ಧಾರವಾಡ ಜಿಲ್ಲೆಯ 42 ಪರೀಕ್ಷಾ ಕೇಂದ್ರಗಳಲ್ಲಿ ಏಪ್ರಿಲ್ 22 ರಿಂದ ಮೇ 18 ರವರೆಗೆ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಗಳು ಜರುಗಲಿವೆ.
25,198 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲು ಅರ್ಹತೆ ಪಡೆದಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ನೂತನ ಸಭಾಂಗಣದಲ್ಲಿಂದು(ಸೋಮವಾರ) ನಡೆದ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷಾ ಪೂರ್ವಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಧಾರವಾಡ ಜಿಲ್ಲೆಯಲ್ಲಿ ಒಟ್ಟು 5 ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿರುತ್ತದೆ. ಧಾರವಾಡ ನಗರ- 17, ಧಾರವಾಡ ಗ್ರಾಮೀಣ -2, ಹುಬ್ಬಳ್ಳಿ ಶಹರ– 15, ಹುಬ್ಬಳ್ಳಿ ಗ್ರಾಮೀಣ -03, ನವಲಗುಂದ -2, ಕಲಘಟಗಿ- 2, ಕುಂದಗೋಳ -01 ಹೀಗೆ ಒಟ್ಟು 42 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿವೆ.
ಪರೀಕ್ಷಾ ಅಕ್ರಮಗಳಿಗೆ ಆಸ್ಪದವಿಲ್ಲದಂತೆ ಮತ್ತು ಶಿಸ್ತುಬದ್ಧವಾಗಿ ಪರೀಕ್ಷೆಗಳು ಜರುಗುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯು ದ್ವಿತೀಯ ಪಿ.ಯು.ಸಿ ಪರೀಕ್ಷಾ ಕೇಂದ್ರಗಳಿಗೆ ಪರೀಕ್ಷೆ ಜರುಗುವ 2 ದಿನಗಳ ಮುಂಚೆ ಸ್ಯಾನಿಟೈಸೇಷನ್ ಮಾಡಬೇಕು. ಹೆಸ್ಕಾಂನವರು ಪರೀಕ್ಷಾ ದಿನಗಳಂದು ತಡೆರಹಿತ ವಿದ್ಯುತ್ ಪೂರೈಸಲು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರನ್ನು ಪರೀಕ್ಷೆಯ ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದ್ದು ಜಿಲ್ಲೆಯಲ್ಲಿ ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಸಮಯಕ್ಕೆ ಸರಿಯಾಗಿ ಪ್ರಶ್ನೆ ಪತ್ರಿಕೆಗಳನ್ನು ಕೊಂಡೊಯ್ಯಲು ಒಟ್ಟು 16 ಮಾರ್ಗಗಳನ್ನು ಗುರುತಿಸಲಾಗಿರುತ್ತದೆ.
ಪ್ರತಿ ಮಾರ್ಗಕ್ಕೆ 3 ಜನ ಅಧಿಕಾರಿಗಳ ತಂಡ ರಚಿಸಲಾಗಿದೆ. ಜಿಲ್ಲೆಯಲ್ಲಿ 13 ಜನ ವೀಕ್ಷಕರನ್ನು ನೇಮಿಸಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರಕ್ಕೆ ಸಿಟಿಂಗ್ ಸ್ವ್ಕಾಡ್ ಭೇಟಿ ನೀಡಿ ಪರೀಕ್ಷೆಗಳನ್ನು ಯಶಸ್ವಿಯಾಗಿ ಜರುಗಿಸಬೇಕೇಂದು ನಿರ್ದೇಶಿಸಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೃಷ್ಣಾ ನಾಯಕ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.