬೃಹತ್ ಲಸಿಕಾ ಅಭಿಯಾನವನ್ನು ಜಿಲ್ಲೆಯ ಪ್ರತಿ ಗ್ರಾಮಗಳಲ್ಲಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಒಂದು ಆಂದೋಲನವಾಗಿ ರೂಪಿಸಿ, ಸಂಘಟಿಸಿ, ಯಶಸ್ವಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಸೆಪ್ಟೆಂಬರ್ 16 ರ ವರೆಗಿನ ಸಾಧನೆ: ಕಳೆದ ಜನೆವರಿ 16, 2021 ರಂದು ಧಾರವಾಡ ಜಿಲ್ಲೆಯ ಒಟ್ಟು 14,68,159 ಜನರಿಗೆ ಲಸಿಕಾಕರಣಕ್ಕಾಗಿ ಸರ್ಕಾರವು ಲಸಿಕೆ ನೀಡುವ ಗುರಿ ನಿಗದಿಪಡಿಸಿತ್ತು.

2021 ರ ಜನವರಿ 16 ರಿಂದ ಸೆಪ್ಟೆಂಬರ್ 16ರ ವರೆಗೆ 9,91,219 ಜನರಿಗೆ ಮೊದಲ ಡೋಸ್ ಲಸಿಕೆ ನೀಡಿ ಶೇ.67.51 ರಷ್ಟು ಸಾಧನೆಯಾಗಿದೆ. ಎರಡನೇಯ ಡೋಸ್ ಪಡೆಯಲು ಅರ್ಹತೆ ಪಡೆದಿರುವ 9,91,219 ಜನರ ಪೈಕಿ 2,98,669 ಜನ ಎರಡನೇ ಡೋಸ್ ಪಡೆದಿದ್ದು ಶೇ.30.13 ರಷ್ಟು ಸಾಧನೆಯಾಗಿತ್ತು. 

ಸೆಪ್ಟೆಂಬರ್ 17 ರ ಲಸಿಕಾ ಅಭಿಯಾನದ ಗುರಿ: ಇಂದಿನ ಬೃಹತ್ ಲಸಿಕಾ ಅಭಿಯಾನದಲ್ಲಿ ಜಿಲ್ಲೆಯ 85 ಸಾವಿರ ಜನರಿಗೆ ಲಸಿಕೆ ನೀಡುವ ಗುರಿ ನಿಗದಿ ಪಡಿಸಲಾಗಿತ್ತು. ಜಿಲ್ಲೆ, ತಾಲ್ಲೂಕಾ ಹಾಗೂ ಗ್ರಾಮ ಮಟ್ಟ ಸೇರಿದಂತೆ ಎಲ್ಲ ಹಂತದಲ್ಲೂ ಪೂರ್ವ ಸಿದ್ಧತೆ, ಪ್ರಗತಿ ಪರಿಶೀಲನಾ ಸಭೆಗಳನ್ನು ನಿರಂತರವಾಗಿ ಜರುಗಿಸಿ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ ಸಿಇಓ ಅವರ ನೇತೃತ್ವದಲ್ಲಿ ಜಿಲ್ಲಾಡಳಿತವು ಎಲ್ಲ ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಒಳಗೊಂಡ ತಂಡಗಳನ್ನು ರಚಿಸಿ, ನಿಗದಿತ ಗುರಿ ಸಾಧಿಸಲು ಕಳೆದ ಮೂರು ದಿನಗಳಿಂದ ಶ್ರಮಿಸಿದೆ ಎಂದು ಅವರು ತಿಳಿಸಿದ್ದಾರೆ. 

ಇಂದು ಬೆಳಿಗ್ಗೆ 7 ಗಂಟೆಯಿಂದ  ಆರಂಭವಾದ ಲಸಿಕಾಕರಣದಲ್ಲಿ ಸಂಜೆ 6 ಗಂಟೆಯವರೆಗೆ ಒಂದೇ ದಿನ 96,185 ಜನ ಲಸಿಕೆ ಪಡೆದಿದ್ದು, ಈಗಾಗಲೇ ಸರ್ಕಾರವು ಜಿಲ್ಲೆಗೆ ನಿಗದಿಪಡಿಸಿದ್ದ 85 ಸಾವಿರ ಲಸಿಕೆ ಹಾಕುವ ಗುರಿ ತಲುಪ್ಪಿದ್ದು, ಗುರಿಗಿಂತ ಹೆಚ್ಚುವರಿ ಸಾಧನೆಯಾಗಿದೆ.

ಲಸಿಕಾಕರಣವು ರಾತ್ರಿ 9 ಗಂಟೆಯವರೆಗೆ ಮುಂದುವರಿಯಲಿದ್ದು, ಜಿಲ್ಲಾಡಳಿತವು ಇಂದಿನ ಅಭಿಯಾನದಲ್ಲಿ ಜಿಲ್ಲೆಯ ಸುಮಾರು 1 ಲಕ್ಷ ಜನರಿಗೆ ಲಸಿಕೆ ಹಾಕುವ ಸ್ವಯಂ ಗುರಿ ಹೊಂದಿದೆ. ಇದನ್ನು ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದೆಂದು ಧಾರವಾಡ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ತಿಳಿಸಿದ್ದಾರೆ. 

 ಇಂದಿನ ಅಭಿಯಾನದಲ್ಲಿ ಲಸಿಕೆ ಪಡೆಯಲು ಅನುಕೂಲವಾಗುವಂತೆ ಆರೋಗ್ಯ ಇಲಾಖೆಯ ವೈದ್ಯರು ಹಾಗೂ ಸಿಬ್ಬಂದಿಗಳನ್ನು ಲಸಿಕಾ ಕೇಂದ್ರಗಳಿಗೆ ತಲುಪಿಸಲು ಜಿಲ್ಲಾಡಳಿತ 28 ವಾಹನಗಳು ಹಾಗೂ ಪ್ರತಿ ತಾಲೂಕಾ ಆಡಳಿತದ 6 ವಾಹನಗಳು ಸೇರಿ ಒಟ್ಟು 76 ವಾಹನಗಳನ್ನು ನಿಯೋಜಿಸಲಾಗಿತ್ತು.

Share this article!

Leave a Reply

Your email address will not be published. Required fields are marked *

error: Content is protected !!