ಕೇರಳ ಮತ್ತು ಮಹಾರಾಷ್ಟ್ರದಿಂದ ಆಗಮಿಸುವ ಪ್ರಯಾಣಿಕರಿಗೆ ಕೋವಿಡ್ ತಪಾಸಣೆ ಕಡ್ಡಾಯ

ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳಿಂದ ಆಗಮಿಸುವ ಪ್ರಯಾಣಿಕರು ಹಿಂದಿನ 74 ಗಂಟೆಗಳ ಅವಧಿಯೊಳಗೆ ಪಡೆದಿರುವ ಕೋವಿಡ್ ಆರ್.ಟಿ.ಪಿ.ಸಿ.ಆರ್ ನೆಗೆಟಿವ್ ವರದಿಯನ್ನು ಒದಗಿಸುವುದು ಕಡ್ಡಾಯವಾಗಿದೆ. 

ಕೋವಿಡ್-19 ಸಾಂಕ್ರಾಮಿಕದ ನಿಯಂತ್ರಣಕ್ಕಾಗಿ ವಿಶೇಷ ಕ್ರಮ ಕೈಗೊಳ್ಳಲಾಗಿದೆ. ರಾಜ್ಯ ಸಾರಿಗೆ ಸಂಸ್ಥೆ, ರೇಲ್ವೆ ಇಲಾಖೆಯ ಸಕ್ಷಮ ಪ್ರಾಧಿಕಾರಿಗಳು, ವಿಮಾನ ನಿಲ್ದಾಣ ನಿರ್ದೇಶಕರು, ಖಾಸಗಿ ಸಾರಿಗೆ ಸಂಸ್ಥೆಗಳ ನಿರ್ವಹಣೆಕಾರರು ಪ್ರತಿ ದಿನ ಈ ಕುರಿತ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ಒದಗಿಸಬೇಕು ಎಂದು ಸೂಚಿಸಿ ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಆದೇಶ ಹೊರಡಿಸಿದ್ದಾರೆ.

ಈ ಕುರಿತ ಅಧಿಕೃತ ಜ್ಞಾಪನಾ ಪತ್ರ ಹೊರಡಿಸಿರುವ ಅವರು, ರಾಜ್ಯ ಸರ್ಕಾರದ ಆರೋಗ್ಯ ಮತು ಕುಟುಂಬ ಕಲ್ಯಾಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು ಜುಲೈ 31 ರಂದು ಹೊರಡಿಸಿರುವ ಸುತ್ತೋಲೆಯನ್ನು ಉಲ್ಲೇಖಿಸಿ ಜಿಲ್ಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳಿಂದ ಕರ್ನಾಟಕಕ್ಕೆ ಆಗಮಿಸುವ ವ್ಯಕ್ತಿಗಳು ಹಿಂದಿನ 72 ಗಂಟೆಗಳಲ್ಲಿ ಪಡೆದಿರುವ ಕೋವಿಡ್ ಆರ್.ಟಿ.ಪಿ.ಸಿ.ಆರ್ ನೆಗೆಟಿವ್ ವರದಿಯನ್ನು ಹೊಂದಿರಬೇಕು.

ಈ ಷರತ್ತು ವಿಮಾನ, ರೈಲು, ಬಸ್ಸು ಅಥವಾ ಸ್ವಂತ ಸಾರಿಗೆ ಸೌಕರ್ಯಗಳ ಮೂಲಕ ಆಗಮಿಸುವ ಎಲ್ಲಾ ಪ್ರಯಾಣಿಕರಿಗೂ ಅನ್ವಯವಾಗುತ್ತದೆ. ವಿಮಾನಯಾನ ಸಂಸ್ಥೆಗಳು 72 ಗಂಟೆಯೊಳಗಿನ ಆರ್.ಟಿ.ಪಿ.ಸಿ.ಆರ್ ನೆಗೆಟಿವ್ ವರದಿಯನ್ನು ಹೊಂದಿರುವ ಪ್ರಯಾಣಿಕರಿಗೆ ಮಾತ್ರ ಬೋರ್ಡಿಂಗ್ ಪಾಸ್‍ಗಳನ್ನು ನೀಡಬೇಕು. 

ರೈಲಿನ ಮೂಲಕ ಸಂಚರಿಸುವ ಪ್ರಯಾಣಿಕರು ಕೋವಿಡ್ ನೆಗೆಟಿವ್ ವರದಿಯನ್ನು ಹೊಂದಿರುವ ಬಗ್ಗೆ  ಸಂಬಂಧಿಸಿದ ಪ್ರಾಧಿಕಾರಗಳು ಖಚಿತ ಪಡಿಸಿಕೊಳ್ಳಬೇಕು. ಬಸ್ಸುಗಳ ಮೂಲಕ ಆಗಮಿಸುವ ಪ್ರಯಾಣಿಕರು ವರದಿಗಳನ್ನು ಕಂಡಕ್ಟರ್‍ಗಳು ನೋಡಿ ಖಚಿತ ಪಡಿಸಿಕೊಳ್ಳಬೇಕು.

ಶಿಕ್ಷಣ, ವ್ಯಾಪಾರ ಮತ್ತಿತರ ಕಾರಣಗಳಿಗಾಗಿ ರಾಜ್ಯಕ್ಕೆ ಪ್ರತಿನಿತ್ಯ ಆಗಮಿಸುವ ವ್ಯಕ್ತಿಗಳು ಪ್ರತಿ ಹದಿನೈದು ದಿನಗಳಿಗೆ ಒಮ್ಮೆ ಆರ್.ಟಿ.ಪಿ.ಸಿ.ಆರ್ ನೆಗೆಟಿವ್ ವರದಿ ಪಡೆಯಬೇಕು.

ಸಂವಿಧಾನಿಕ ಶಾಸನಬದ್ಧ ಕರ್ತವ್ಯನಿರತರು, ಆರೋಗ್ಯ ಕಾರ್ಯಕರ್ತರು, 2 ವರ್ಷದ ಮಕ್ಕಳಿಗೆ ಈ ಷರತ್ತಿನಿಂದ ವಿನಾಯತಿ ನೀಡಲಾಗಿದೆ. ಕುಟುಂಬದ ಸದಸ್ಯರ ಸಾವಿನ ಸಂದರ್ಭ, ತುರ್ತು ವೈದ್ಯಕೀಯ ಚಿಕಿತ್ಸೆಯ ಕಾರಣಗಳಿಗಾಗಿ ಆಗಮಿಸುವ ಪ್ರಯಾಣಿಕರು ರಾಜ್ಯ ಪ್ರವೇಶಿಸುವ ಸಂದರ್ಭದಲ್ಲಿ ಅವರ ಸ್ವ್ಯಾಬ್ ಸಂಗ್ರಹಿಸಿ ಗುರುತಿನ ಚೀಟಿ ಆಧರಿಸಿ, ಸಂಪರ್ಕ ಸಂಖ್ಯೆ, ವಿಳಾಸ ಮತ್ತಿತರ ಮಾಹಿತಿಗಳನ್ನು ಪಡೆದು ಅವಕಾಶ ನೀಡಬೇಕು. 

 ರಾಜ್ಯ ಸಾರಿಗೆ ಸಂಸ್ಥೆ ಅಧಿಕಾರಿಗಳು, ರೇಲ್ವೆ ಪ್ರಾಧಿಕಾರ, ವಿಮಾನ ನಿಲ್ದಾಣ ನಿರ್ದೇಶಕರು, ಹೋಟೇಲ್ ಮಾಲಿಕರು, ಖಾಸಗಿ ಬಸ್ ಸೇವೆ ನೀಡುವ ಸಂಸ್ಥೆಗಳು ಪ್ರತಿ ದಿನ ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳಿಂದ ಆಗಮಿಸಿದ ಪ್ರಯಾಣಿಕರ ಮಾಹಿತಿ ಹಾಗೂ ಅವರ ಆರ್.ಟಿ.ಪಿ.ಸಿ.ಆರ್ ನೆಗೆಟಿವ್ ವರದಿಗಳ ಕುರಿತ ಮಾಹಿತಿ ಸಂಗ್ರಹಿಸಿ ಜಿಲ್ಲಾಧಿಕಾರಿಗಳ ಕಚೇರಿಗೆ ಒದಗಿಸಬೇಕು ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ  ಸೂಚಿಸಿದ್ದಾರೆ.

Share this article!

Leave a Reply

Your email address will not be published. Required fields are marked *

error: Content is protected !!