ಇಂದಿನಿಂದ ಏಕಬಳಕೆಯ ಪ್ಲಾಸ್ಟಿಕ್ ವಸ್ತುಗಳ ಉತ್ಪಾದನೆ, ಬಳಕೆ ನಿಷೇಧ

ಪಾಲಿಸ್ಟರೀನ್ ಮತ್ತು ವಿಸ್ತರಿತ ಪಾಲಿಸ್ಟರೀನ್ ಸೇರಿದಂತೆ ಏಕ ಬಳಕೆಯ ಪ್ಲಾಸ್ಟಿಕ್ ತಯಾರಿಕೆ, ಆಮದು, ಸಂಗ್ರಹಣೆ, ವಿತರಣೆ, ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಿ ಇಂದು ಜುಲೈ 1 ರಿಂದ ಜಾರಿಗೊಳಿಸಲಾಗುತ್ತಿದೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ.ಬಿ.ಗೋಪಾಲಕೃಷ್ಣ ತಿಳಿಸಿದ್ದಾರೆ.

ನಿಷೇಧಿತ ಉತ್ಪನ್ನಗಳ ಜೊತೆಗೆ ಇಯರ್ ಬಡ್‌ಗಳು, ಬಲೂನ್‌ಗಳಿಗೆ ಬಳಸುವ ಪ್ಲಾಸ್ಟಿಕ್ ಸ್ಟಿಕ್‌ಗಳು, ಪ್ಲಾಸ್ಟಿಕ್ ಧ್ವಜಗಳು, ಪ್ಲಾಸ್ಟಿಕ್ ಕ್ಯಾಂಡಿ ಸ್ಟಿಕ್‌ಗಳು, ಪ್ಲಾಸ್ಟಿಕ್ ಐಸ್‌ಕ್ರೀಮ್ ಸ್ಟಿಕ್‌ಗಳನ್ನು ನಿಷೇಧಿಸಲಾಗಿದೆ.

ಅಲಂಕಾರಕ್ಕಾಗಿ ಬಳಸುವ ಪಾಲಿಸ್ಟರೀನ್ (ಥರ್ಮಾಕೋಲ್), ಪ್ಲಾಸ್ಟಿಕ್ ಪ್ಲೇಟ್‌ಗಳು, ಪ್ಲಾಸ್ಟಿಕ್ ಕಪ್‌ಗಳು ಮತ್ತು ಲೋಟಗಳು, ಫೋರ್ಕುಗಳು, ಪ್ಲಾಸ್ಟಿಕ್ ಚಮಚಗಳು, ಪ್ಲಾಸ್ಟಿಕ್ ಚಾಕುಗಳು, ಪ್ಲಾಸ್ಟಿಕ್ ಟ್ರೇಗಳಂತಹ ಕಟ್ಲರಿಗಳು, ಸ್ವೀಟ್ ಬಾಕ್ಸುಗಳ ಪ್ಯಾಕಿಂಗ್ ಫಿಲ್ಮ್ಗಳನ್ನು ನಿಷೇಧಿಸಲಾಗಿದೆ.

ಆಮಂತ್ರಣ ಪತ್ರಗಳು ಮತ್ತು ಸಿಗರೇಟ್ ಪ್ಯಾಕೆಟ್‌ಗಳು, 100 ಮೈಕ್ರಾನ್‌ಗಿಂತ ಕಡಿಮೆ ಪ್ಲಾಸ್ಟಿಕ್ ಅಥವಾ ಪಿವಿಸು ಬ್ಯಾನರ್‌ಗಳು, ಪ್ಲಾಸ್ಟಿಕ್ ಸ್ಟಿರರ್‌ಗಳು, ಇಂತಹ ಹೆಚ್ಚುವರಿ ಏಕ ಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳನ್ನು 2022 ಜುಲೈ 1 ರಿಂದ ನಿಷೇಧಿಸಲಾಗಿದೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (MOEF ಮತ್ತು CC) ನವದೆಹಲಿ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ನಿಯಮಗಳು ೨೦೨೧ ರ ಪ್ರಕಾರ ಜಾರಿಗೊಳಿಸಿದೆ.

ಉತ್ಪಾದಕರು, ದಾಸ್ತಾನುದಾರರು, ಚಿಲ್ಲರೆ ವ್ಯಾಪಾರಿಗಳಿಗೆ ಏಕಬಳಕೆಯ ಪ್ಲಾಸ್ಟಿಕ್ ಉತ್ಪಾದನೆ, ಸಂಗ್ರಹಣೆ, ವಿತರಣೆ, ಮಾರಾಟ ಮತ್ತು ಬಳಕೆಯನ್ನು ನಿಲ್ಲಿಸುವಂತೆ ತಿಳಿಸಲು ಸೂಚನೆಯನ್ನು ನೀಡಲಾಗಿದೆ.

ಪ್ಲಾಸ್ಟಿಕ್ ವಸ್ತುಗಳ ಶೂನ್ಯ ದಾಸ್ತಾನುಗಳನ್ನು ಖಚಿತಪಡಿಸಿಕೊಳ್ಳಲು ಸಂಬಂಧಿಸಿದ ಘಟಕಗಳಿಂದ ಅಗತ್ಯ ಕ್ರಮವನ್ನು ತೆಗೆದುಕೊಳ್ಳಲಾಗಿದೆ.

ಆದೇಶವನ್ನು ಉಲ್ಲಂಘಿಸಿದರೆ ಪರಿಸರ (ಸಂರಕ್ಷಣೆ) ಕಾಯ್ದೆ, 1986 ರಡಿಯಲ್ಲಿ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳ ವಶಪಡಿಸಿಕೊಳ್ಳುವ ಮತ್ತು ಮುಚ್ಚಲು ಕ್ರಮವಹಿಸಲಾಗುತ್ತದೆ.

ಮಹಾನಗರ ಪಾಲಿಕೆಯ ಉಪನಿಯಮಗಳು-2019 ರನ್ವಯ ದಂಡ ವಿಧಿಸಲಾಗುವುದು ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share this article!

Leave a Reply

Your email address will not be published. Required fields are marked *

error: Content is protected !!