2021 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿ ಜಿಲ್ಲೆಗೆ ಕೀರ್ತಿ ತಂದಿರುವ ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು, ಇಂದು ಬೆಳಿಗ್ಗೆ ತಮ್ಮ ಬಂಗಲೆಗೆ ಕರೆದು ಅವರೊಂದಿಗೆ ಉಪಹಾರ ಮಾಡಿ, ಹಿರಿಯ ಅಧಿಕಾರಿಗಳೊಂದಿಗೆ ಸನ್ಮಾನಿಸಿ, ಅವರ ಸಾಧನೆಗೆ ಸ್ಫೂರ್ತಿ ತುಂಬಿದರು.
ಜಿಲ್ಲಾಧಿಕಾರಿಗಳ ನಿವಾಸಕ್ಕೆ ಆಗಮಿಸಿದ್ದ ವಿದ್ಯಾರ್ಥಿಗಳು ಅತ್ಯಂತ ಸಂತೋಷದಿಂದ ಪಾಲ್ಗೊಂಡು, ಜಿಲ್ಲಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಮುಕ್ತವಾಗಿ ಮಾತನಾಡಿ ತಮ್ಮ ಕನಸು, ಗುರಿಗಳನ್ನು ಹಂಚಿಕೊಂಡರು.
ಧಾರವಾಡದ ಪ್ರೆಸೆಂಟೇಷನ್ ಬಾಲಕಿಯರ ಫ್ರೌಢಶಾಲೆಯ ವಿದ್ಯಾರ್ಥಿನಿ ನಾಗಲಕ್ಷ್ಮೀ ಅಗಡಿ 625 ಕ್ಕೆ 625 ಅಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಬರುವದರೊಂದಿಗೆ ಜಿಲ್ಲೆಯ ಕಿರ್ತಿ ಹೆಚ್ಚಿಸಿದ್ದಾಳೆ ಎಂದು ಜಿಲ್ಲಾಧಿಕಾರಿಗಳು ಅಭಿಮಾನ ವ್ಯಕ್ತಪಡಿಸಿದರು.
ವಿಧ್ಯಾರ್ಥಿಗಳನ್ನು ಉದ್ದೇಶಿಸಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಮಾತನಾಡಿ, ವಿಧ್ಯಾರ್ಥಿಗಳು ತಮ್ಮ ಆಸಕ್ತಿ ಹಾಗೂ ಇಷ್ಟಗಳಿಗೆ ಅನುಗುಣವಾಗಿ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಓದಬೇಕು. ಯಾವುದೇ ವಿಷಯ ಆಯ್ಕೆ ಮಾಡಿಕೊಂಡರು ಎಲ್ಲದರಲ್ಲೂ ಟಾಪರ್ ಆಗಲು ಪ್ರಯತ್ನಿಸಬೇಕು.
ಐ.ಎ.ಎಸ್, ಐಪಿಎಸ್ ದಂತ ಪರೀಕ್ಷೆಗಳಿಗೆ ಈಗಿನಿಂದಲೇ ತಯಾರಿ ಮಾಡಿಕೊಳ್ಳಿ, ಓದಿನೊಂದಿಗೆ ಆಟ, ಇತರ ಚಟುವಟಿಕೆಗಳ ಹವ್ಯಾಸವು ಇರಲಿ. ಸೇವೆಗೆ ಸರ್ಕಾರಿ ಹಾಗೂ ಖಾಸಗಿ ಎರಡೂ ಕ್ಷೇತ್ರದಲ್ಲೂ ಸಾಕಷ್ಟು ಅವಕಾಶಗಳಿವೆ. ಆದರೆ ಉದ್ಯೋಗಿ ಆಗುವುದಕ್ಕಿಂತ ಉದ್ಯೋಗದಾತರು ಆಗುವ ಕಡೆಗೆ ನಿಮ್ಮ ಗಮನವಿರಲಿ ಎಂದು ಅವರು ಹೇಳಿದರು.
2021ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಜಿಲ್ಲೆಯಿಂದ ಒಟ್ಟು 25539 ರೆಗ್ಯುಲರ್ ವಿದ್ಯಾರ್ಥಿಗಳ ಪೈಕಿ 4463 ಎ ಪ್ಲಸ್, 9787 ಎ, 9978 ಬಿ, ಹಾಗೂ 2311 ಸಿ ಗ್ರೇಡ್‍ನಲ್ಲಿ ಪಾಸ್ ಆಗಿದ್ದಾರೆ.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಸುಶೀಲಾ. ಬಿ. ಅವರು ಮಾತನಾಡಿ, ವಿದ್ಯಾರ್ಥಿಗಳ ಓದು ನಿರಂತರವಾಗಿರಲಿ. ನಿರ್ದಿಷ್ಟ ಗುರಿಯೊಂದಿಗೆ ಶ್ರಮ ಪಟ್ಟರೆ ಯಾವುದೂ ಅಸಾಧ್ಯವಲ್ಲ. ತಮಗೆ ಇರುವ ಸವಲತ್ತು, ಅವಕಾಶಗಳನ್ನು ಉಪಯೋಗಿಸಿ, ಎಸ್.ಎಸ್‍ಎಲ್.ಸಿ ಸಾಧನೆಯಂತೆ ಉನ್ನತ ಸಾಧನೆ ಮಾಡಿ, ಇತರರಿಗೆ ಮಾದರಿಯಾಗಿ ಎಂದು ತಿಳಿಸಿದರು.
ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಗುರುದತ್ತ ಹೆಗಡೆ ಅವರು ಮಾತನಾಡಿ, ಸಾಧನೆಗೆ ಭಾಷೆ, ಪ್ರದೇಶ ಮುಖ್ಯವಲ್ಲ. ಕನ್ನಡದಲ್ಲಿ ಐಎಎಸ್ ಬರೆದು ಪಾಸಾಗಿರುವ ನಾನು ಈ ಧಾರವಾಡದಲ್ಲಿ ಬೆಳೆದವನು. ನಿರಂತರ ಶ್ರಮ, ಏಕಾಗ್ರತೆ, ಛಲ ನಮ್ಮನ್ನು ಗುರಿ ತಲಪಿಸುತ್ತದೆ. ವಿಧ್ಯಾರ್ಥಿಗಳು ತಮ್ಮಲ್ಲಿ ಸಾಧನೆಯ ಛಲ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಐಎಎಸ್ ಪ್ರೊಬೆಷನರಿ ಅಧಿಕಾರಿ ಮಧುಕರ ಗಿತ್ತೆ ಅವರು ಮಾತನಾಡಿ, ಎಸ್.ಎಸ್‍ಎಲ್.ಸಿ ನಂತರದ ಓದು ಜೀವನದ ಪ್ರಮುಖ ಘಟ್ಟ. ವಿಧ್ಯಾರ್ಥಿಗಳು ಯಾವುದೇ ವಿಷಯ ತಗೆದುಕೊಂಡರು ನಿರಂತರ ಮತ್ತು ಆಸಕ್ತಿಯಿಂದ ಓದುವುದು ಮುಖ್ಯ.
ಐಎಎಸ್, ಐಪಿಎಸ್ ಸೇರಿದಂತೆ ಯಾವುದು ಕಬ್ಬಿಣದ ಕಡಲೆ ಅಲ್ಲ; ಪ್ರಾಮಾಣಿಕ ಮತ್ತು ಆಸಕ್ತಿಯಿಂದ ಓದುವದರಿಂದ ಅಸಾಧ್ಯವೆನಿಸಿದ್ದನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಸಾರ್ವಜಿನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ.ಎಲ್.ಹಂಚಾಟೆ ಅವರು ಮಾತನಾಡಿ, 2021 ನೇ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶವು ಪ್ರಕಟವಾಗಿದ್ದು, ಧಾರವಾಡ ಜಿಲ್ಲೆಯ ಫಲಿತಾಂಶ ಶೇ 100 ಸಾಧನೆಯಾಗಿದೆ.
ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಒಟ್ಟು 29364 ವಿದ್ಯಾಥಿಗಳು ಹಾಜರಾಗಿದ್ದು, ಅವರಲ್ಲಿ ರೆಗ್ಯುಲರ್ ಫ್ರೆಶ್ 26539, ರೆಗ್ಯುಲರ್ ರಿಪೀಟರ್ 1904, ಪ್ರೈವೇಟ್ ಫ್ರೆಶ್ 702, ಪ್ರೈವೇಟ್ ರಿಪೀಟರ್ 210 ಹಾಗೂ ಎನ್.ಎಸ್.ಆರ್ 09 ಅಭ್ಯರ್ಥಿಗಳು ಪರೀಕ್ಷೆಯನ್ನು ಬರೆದಿದ್ದರು. ಒಟ್ಟು 15864 ಬಾಲಕರು ಹಾಗೂ 13500 ಬಾಲಕಿಯರು ಪರೀಕ್ಷೆ ಬರೆದಿದ್ದರು.
ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ ಒಟ್ಟು 413 ಶಾಲೆಗಳಿಂದ ಮಕ್ಕಳು ಪರೀಕ್ಷೆಗೆ ನೋಂದಾಯಿತರಾಗಿದ್ದು, ಅವುಗಳಲ್ಲಿ 119 ಸರಕಾರಿ ಶಾಲೆಗಳಿಂದ 7631 ವಿದ್ಯಾರ್ಥಿಗಳು, 141 ಖಾಸಗಿ ಅನುದಾನಿತ ಶಾಲೆಗಳಿಂದ 10860 ವಿದ್ಯಾರ್ಥಿಗಳು ಹಾಗೂ 153 ಖಾಸಗಿ ಅನುದಾರಹಿತ ಶಾಲೆಗಳಿಂದ 8048 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದರು.
ಜಿಲ್ಲೆಯ 413 ಶಾಲೆಗಳ ಪೈಕಿ 386 ಶಾಲೆಗಳು ಎ ಗ್ರೇಡ್, 25 ಶಾಲೆಗಳು ಬಿ ಗ್ರೇಡ್, ಹಾಗೂ 2 ಶಾಲೆಗಳು ಸಿ ಗ್ರೇಡ್ ಫಲಿತಾಂಶವನ್ನು ಸಾಧಿಸಿವೆ ಎಂದು ಹೇಳಿದರು.
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವ ಧಾರವಾಡ ಪ್ರಜೇಂಟೆಷನ್ ಬಾಲಕಿಯರ ಫ್ರೌಢ ಶಾಲೆಯ ವಿದ್ಯಾರ್ಥಿನಿ ನಾಗಲಕ್ಷ್ಮೀ ಅಗಡಿ ಸನ್ಮಾನ ಸ್ವಿಕರಿಸಿ ಮಾತನಾಡಿ, 2020-21ನೇ ಸಾಲಿನ ಶೈಕ್ಷಣೀಕ ವರ್ಷದ ಎಸ್.ಎಸ್.ಎಲ್.ಸಿ ಬೋರ್ಡ ಪರೀಕ್ಷೆಯಲ್ಲಿ ನಾನು 625 ಕ್ಕೆ 625 ಅಂಕ ಪಡೆದಿದ್ದು, ತುಂಬಾ ಸಂತೋಷವಾಗಿದೆ.
ಹಾಗೆಯೇ ನಾನು ಒಬ್ಬಳೇ ಜಿಲ್ಲೆಯಿಂದ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದುರಿಂದ ಧಾರವಾಡದ ಎಲ್ಲ ಜನರಿಗೂ ತುಂಬಾ ಖುಷಿ ಕೊಟ್ಟಿದೆ. ಜಿಲ್ಲೆಯ ಎಲ್ಲ ಶಾಲೆಗಳೂ ನನಗೆ ಸಮ್ಮಾನಕ್ಕೆ ಕರೆದಿದ್ದು ನನಗೆ ತುಂಬಾ ಸಂತೋಷ. ಅದರಲ್ಲೂ ನನಗೆ ತುಂಬಾ ಸಂತೋಷ ಕೊಟ್ಟಿದ್ದು ಅಂದರೆ ಜಿಲ್ಲಾಧಿಕಾರಿಯರಿಂದ ಸಮ್ಮಾನ ಪಡೆದಿದ್ದು.
ಅವರೆಂದರೆ ನಮಗೆ ಸ್ಪೂರ್ತಿ ಯಾಕೆಂದರೆ ಅವರು ಐಐಟಿ ಮುಗಿಸಿ ಕಠಿಣವಾದ ಯುಪಿಎಸ್‍ಸಿ ಪರೀಕ್ಷೆ ಮಾಡಿದ್ದಾರೆ. ನನ್ನ ಕನಸು ಎನೆಂದರೆ ಎಮ್‍ಬಿಬಿಎಸ್ ಮುಗಿಸಿ ಜನರ ಸೇವೆ ಮಾಡುವುದು ಯಾಕೆಂದರೆ ನಮ್ಮ ಭಾರತದಲ್ಲಿ ವೈದ್ಯರ ಕೊರತೆ ಬಹಳವಿದೆ ಆದರಿಂದ ವೈದ್ಯಕೀಯ ಓದಲು ಜಿ.ಪಂ.ಸಿಇಓ ಹಾಗೂ ಜಿಲ್ಲಾಧಿಕಾರಿಯವರಿಂದ ಸ್ಪೂರ್ತಿ ನನಗೆ ಇಂದು ದೊರೆತಿದೆ ಎಂದರು.
ಮಾದನಭಾವಿ ಸರಕಾರಿ ಪ್ರೌಡಶಾಲೆಯ ವಿದ್ಯಾರ್ಥಿನಿ ಪ್ರೀತಿ ಕೊಟಬಾಗಿ ಮಾತನಾಡಿ, ಸರ್ ನಾನು ನಿಮ್ಮಂತೆ ಮುಂದೆ ಜಿಲ್ಲಾಧಿಕಾರಿ ಆಗಬೇಕು, ನನ್ನನ್ನು ಕರೆದು ನನ್ನನ್ನು ಕರೆದು ಸ್ಪೂರ್ತಿ ನೀಡಿದ ಇದೇ ಬಂಗ್ಲೆಗೆ ಬರಬೇಕು. ಧಾರವಾಡ ಡಿಸಿ ಆಗಬೇಕು ಅನ್ನುವ ಆಸೆ ಇದೆ.
ಅದಕ್ಕಾಗಿ ಈಗಿನಿಂದಲೇ ಸಿದ್ಧತೆ ಆರಂಭಿಸುತ್ತೇನೆ. ನನಗೆ ಧಾರವಾಡ ಡಿಸಿ, ಸಿಇಓ ಅವರೇ ಮಾದರಿ ಎಂದು ಸಂತಸ ವ್ಯಕ್ತಪಡಿಸಿದಳು.ಮತ್ತು ಇತರ ವಿಧ್ಯಾರ್ಥಿಗಳು ತಮ್ಮ ಅನಿಸಿಕೆ ಹಂಚಿಕೊಂಡರು.
ಜಿಲ್ಲಾಧಿಕಾರಿ ನಿತೇಶ ಪಾಟೀಲ ಹಾಗೂ ಜಿ.ಪಂ. ಸಿಇಓ ಡಾ. ಸುಶೀಲಾ. ಬಿ. ಅವರು ವಿಧ್ಯಾರ್ಥಿಗಳಿಗೆ ಸನ್ಮಾನ ಮಾಡಿ ಪ್ರಮಾಣಪತ್ರ ನೀಡಿದರು. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಗಿರೀಶ ಪದಕಿ, ಜಿಲ್ಲಾಧಿಕಾರಿಗಳ ಆಪ್ತ ಸಹಾಯಕಾರದ ಸಾಗರ ಪಡ್ನವಿಸ್, ಜಯದೇವ ಒಂಟಮೂರಿಮಠ ಇದ್ದರು.
ಕಾರ್ಯಕ್ರಮದ ನಂತರ ಜಿಲ್ಲಾಧಿಕಾರಿಗಳ ನಿವಾಸದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮಾಳನ್ನು ಬಂಧಿಯಾಗಿ ಇಟ್ಟಿದ್ದ ಕೋಣೆಗೆ ವಿಧ್ಯಾರ್ಥಿಗಳು ಭೇಟಿ ನೀಡಿದರು. ಮತ್ತು ಜಿಲ್ಲಾಧಿಕಾರಿಗಳ ನಿವಾಸದ ವಿಹಂಗಮ ನೋಟ ಆನಂದಿಸಿದರು.