ಸತ್ತೂರಿನ ಎಸ್.ಡಿ.ಎಂ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಯ ಆವರಣದಲ್ಲಿ ಕಳೆದ ನವೆಂಬರ್ ಕೊನೆಯ ವಾರದಲ್ಲಿ ಕಾಣಿಸಿಕೊಂಡ ಕೋವಿಡ್ ಪ್ರಕರಣಗಳ ಕಾರಣದಿಂದ , ಸ್ಥಗಿತಗೊಳಿಸಲಾಗಿದ್ದ ಆಸ್ಪತ್ರೆಯ ಹೊರ ಮತ್ತು ಒಳರೋಗಿಗಳ ವಿಭಾಗದ ಸೇವೆಗಳನ್ನು ರಾಜ್ಯ ಮಟ್ಟದ ತಾಂತ್ರಿಕ ತಜ್ಞರ ಸಲಹಾ ಸಮಿತಿಯ ಶಿಫಾರಸ್ಸು ಆಧರಿಸಿ ಇಂದು ಡಿಸೆಂಬರ್ 3 ರಿಂದ ಪುನರಾರಂಭಿಸಲು ಷರತ್ತುಬದ್ಧ ಅನುಮತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಕೆ ಪಾಟೀಲ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಕಳೆದ ನವೆಂಬರ್ 17 ರಂದು ಎಸ್.ಡಿ.ಎಂ ಆವರಣದ ಬಳಿ ಇರುವ ಡಾ.ವಿರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ವೈದ್ಯಕೀಯ ಪದವಿ ವಿದ್ಯಾರ್ಥಿಗಳಲ್ಲಿ ಕೋವಿಡ್ ಸೋಂಕು ದೃಢಪಟ್ಟಿತ್ತು.
ನವೆಂಬರ್ 24 ರಿಂದ ಕಾಲೇಜಿನ ಆವರಣದ ಎರಡು ಹಾಸ್ಟೇಲುಗಳನ್ನು ಸೀಲ್‌ಡೌನ್ ಮಾಡಲಾಗಿತ್ತು. ನವೆಂಬರ್ 26 ರಿಂದ ಎಸ್ ಡಿ ಎಂ ಆಸ್ಪತ್ರೆಯ ಹೊರ ಮತ್ತು ಒಳರೋಗಿಗಳ ವಿಭಾಗದ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು.
ನವೆಂಬರ್ 23 ರಿಂದ ಡಿಸೆಂಬರ್ 1 ರವರೆಗೆ ವಿದ್ಯಾರ್ಥಿಗಳು, ವೈದ್ಯರು ,ಸಿಬ್ಬಂದಿ ಹಾಗೂ ಅವರ ಸಂಪರ್ಕಕ್ಕೆ ಬಂದ ವ್ಯಕ್ತಿಗಳು ಸೇರಿ ಒಟ್ಟು 7868 ಜನರ ಸ್ವ್ಯಾಬ್ ಸಂಗ್ರಹಿಸಿ,ಕೋವಿಡ್ ತಪಾಸಣೆ ಮಾಡಿದಾಗ 306 ಜನರಲ್ಲಿ ಸೋಂಕು ದೃಢಪಟ್ಟಿತ್ತು.
ನಂತರ ಇವುಗಳನ್ನು ಜಿನೋಮ್ ಸಿಕ್ವೆನ್ಸಿಂಗ್ ಪರೀಕ್ಷೆಗಾಗಿ ಬೆಂಗಳೂರಿನ ರಾಷ್ಟ್ರೀಯ ಜೀವವಿಜ್ಞಾನ ಪ್ರಯೋಗಾಲಯಗಳಿಗೆ ಕಳುಹಿಸಲಾಗಿತ್ತು. ಈ ಪ್ರಕರಣಗಳಲ್ಲಿ ಯಾವುದೇ ಹೊಸ ಪ್ರಬೇಧದ ವೈರಾಣು ಇಲ್ಲವೆಂಬುದು ದೃಢಪಟ್ಟಿದೆ.
ಎಸ್.ಡಿ.ಎಂ ವೈದ್ಯಕೀಯ ಕಾಲೇಜಿನ ಆಡಳಿತ ಮಂಡಳಿಯು ಆಸ್ಪತ್ರೆಯ ಓಪಿಡಿ ಮತ್ತು ಐಪಿಡಿಗಳ ಪುನರಾರಂಭಕ್ಕೆ ಅನುಮತಿ ಕೋರಿ ನವೆಂಬರ್ 30 ರಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿತ್ತು. ಈ ಕುರಿತು ರಾಜ್ಯ ಮಟ್ಟದ ತಾಂತ್ರಿಕ ತಜ್ಞರ ಸಲಹಾ ಸಮಿತಿಯ ಅಭಿಪ್ರಾಯ ಕೋರಲಾಗಿತ್ತು.
ಸಮಿತಿಯು ಡಿಸೆಂಬರ್ 2 ರಂದು ಸಭೆ ನಡೆಸಿ ಎಸ್ ಡಿ ಎಂ ಆಸ್ಪತ್ರೆಯ ಹೊರ ಮತ್ತು ಒಳರೋಗಿಗಳ ವಿಭಾಗದ ಸೇವೆಗಳ ಪುನರಾರಂಭಕ್ಕೆ ಅನುಮತಿ ನೀಡಬಹುದು ಎಂದು ಶಿಫಾರಸ್ಸು ಮಾಡಿದೆ.
ಸಮಿತಿಯ ಶಿಫಾರಸ್ಸುಗಳನ್ನು ಆಧರಿಸಿ, ಸಾಂಕ್ರಾಮಿಕ ರೋಗಗಳ ತಡೆ ಕಾಯ್ದೆ 1897 ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ 2005 ರಡಿ ಕೆಲವು ಷರತ್ತುಗಳನ್ನು ವಿಧಿಸಿ ಇಂದು ಡಿಸೆಂಬರ್ 3 ರಿಂದ ಎಸ್ ಡಿ ಎಂ ಆಸ್ಪತ್ರೆಯ ಸೇವೆಗಳ ಪುನರಾರಂಭಕ್ಕೆ ಅನುಮತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಎಸ್.ಡಿ.ಎಂ ಹೊರ ಮತ್ತು ಒಳ ರೋಗಿಗಳ ವಿಭಾಗ ಸೇವೆಗಳ ಪುನರಾರಂಭಕ್ಕೆ ಷರತ್ತುಗಳು
ಕೋವಿಡ್ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಅಳವಡಿಸಿಕೊಂಡು ಎಸ್.ಡಿ.ಎಂ ಆಸ್ಪತ್ರೆಯ ಹೊರ ಮತ್ತು ಒಳರೋಗಿಗಳ ವಿಭಾಗದ ಸೇವೆಗಳನ್ನು ಪುನರಾರಂಭಿಸಬಹುದು.
ಮುಂದಿನ ಎರಡು ತಿಂಗಳು ಅವಧಿಯವರೆಗೆ ಜನದಟ್ಟಣೆಗೆ ಕಾರಣವಾಗುವ ಯಾವುದೇ ಸಾಮಾಜಿಕ, ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಬಾರದು.
ಆಸ್ಪತ್ರೆಯ ಓಪಿಡಿ ಹಾಗೂ ಐಪಿಡಿಗಳಲ್ಲಿ ಸ್ವ್ಯಾಬ್ ಮಾದರಿಗಳನ್ನು ಕಡ್ಡಾಯವಾಗಿ ಸಂಗ್ರಹಿಸಿ, ಸರ್ಕಾರದ ಪ್ರಯೋಗಾಲಯಗಳಿಗೆ ಪರೀಕ್ಷಾ ವರದಿಗಾಗಿ ಕಳುಹಿಸಬೇಕು.ಸರ್ಕಾರವು ಉಚಿತವಾಗಿ ತಪಾಸಣೆ ಮಾಡುತ್ತದೆ.
ಕೋವಿಡ್ ನಿರೋಧಕ ಎರಡೂ ಡೋಸ್ ಲಸಿಕೆಗಳನ್ನು ಪಡೆದ ವ್ಯಕ್ತಿಗಳಿಗೆ ಮಾತ್ರ ಆಸ್ಪತ್ರೆ ಆವರಣದೊಳಗೆ ಪ್ರವೇಶ ನೀಡಬೇಕು. ಆರೋಗ್ಯದ ಕಾರಣಗಳಿಗಾಗಿ ಲಸಿಕೆ ಪಡೆಯದ ವ್ಯಕ್ತಿಗಳಿದ್ದರೆ ಅಂತಹವರ ಆರೋಗ್ಯ ಸುಧಾರಣೆಯಾದ ಬಳಿಕ ಲಸಿಕೆ ನೀಡಿ ಆಸ್ಪತ್ರೆಯಿಂದ ಬಿಡುಗಡೆ ಮಾಡಬೇಕು.
ಆಸ್ಪತ್ರೆಯ ಮುಖ್ಯದ್ವಾರದ ಬಳಿ ಲಸಿಕಾ ಹಾಗೂ ಸ್ವ್ಯಾಬ್ ಸಂಗ್ರಹಣಾ ತಂಡಗಳು ಕಾರ್ಯನಿರ್ವಹಿಸಬೇಕು. ಹಾಸ್ಟೇಲ್ ಆವರಣದಲ್ಲಿ ಕೊನೆಯ ಕೋವಿಡ್ ಪ್ರಕರಣ ಪತ್ತೆಯಾದ ಏಳು ದಿನಗಳ ನಂತರ ಸುರಕ್ಷತಾ ಕ್ರಮಗಳೊಂದಿಗೆ ಪುನರಾರಂಭಿಸಬಹುದು. ಸಮೀಕ್ಷಾ ಕಾರ್ಯ ನಿರಂತರವಾಗಿದ್ದು, ಸಂದೇಹಸ್ಪಾದ ಲಕ್ಷಣಗಳಿರುವ ವ್ಯಕ್ತಿಗಳನ್ನು ಕೋವಿಡ್ ತಪಾಸಣೆಗೆ ಒಳಪಡಿಸಬೇಕು.
ನವೆಂಬರ್ 18 ರ ನಂತರ ಕೇರಳ,ಮಹಾರಾಷ್ಟ್ರ ರಾಜ್ಯಗಳಿಗೆ ಭೇಟಿ ನೀಡಿದವರು. ಕಳೆದ ಮೂರು ವಾರಗಳ ಅವಧಿಯಲ್ಲಿ ವಿದೇಶಗಳಿಂದ ಹಿಂದಿರುಗಿದ ಪ್ರಯಾಣಿಕರನ್ನು ಸಾಂಸ್ಥಿಕ ಕ್ವಾರಂಟೈನ್‌ನಿಂದ ಬಿಡುಗಡೆ ಮಾಡುವ ಮುನ್ನ ನಿಯಮಾನುಸಾರ ಆರ್ ಟಿ ಪಿ ಸಿ ಆರ್ ತಪಾಸಣೆಗೆ ಒಳಪಡಿಸಬೇಕು.
ಸಾಂಸ್ಥಿಕ ಕ್ವಾರಂಟೈನ್‌ನಿಂದ ಬಿಡುಗಡೆ ಹೊಂದಿದವರು ಸ್ವಯಂ ಎಚ್ಚರಿಕೆ ವಹಿಸಿರಬೇಕು,ಯಾವುದೇ ರೋಗ ಲಕ್ಷಣಗಳು ಕಂಡು ಬಂದರೆ ಕೂಡಲೇ ಆರ್‌ಟಿಪಿಸಿಆರ್ ಅಥವಾ ಆರ್‌ಎಟಿ ತಪಾಸಣೆ ಮಾಡಿಸಿಕೊಳ್ಳಬೇಕು. ಕಂಟೇನ್‌ಮೆಂಟ್ ವಲಯದ ಎರಡು ಹಾಸ್ಟೇಲುಗಳಲ್ಲಿ ಕೋವಿಡ್ ಪ್ರಮಾಣೀಕೃತ ಸುರಕ್ಷತಾ ಶಿಷ್ಟಾಚಾರ ನಿಯಮಗಳನ್ನು ಪಾಲಿಸಬೇಕು.
ಐಸೋಲೇಷನ್‌ನಲ್ಲಿದ್ದ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯನ್ನು ಕರ್ನಾಟಕ ಸರ್ಕಾರದ ಮಾರ್ಗಸೂಚಿಗಳು, ಕ್ಲಿನಿಕಲ್ ಮ್ಯಾನೇಜ್‌ಮೆಂಟ್ ಪ್ರೊಟೋಕಾಲ್ ಮತ್ತು ಫಿಸಿಯನ್ನರು ನೀಡುವ ಕ್ಲಿನಿಕಲ್ ವಿಶ್ಲೇಷಣೆ ಆಧರಿಸಿ ಹತ್ತು ದಿನಗಳ ಬಳಿಕ ಬಿಡುಗಡೆ ಮಾಡಬಹುದು.
ಕೊನೆಯ ಕೋವಿಡ್ ಪ್ರಕರಣ ಪತ್ತೆಯಾದ 14 ದಿನಗಳ ನಂತರ ಕಂಟೇನ್‌ಮೆಂಟ್ ವಲಯದ ಹಾಸ್ಟೇಲುಗಳನ್ನು ಡಿ ನೋಟಿಫೈ ಮಾಡಲಾಗುವುದು. ಸರ್ಕಾರದ ಹೊಸ ಎಸ್‌ಓಪಿಗಳು ಜಾರಿಯಾಗುವವರೆಗೆ ಈ ನಿಯಮಗಳನ್ನು ಪಾಲಿಸಬೇಕು. ಎಲ್ಲಾ ಆರೋಗ್ಯ ಕಾರ್ಯಕರ್ತರು ಶೇ.100 ರಷ್ಟು ಕೋವಿಡ್ ನಿರೋಧಕ ಎರಡೂ ಲಸಿಕೆಗಳನ್ನು ಪಡೆದಿರಬೇಕು.
ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳಿಂದ ಆಗಮಿಸುವ ವ್ಯಕ್ತಿಗಳು ಕಳೆದ 72 ಗಂಟೆಗಳ ಅವಧಿಯಲ್ಲಿ ಪಡೆದ ಆರ್ ಟಿ ಪಿ ಸಿ ಆರ್ ನೆಗೆಟಿವ್ ವರದಿ ಹಾಗೂ ಕೋವಿಡ್ ನಿರೋಧಕ ಎರಡು ಡೋಸ್ ಲಸಿಕೆಗಳನ್ನು ಪಡೆದಿರಬೇಕು. ಇಲ್ಲದಿದ್ದರೆ 7 ದಿನಗಳ ಕ್ವಾರಂಟೈನ್‌ಗೆ ಒಳಪಡಿಸಿ 8 ನೇ ದಿನ ಕೋವಿಡ್ ತಪಾಸಣೆ ಮಾಡಿ ನೆಗೆಟಿವ್ ವರದಿ ದೊರೆತು,ಯಾವುದೇ ರೋಗ ಲಕ್ಷಣಗಳು ಇಲ್ಲದಿರುವದನ್ನು ದೃಢಪಡಿಸಿಕೊಂಡು ಬಿಡುಗಡೆ ಮಾಡಬೇಕು.
ಕೋವಿಡ್ ಪಾಸಿಟಿವ್ ಪ್ರಕರಣಗಳ ನಿರ್ವಹಣೆಗಾಗಿ ವಿಶೇಷ ಪ್ರತ್ಯೇಕ ವಾರ್ಡು ಮೀಸಲಿಟ್ಟಿರಬೇಕು ಎಂಬ ಷರತ್ತುಗಳನ್ನು ವಿಧಿಸಿ ಜಿಲ್ಲಾಧಿಕಾರಿಗಳು ಎಸ್.ಡಿ.ಎಂ ಆಸ್ಪತ್ರೆಯ ಹೊರ ಮತ್ತು ಒಳರೋಗಿಗಳ ವಿಭಾಗದ ಪುನರಾರಂಭಕ್ಕೆ ಅನುಮತಿ ನೀಡಿದ್ದಾರೆ.