ಧಾರವಾಡ ಜಿಲ್ಲೆಯ ಕುಸುಗಲ್ ಗ್ರಾಮದಲ್ಲಿ ವಾರ್ತಾ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಮೆಗಾ ಕಾನೂನು ಅರಿವು ಶಿಬಿರವನ್ನು ಉದ್ಘಾಟಿಸಲಾಯಿತು.
ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕಂದಾಯ ಇಲಾಖೆ, ತಾಲೂಕು ಪಂಚಾಯತ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳು ಸೇರಿ ಕಾನೂನು ಅರಿವು ಶಿಬಿರ ಆಯೋಜಿಸಲಾಗಿದೆ.
ಪ್ರತಿಯೊಬ್ಬರಿಗೂ ಕಾನೂನು ಅರಿವು ಅಗತ್ಯವಾಗಿದೆ. ಕಾನೂನುಗಳ ಬಗ್ಗೆ ತಿಳಿದುಕೊಳ್ಳಲು ಸಾರ್ವಜನಿಕರು ಮುಂದಾಗಬೇಕು ಎಂದು ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷ ಹಾಗೂ ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶರಾದ ಚಿನ್ನಣ್ಣವರ್ ಆರ್.ಎಸ್. ಹೇಳಿದರು.
ಜೀವನಕ್ಕೆ ಅವಶ್ಯಕವಾಗಿರುವ ಕಾನೂನುಗಳ ಕುರಿತು ಮೊದಲು ತಿಳಿದುಕೊಳ್ಳಬೇಕು. ಕಾನೂನು ಅರಿವಿನಿಂದ ಸುಸಜ್ಜಿತ ಜೀವನ ನಡೆಸಬಹುದು. ಆಸ್ತಿ ಮಾರಾಟ ಮಾಡಲು ನೋಂದಣಿ ಅವಶ್ಯ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ಮಹಿಳೆಯರು ಮತ್ತು ಮಕ್ಕಳ ಮೇಲೆ ದೌರ್ಜನ್ಯಗಳು ಆಗುತ್ತಿವೆ. ಈ ಕುರಿತು ಹಲವಾರು ಪ್ರಕರಣಗಳು ಇಂದು ಕೂಡ ನ್ಯಾಯಾಲಯಗಳಲ್ಲಿವೆ. ವರದಕ್ಷಿಣೆ ನಿರ್ಮೂಲನೆ ಮಾಡಬೇಕಾಗಿದೆ.
ವರದಕ್ಷಿಣೆ ನಿಷೇಧ ಕಾಯ್ದೆಯ ಬಗ್ಗೆ ಅರಿತುಕೊಳ್ಳಬೇಕು. ಎಲ್ಲರೂ ಶಾಂತಿ, ಸಹಬಾಳ್ವೆಯಿಂದ ಜೀವನ ನಡೆಸಲು ಚಿಂತನೆ ಮಾಡಬೇಕಾಗಿದೆ. ಲೋಕ ಅದಾಲತ್ ಮೂಲಕ ಹಲವಾರು ಪ್ರಕರಣಗಳು ಇತ್ಯರ್ಥವಾಗಿವೆ.
ರಾಜಿ ಸಂಧಾನದ ಮೂಲಕ ಬಗೆಹರಿಯದ ಪ್ರಕರಣಗಳನ್ನು ಬಗೆಹರಿಸಲಾಗಿದೆ. ಮನೆ ಬಾಗಿಲಿಗೆ ಕಾನೂನು ನೆರವು ನೀಡಲಾಗುತ್ತಿದೆ. ನಿಮ್ಮ ಸಮಸ್ಯೆಗಳನ್ನು ಪರಿಹರಿಸಲು ಕಾನೂನು ನೆರವು ಸಹಾಯಕವಾಗುವುದು. ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಎಲ್ಲರೂ ಮುಂದಾಗಬೇಕು ಎಂದರು.
ವಕೀಲರಾದ ಸಿದ್ಧನಗೌಡ ಕೆಂಚನಗೌಡ್ರ ಅವರು ಮಾತನಾಡಿ, ಹುಟ್ಟಿನಿಂದ ಸಾವಿನವರೆಗೂ ಕಾನೂನು ಮುಖ್ಯ ಪಾತ್ರವನ್ನು ವಹಿಸುತ್ತದೆ. ಉತ್ತಮ ಸಮಾಜ ನಿರ್ಮಾಣಕ್ಕೆ ಕಾನೂನು ಅವಶ್ಯಕವಾಗಿದೆ.
ಕಾನೂನು ಸಾಕ್ಷರತಾ ಶಿಬಿರದ ಮೂಲಕ ವಕೀಲರನ್ನು ನೇಮಕ ಮಾಡಿ ಕೊಡಲಾಗುತ್ತದೆ. ರಿಟ್ ಗಳ ಮೂಲಕ ಹೈಕೋರ್ಟ್, ಸುಪ್ರೀಂ ಕೋರ್ಟ್ ಮೂಲಕ ನ್ಯಾಯವನ್ನು ಪಡೆಯಬಹುದು ಎಂದು ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯ ವಿಷಯದ ಕುರಿತ ತಮ್ಮ ಉಪನ್ಯಾಸದಲ್ಲಿ ತಿಳಿಸಿದರು.
ವಕೀಲರಾದ ಸಿದ್ಧನಗೌಡ ಪಾಟೀಲ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ವಿವಿಧ ಇಲಾಖೆಯ ಯೋಜನೆಗಳು ಸಾರ್ವಜನಿಕರಿಗೆ ದೊರೆಯಬೇಕು. ಜನರಲ್ಲಿ ಕಾನೂನು ಕುರಿತು ಅರಿವು ಮೂಡಿಸಲು ಇಂತಹ ಕಾರ್ಯಕ್ರಮ ಅವಶ್ಯಕವಾಗಿದೆ.
ಕೌಟುಂಬಿಕ ಕಲಹ, ಹಣಕಾಸು, ಲೈಂಗಿಕ ದೌರ್ಜನ್ಯ ಇತರ ವ್ಯಾಜ್ಯಗಳ ಬಗ್ಗೆ ಕಾನೂನು ನೆರವು ಪಡೆಯಬಹುದಾಗಿರುತ್ತದೆ. ಪ್ರತಿಯೊಬ್ಬರೂ ಕಾನೂನು ನೆರವು ಕೇಂದ್ರದ ಸದುಪಯೋಗ ಪಡೆದುಕೊಳ್ಳಲು ಮುಂದಾಗಬೇಕು ಎಂದರು.
ಕುಸುಗಲ್ ಗ್ರಾಮ ಪಂಚಾಯತಿಯ ಅಧ್ಯಕ್ಷೆ ಗಿರಿಜವ್ವ ಬೆಂಗೇರಿ ಅಧ್ಯಕ್ಷತೆ ವಹಿಸಿದ್ದರು. ಹುಬ್ಬಳ್ಳಿ ಗ್ರಾಮೀಣ ಅಪರ ತಹಸೀಲ್ದಾರ ಶಿವಾನಂದ ಹೆಬ್ಬಳ್ಳಿ, ಉಪ ತಹಸೀಲ್ದಾರ ಸಿ.ಎಚ್. ನೀರಲಗಿ ಮತ್ತಿತರರು ಉಪಸ್ಥಿತರಿದ್ದರು.