ಪ್ರತ್ಯೇಕ ಧಾರವಾಡ ಮಹಾನಗರ ಪಾಲಿಕೆ ರಚನೆಗೆ ಕ್ರಮ: ಶಾಸಕ ಅರವಿಂದ ಬೆಲ್ಲದ್

ಪ್ರತ್ಯೇಕ ಧಾರವಾಡ ಮಹಾನಗರ ಪಾಲಿಕೆ ರಚನೆಗಾಗಿ ಅಗತ್ಯವಿರುವ ಎಲ್ಲಾ ಮಾನದಂಡಗಳು ಪೂರ್ಣವಾಗಿದ್ದು, ಮಹಾನಗರ ಪಾಲಿಕೆ ರಚನೆಗೆ ಕ್ರಮವಹಿಸಿ ಆದೇಶ ಹೊರಡಿಸಬೇಕೆಂದು ನಗರಾಭಿವೃದ್ಧಿ ಸಚಿವರಲ್ಲಿ ಹುಬ್ಬಳ್ಳಿ- ಧಾರವಾಡ ಪಶ್ಚಿಮ ವಿಧಾನಸಭಾ ಮತಕ್ಷೇತ್ರದ ಶಾಸಕರಾದ ಅರವಿಂದ ಬೆಲ್ಲದ ಅವರು ಗಮನ ಸೆಳೆದರು.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು ನಮ್ಮ ರಾಜ್ಯದ ಎರಡನೇ ಅತೀ ದೊಡ್ಡ ಮಹಾನಗರ ಪಾಲಿಕೆಯಾಗಿದೆ. ಹುಬ್ಬಳ್ಳಿ- ಧಾರವಾಡವು ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿರುವ ಪ್ರದೇಶವಾಗಿದೆ.

ಸಮೀಪದ ಅನೇಕ ಹಳ್ಳಿಗಳು ಪಾಲಿಕೆಗೆ ಹತ್ತಿರದಲ್ಲಿವೆ. ಜನಸಂಖ್ಯೆಯು ಹೆಚ್ಚಿನ ಪ್ರಮಾಣದಲ್ಲಿದ್ದು, ಈ ಪ್ರದೇಶದಲ್ಲಿ ಕೈಗಾರಿಕೆ, ವಸತಿ ಹಾಗೂ ಶೈಕ್ಷಣಿಕ ಕ್ಷೇತ್ರದ ಎಲ್ಲಾ ಕ್ಷೇತ್ರಗಳು ಬೃಹದಾಕಾರವಾಗಿ ಬೆಳೆದಿವೆ ಎಂದು ಶಾಸಕ ಬೆಲ್ಲದ ತಿಳಿಸಿದರು.

ಸಾರ್ವಜನಿಕರ ಸಮಸ್ಯೆಗಳು ಶೀಘ್ರವಾಗಿ ಇತ್ಯರ್ಥವಾಗುತ್ತಿಲ್ಲ ಹಾಗೂ ಹಲವಾರು ಸಂಘಟನೆಗಳು ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಸ್ಥಾಪಿಸಬೇಕೆಂದು ಅಭಿಪ್ರಾಯಿಸಿವೆ.

ಸಾರ್ವಜನಿಕ ಹಿತದೃಷ್ಟಿಯಿಂದ ಹಾಗೂ ಧಾರವಾಡದ ಜನರ ಸರ್ವತೋಮುಖ ಅಭಿವೃದ್ಧಿ ಹಿತದೃಷ್ಟಿಯಿಂದ ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆಯನ್ನು ಸ್ಥಾಪಿಸುವಂತೆ ಶಾಸಕ ಅರವಿಂದ ಬೆಲ್ಲದ ಅವರು ನಗರಾಭಿವೃದ್ಧಿ ಹಾಗೂ ನಗರ ಯೋಜನೆ ಸಚಿವರ ಗಮನ ಸೆಳೆದರು.

ಈ ಸಂದರ್ಭದಲ್ಲಿ ಉತ್ತರಿಸಿದ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರಾದ ಸುರೇಶ ಬಿ.ಎಸ್. ಅವರು ಮಾತನಾಡಿ, ಹುಬ್ಬಳ್ಳಿ-ಧಾರವಾಡ ನಗರಗಳು ಅವಳಿ ನಗರವಾಗಿ ಗುರಿತಿಸಲ್ಪಟ್ಟಿದ್ದು, ಜಂಟಿಯಾಗಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಾಗಿ ಈಗಾಗಲೇ ಗುರುತಿಸಲ್ಪಟ್ಟಿವೆ.

ಈ ಮಹಾನಗರ ಪಾಲಿಕೆಯು 202.3 ಚದರ ಕಿ.ಮೀ. ವಿಸ್ತೀರ್ಣವನ್ನು ಹೊಂದಿದ್ದು, 2011ರ ಜನಗಣತಿಯನ್ವಯ 9,43,788 ಜನಸಂಖ್ಯೆ ಹೊಂದಿದೆ ಹಾಗೂ ಇಲ್ಲಿನ ಜನಸಾಂದ್ರತೆಯನ್ನು ಪ್ರತಿ ಚದರ ಕಿ.ಮೀ.ಗೆ 4,665 ಆಗಿದೆ.

ಒಂದು ನಗರ ಸ್ಥಳೀಯ ಸಂಸ್ಥೆಯನ್ನು ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸಲು 2011ರ ಜನಸಂಖ್ಯೆಯು ಮಾನದಂಡವಾಗಿದ್ದು, ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮ 1976 ರಲ್ಲಿರುವ ಮಾನದಂಡಗಳನ್ನು ಪೂರೈಸುತ್ತಿರುವ ಬಗ್ಗೆ ಪರಿಶೀಲಿಸಿ, ಧಾರವಾಡ ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸಲು ಕ್ರಮವಹಿಸಲಾಗುತ್ತಿದೆ ಎಂದು ಹೇಳಿದರು.

ಮಹಾನಗರ ಪಾಲಿಕೆ ರಚನೆಗೆ ಅರ್ಹತೆ: ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮ 1976ರ ನಿಯಮ-3ರಲ್ಲಿ ತಿಳಿಸಿರುವಂತೆ ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸಲಾಗುವ ಪ್ರದೇಶದ ಜನಸಂಖ್ಯೆ 3 ಲಕ್ಷಕ್ಕಿಂತ ಕಡಿಮೆ ಇರಬಾರದು. ಅಂತಹ ಪ್ರದೇಶದ ಜನಸಂಖ್ಯೆಯ ಜನಸಾಂದ್ರತೆಯು ಆ ಪ್ರದೇಶದ ಒಂದು ಚದರ ಕಿ.ಮೀ. ವಿಸ್ರ್ತೀಣಕ್ಕೆ 3,000 ಕ್ಕಿಂತ ಕಡಿಮೆ ಇರಬಾರದು.

ಹಿಂದಿನ ನಿಕಟಪೂರ್ವ ಜನಗಣತಿಯಲ್ಲಿ ಅಂತಹ ಪ್ರದೇಶದಿಂದ ಸ್ಥಳೀಯ ಆಡಳಿತಕ್ಕಾಗಿ ತೆರಿಗೆ ಮತ್ತು ತೆರಿಗೆಯಲ್ಲದ ಇತರ ಸಂಪನ್ಮೂಲಗಳಿಂದ ಉತ್ಪಾದಿತವಾದ ರಾಜಸ್ವ ವಾರ್ಷಿಕ ರೂ. 6.00 ಕೋಟಿ ಅಥವಾ ವಾರ್ಷಿಕ ತಲಾ ಒಬ್ಬರಿಗೆ ರೂ. 200 ಗಳ ದರದಂತೆ ಲೆಕ್ಕಹಾಕಲಾದ ಮೊತ್ತ ಇವೆರಡರಲ್ಲಿ ಯಾವುದು ಹೆಚ್ಚೋ ಆ ಮೊತ್ತಕ್ಕಿಂತ ಕಡಿಮೆ ಇರಬಾರದು.

ಮತ್ತು ಅಂತಹ ಪ್ರದೇಶದಲ್ಲಿನ ಕೃಷಿಯೇತರ ಚಟುವಟಿಕೆಗಳಲ್ಲಿನ ಉದ್ಯೋಗಾವಕಾಶಗಳ ಶೇಕಡಾವಾರು ಪ್ರಮಾಣವು ಒಟ್ಟು ಉದ್ಯೋಗದ ಪ್ರಮಾಣದಲ್ಲಿ ಶೇ. 50 ಕ್ಕಿಂತ ಕಡಿಮೆಯಿಲ್ಲದಿರುವುದನ್ನು ಪರಿಗಣಿಸಲಾಗುತ್ತದೆ.

ಈ ಎಲ್ಲಾ ಮಾನದಂಡಗಳನ್ನು ಪೂರೈಸುತ್ತಿರುವ ಧಾರವಾಡ ನಗರಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆಯನ್ನು ರಚಿಸಲು ಕ್ರಮಕೈಗೊಳ್ಳಲಾಗುವುದೆಂದು ನಗರಾಭಿವೃದ್ಧಿ ಸಚಿವ ಸುರೇಶ ಬಿ.ಎಸ್. ಅವರು ತಿಳಿಸಿದರು.

ಧಾರವಾಡ ಜಿಲ್ಲಾಧಿಕಾರಿಗಳು ಧಾರವಾಡ ನಗರವನ್ನು ಮಾತ್ರ ಪ್ರತ್ಯೇಕ ಮಹಾನಗರ ಪಾಲಿಕೆಯನ್ನಾಗಿ ಮೇಲ್ದರ್ಜೆಗೇರಿಸುವುದು ಸೂಕ್ತವೆಂದು ಗುರುತಿಸಿ, ಈ ಕುರಿತಂತೆ ಅಗತ್ಯ ದಾಖಲೆಗಳೊಂದಿಗೆ ಪ್ರಸ್ತಾವನೆಯನ್ನು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಿಗೆ ಸಲ್ಲಿಸಬೇಕು.

ಪೌರಾಡಳಿತ ನಿರ್ದೇಶಕರಿಂದ ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮ 1976 ರನ್ವಯ ಸೂಕ್ತ ಶಿಫಾರಸ್ಸಿನೊಂದಿಗೆ ಪ್ರಸ್ತಾವನೆಯು ಸರ್ಕಾರದಲ್ಲಿ ಸ್ವೀಕೃತವಾದಲ್ಲಿ ನಿಯಮಾನುಸಾರ ಅರ್ಹತೆಯನ್ನು ಪರಿಶೀಲಿಸಿ ಕ್ರಮವಹಿಸಲಾಗುತ್ತದೆ ಎಂದು ನಗರಾಭಿವೃದ್ಧಿ ಸಚಿವರು ಸದನದಲ್ಲಿ ತಿಳಿಸಿದರು.

Share this article!

One thought on “ಪ್ರತ್ಯೇಕ ಧಾರವಾಡ ಮಹಾನಗರ ಪಾಲಿಕೆ ರಚನೆಗೆ ಕ್ರಮ: ಶಾಸಕ ಅರವಿಂದ ಬೆಲ್ಲದ್

Leave a Reply

Your email address will not be published. Required fields are marked *

error: Content is protected !!