ಧಾರವಾಡ ಜಿಲ್ಲೆಯಲ್ಲಿ ನಿರಂತರ ಮಳೆ, ಯಾವುದೇ ಜೀವಹಾನಿ ಆಗಿಲ್ಲ

ಧಾರವಾಡ ಜಿಲ್ಲೆಯಲ್ಲಿ ಸುರಿಯುತ್ತಿರುವ ನಿರಂತರ ಮಳೆ ಯಿಂದಾಗಿ ಇಲ್ಲಿಯವರೆಗೆ ಯಾವುದೇ ರೀತಿಯ ಜೀವಹಾನಿ ಉಂಟಾಗಿಲ್ಲ ಮತ್ತು ನಿನ್ನೆ ಪ್ರವಾಹದಲ್ಲಿ ಸಿಲುಕಿದ್ದ ಸುಮಾರು 9 ಜನರನ್ನು ಹಾಗೂ 495 ಕುರಿಗಳನ್ನು ರಕ್ಷಿಸಲಾಗಿದೆ.

ಜಿಲ್ಲೆಯಲ್ಲಿ ನೆರೆ, ಪ್ರವಾಹ ಪರಿಹಾರ ಕೈಗೊಳ್ಳಲು ಯಾವುದೇ ಆರ್ಥಿಕ ಕೊರತೆ ಇಲ್ಲ. ಜಿಲ್ಲಾಡಳಿತದಲ್ಲಿ ಸುಮಾರು 1.61 ಕೋಟಿ ಹಣ ಇದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಹೇಳಿದರು.

ಜಿಲ್ಲಾಧಿಕಾರಿಗಳು ನಿನ್ನೆ ಸಂಜೆ ಮಾನ್ಯ ಮುಖ್ಯಮಂತ್ರಿಗಳೊಂದಿಗೆ ನೆರೆ ಪ್ರವಾಹ ಕುರಿತು ಜರುಗಿದ ವಿಡಿಯೋ ಸಂವಾದದ ನಂತರ ಮಾಧ್ಯಮ ಪ್ರತಿನಿಧಿಗಳನ್ನುದ್ದೇಶಿಸಿ ಕಚೇರಿ ಸಭಾಂಗಣದಲ್ಲಿ ಮಾತನಾಡಿದರು. 

ಧಾರವಾಡ ಜಿಲ್ಲೆಯಲ್ಲಿ ನಿರಂತರ ಮಳೆ, ಯಾವುದೇ ಜೀವಹಾನಿ ಆಗಿಲ್ಲ
ಮಾನ್ಯ ಮುಖ್ಯಮಂತ್ರಿಗಳೊಂದಿಗೆ ನೆರೆ ಪ್ರವಾಹ ಕುರಿತು ಜರುಗಿದ ವಿಡಿಯೋ ಸಂವಾದ

 ಮಳೆ ಹಾನಿ ಹಾಗೂ ಸಾರ್ವಜನಿಕರ ರಕ್ಷಣೆಗಾಗಿ ಅಗತ್ಯ ಕ್ರಮ ಕೈಗೊಳ್ಳಲು ತಾಲೂಕಾ ಆಡಳಿತದೊಂದಿಗೆ  ಸಮನ್ವಯ ಸಾಧಿಸಿ ಕಾರ್ಯಕೈಗೊಳ್ಳು ಪ್ರತಿ ತಾಲೂಕಿಗೆ ಓರ್ವ ಜಿಲ್ಲಾಮಟ್ಟದ ಅಧಿಕಾರಿಯನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಿ, ನಿರಂತರವಾಗಿ ನಿಗಾವಹಿಸಲಾಗಿದೆ.

 ಗ್ರಾಮಮಟ್ಟದ ಹಾಗೂ ತಾಲೂಕಾ ಮಟ್ಟದ ಅಧಿಕಾರಿಗಳು ಕೇಂದ್ರಸ್ಥಾನದಲ್ಲಿದ್ದು, ಮಳೆಯಿಂದ ತೊಂದರೆಗೊಳಗಾದ ಸಾರ್ವಜನಿಕರಿಗೆ ತಕ್ಷಣಕ್ಕೆ ನೆರವಾಗಲು ಮತ್ತು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿ ಅಗತ್ಯ ಕ್ರಮ ವಹಿಸಲು ಆದೇಶಿಸಲಾಗಿದೆ. 

ತಹಶೀಲ್ದಾರರು ತಮ್ಮ ವ್ಯಾಪ್ತಿಯ ಪ್ರದೇಶದಲ್ಲಿನ ತಗ್ಗು ಪ್ರದೇಶ, ಹಳ್ಳ ಮತ್ತು ತೊರೆಗಳ ಪಕ್ಕದ ಪ್ರದೇಶಗಳಲ್ಲಿ ಜಾಗೃತಿ ವಹಿಸುವಂತೆ ಖುದ್ದಾಗಿ ನಿಗಾವಹಿಸಲು ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.

ಅಳ್ನಾವರ ತಾಲೂಕು: ಅಳ್ನಾವರ ತಾಲೂಕಿನಲ್ಲಿರುವ ಹುಲಿಕೇರಿಯ ಇಂದಿರಮ್ಮನ ಕೆರೆಯ  ಒಂದು ಭಾಗಕ್ಕೆ ನಿರ್ಮಿಸಿದ್ದ ತಡೆಗೋಡೆ ಸೋರಿಕೆಯಾಗಿ ನೀರು ಹೆಚ್ಚಿನ ಪ್ರಮಾಣದಲ್ಲಿ ಹೊರಹೋಗುತ್ತಿದ್ದು, ಅಳ್ನಾವರ ಪಟ್ಟಣದ ತಗ್ಗು ಪ್ರದೇಶದಲ್ಲಿ ನೆರೆ ಪ್ರವಾಹ ಉಂಟಾಗುವ ಸಾಧ್ಯತೆ ಇರುವುದರಿಂದ ಸುಮಾರು 200 ಕುಟುಂಬಗಳನ್ನು ಸ್ಥಳಾಂತರಗೊಳಿಸಲು ಕ್ರಮವಹಿಸಲಾಗಿದೆ. 

 ಹುಲಿಕೇರಿ ಇಂದಿರಮ್ಮನ ಕೆರೆ ದುರಸ್ತಿಗಾಗಿ ಮರುಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ಇನ್ನು ಎರಡ್ಮೂರು ದಿನಗಳವರೆಗೆ ನಿರಂತರವಾಗಿ ನಿಗಾವಹಿಸಿ ಅಗತ್ಯ ಕ್ರಮವಹಿಸಲು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಸ್ಥಳದಲ್ಲಿಯೇ ಇದ್ದು, ಕ್ರಮ ವಹಿಸಲು ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.

ನವಲಗುಂದ ತಾಲೂಕು: ನವಲಗುಂದ ತಾಲೂಕಿನ ಮೊರಬ-ಗುಮ್ಮಗೋಳ ರಸ್ತೆ ಬಂದ್ ಆಗಿರುವುದರಿಂದ ಬೆಣ್ಣೆಹಳ್ಳದಲ್ಲಿ ಇಂದು ಬೆಳಿಗ್ಗೆ 350 ಕುರಿಗಳು ಹಾಗೂ 8 ಜನ ಕುರಿಗಾರರು ಸಿಲುಕಿರುವ ಬಗ್ಗೆ ಮಾಹಿತಿ ಬಂದಿತ್ತು. ತಕ್ಷಣ ಅಗ್ನಿಶಾಮಕ ದಳದವರು ಹಾಗೂ ತಹಶೀಲ್ದಾರರು ಕ್ರಮವಹಿಸಿ ಅವರೆಲ್ಲರನ್ನು ರಕ್ಷಿಸಿ ಸುರಕ್ಷಿತವಾಗಿ ಕಾಪಾಡಿದ್ದಾರೆ.  

ಮತ್ತು ಸುಮಾರು 15 ಕುರಿಗಳು ನೀರಿನಲ್ಲಿ ತೇಲಿ ಹೋಗಿವೆ ಎಂದು ತಿಳಿದು ಬಂದಿದ್ದು, ಈ ಕುರಿತು ಪಶುಪಾಲನೆ ಇಲಾಖೆಯ ಅಧಿಕಾರಿಗಳಿಗೆ ಪರಿಶೀಲಿಸಿ ತಕ್ಷಣ ವರದಿ ಸಲ್ಲಿಸಲು ಸೂಚಿಸಲಾಗಿದೆ ಎಂದು ಹೇಳಿದರು.

 ಅಗತ್ಯವಿದ್ದಲ್ಲಿ ನವಲಗುಂದ ಪಟ್ಟಣದಲ್ಲಿ ನಾಲ್ಕು ಹಾಗೂ ಎಲ್ಲ ಗ್ರಾಮಗಳಲ್ಲಿ ಕಾಳಜಿ ಕೇಂದ್ರ ತೆರೆಯಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲು ತಾಲೂಕು ಆಡಳಿತಕ್ಕೆ ನಿರ್ದೇಶಿಸಲಾಗಿದೆ ಎಂದು ಅವರು ಹೇಳಿದರು.

ಕುಂದಗೋಳ ತಾಲೂಕು : ಕುಂದಗೋಳ ತಾಲೂಕಿನ ದೇವನೂರ ಗ್ರಾಮದಲ್ಲಿ ಪ್ರವಾಹದಲ್ಲಿ ಸಿಲುಕಿಕೊಂಡಿದ್ದ ಸುಮಾರು 180 ಕುರಿಗಳನ್ನು ರಕ್ಷಿಸಲಾಗಿದೆ. ಕೂಬಿಹಾಳ ಗ್ರಾಮದಲ್ಲಿ ಅತೀ ಮಳೆಯಿಂದಾಗಿ ಸುಮಾರು 20 ಮನೆಗಳ ಜನರನ್ನು ಸ್ಥಳಾಂತರಿಸಲಾಗಿದ್ದು, ಅವರ ಸಂಬಂಧಿಕರ ಮನೆಗಳಿಗೆ ತೆರಳಿದ್ದಾರೆ. ಮತ್ತು ಅಲ್ಲಿ ಕಾಳಜಿ ಕೇಂದ್ರ ತೆರೆಯಲು ಸಿದ್ಧಗೊಳಿಸಲಾಗಿದೆ ಎಂದು ಅವರು ಹೇಳಿದರು. 

 ಕಲಘಟಗಿ ಹಾಗೂ ಧಾರವಾಡ, ಹುಬ್ಬಳ್ಳಿ ತಾಲೂಕಿನಲ್ಲಿ ಮಳೆ ನಿರಂತರವಾಗಿದ್ದು, ವಿವಿಧ ಗ್ರಾಮಗಳಲ್ಲಿ ಕೆಲವು ಮನೆಗಳು ಭಾಗಶ: ಹಾನಿಯಾಗಿರುವ ಬಗ್ಗೆ ವರದಿಯಾಗಿದ್ದು,  ಇಲ್ಲಿಯವರೆಗೆ ಯಾವುದೇ ರೀತಿಯ ಹೆಚ್ಚಿನ ಹಾನಿ ಉಂಟಾಗಿರುವುದಿಲ್ಲ ಎಂದು ಅವರು ತಿಳಿಸಿದರು. 

ಸುಮಾರು 21 ಸಾವಿರ ಹೆಕ್ಟೇರ್ ಕೃಷಿ ಬೆಳೆ ಜಲಾವೃತ

ಜಿಲ್ಲೆಯಲ್ಲಿ ಮುಂಗಾರು ಮಳೆ ಉತ್ತಮವಾಗಿದ್ದರಿಂದ ನಿರೀಕ್ಷೆಗಿಂತ ಹೆಚ್ಚು ಭೂಮಿಯಲ್ಲಿ ಬಿತ್ತನೆಯಾಗಿತ್ತು. ಆದರೆ ಈಗ ಕೆಲವು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಇವತ್ತಿನವರೆಗೆ ಸುಮಾರು 21,732 ಹೆಕ್ಟೇರ್ ಪ್ರದೇಶದಲ್ಲಿನ ಕೃಷಿ ಬೆಳೆ ಭಾಗಶ: ಜಲಾವೃತವಾಗಿದೆ. 

ಅದರಲ್ಲಿ ಮುಖ್ಯವಾಗಿ 1,675 ಹೆಕ್ಟೇರ್ ಸೋಯಾಬೀನ್, 6,684 ಹೆಕ್ಟೇರ್ ಗೋವಿನಜೋಳ, 1,646 ಹೆಕ್ಟೇರ್ ಹೆಸರುಕಾಳು, 106 ಹೆಕ್ಟೇರ್ ಶೇಂಗಾ ಬೆಳೆ ಹಾಗೂ 813 ಹೆಕ್ಟೇರ್ ಹತ್ತಿಬೆಳೆ ಅತೀ ತೇವಾಂಶದಿಂದ ಹಾನಿಯಾಗಿದೆ ಎಂದು ಅವರು ತಿಳಿಸಿದರು.  

ಮಳೆ ಇಂದ 16 ಸೇತುವೆ, 52 ಕಿ.ಮೀ ರಸ್ತೆ ಭಾಗಶ: ಹಾನಿ

ಜಿಲ್ಲೆಯಲ್ಲಿ ಲೋಕೋಪಯೋಗಿ ಇಲಾಖೆ ಹಾಗೂ ಪಂಚಾಯತ್ ರಾಜ್ ಇಲಾಖೆಯ ನಿರ್ವಹಣೆಯಲ್ಲಿರುವ ವಿವಿಧ ತಾಲೂಕುಗಳಲ್ಲಿನ ಸುಮಾರು 16 ಸೇತುವೆಗಳು ಭಾಗಶ: ಹಾನಿಯಾಗಿದ್ದು, ಸಂಚಾರಕ್ಕೆ ಮುಕ್ತವಾಗಿವೆ.

25 ಕಿ.ಮೀ. ರಾಜ್ಯ ರಸ್ತೆ ಹಾಗೂ 27 ಕಿ.ಮೀ. ಜಿಲ್ಲಾ ರಸ್ತೆ ಭಾಗಶ: ಹಾನಿಯಾಗಿದ್ದು, ಮಳೆ ನಿಂತ ನಂತರ ದುರಸ್ತಿ ಮಾಡಲಾಗುವುದೆಂದು ಅವರು ತಿಳಿಸಿದರು.

 ವಿವಿಧ ತಾಲೂಕುಗಳಲ್ಲಿನ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸುಮಾರು 16 ರಸ್ತೆಗಳು ಅತೀಯಾದ ಮಳೆಯಿಂದಾಗಿ ತಾತ್ಕಾಲಿಕವಾಗಿ ಬಂದ್ ಆಗಿವೆ. ಮಳೆ ಕಡಿಮೆಯಾದಂತೆ ರಸ್ತೆಯ ಮೇಲಿನ ನೀರು ಸರಿದು ಸಂಚಾರಕ್ಕೆ ಮುಕ್ತವಾಗಲಿದೆ. ಅಲ್ಲಿಯವರೆಗೆ ಸಾರ್ವಜನಿಕರು ಈ ಸ್ಥಳಗಳಲ್ಲಿ ಸಂಚರಿಸದಂತೆ ಜಾಗೃತಿ ಮೂಡಿಸಲಾಗಿದೆ ಎಂದು ಅವರು ಹೇಳಿದರು.

ಮಾನ್ಯ ಮುಖ್ಯಮಂತ್ರಿಗಳೊಂದಿಗಿನ ಸಂವಾದ : ಮಾನ್ಯ ಮುಖ್ಯಮಂತ್ರಿಗಳು ನೆರೆಪೀಡಿತ 8 ಜಿಲ್ಲೆಗಳ ಜಿಲ್ಲಾಧಿಕಾರಿ ಹಾಗೂ ಸಿಇಓ ಅವರೊಂದಿಗೆ ನೆರೆ ಪ್ರವಾಹ ಕುರಿತು ವಿಡಿಯೋ ಸಂವಾದ ಜರುಗಿಸಿ ಮುಂದಿನ 24 ಗಂಟೆ ಮಳೆ ಕುರಿತು ಅಲರ್ಟ್ ಇರುವಂತೆ ನಿರ್ದೇಶನ ನೀಡಿದರು.

 ಯಾವುದೇ ಜೀವಹಾನಿ ಆಗದಂತೆ ಮುನ್ನೆಚ್ಚರಿಕೆ ವಹಿಸಲು ಮತ್ತು ರಸ್ತೆ, ಸೇತುವೆ, ಕಾಳಜಿ ಕೇಂದ್ರಗಳು ಅಗತ್ಯವಿದ್ದಲ್ಲಿ ತಕ್ಷಣ ಕ್ರಮವಹಿಸುವಂತೆ ಸೂಚಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ತಿಳಿಸಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. 

 ಮಾಧ್ಯಮಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ: ಸುಶೀಲಾ ಬಿ., ಮಹಾನಗರಪಾಲಿಕೆ ಆಯುಕ್ತ ಡಾ: ಸುರೇಶ್ ಇಟ್ನಾಳ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪವಿಭಾಗಾಧಿಕಾರಿ ಡಾ: ಗೋಪಾಲಕೃಷ್ಣ ಬಿ. ಉಪಸ್ಥಿತರಿದ್ದರು.

Share this article!

Leave a Reply

Your email address will not be published. Required fields are marked *

error: Content is protected !!