ಯಲಿವಾಳ ದಲ್ಲಿ ಕಾನೂನು ಸೇವೆಗಳ ಬೃಹತ್ ಶಿಬಿರ

ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಯಲಿವಾಳ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಕಾನೂನು ಸೇವೆಗಳ ಬೃಹತ್ ಶಿಬಿರವನ್ನು ನಿನ್ನೆ ಆಯೋಜಿಸಲಾಗಿತ್ತು.

ಎಲ್ಲರೂ ಕಾನೂನು ನೆರವು ಪಡೆಯಲು ಮುಂದಾಗಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶೆ ಪುಷ್ಪಲತಾ ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಾರ್ಮಿಕ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಡಿಮಾನ್ಸ್, ಸ್ವಾಮಿ ವಿವೇಕಾನಂದ ಯೂಥ್ ಮೂವಮೆಂಟ್ ಧಾರವಾಡ.

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹುಬ್ಬಳ್ಳಿ, ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ಆಡಳಿತ, ಕುಂದಗೋಳ ವಕೀಲರ ಸಂಘ, ಯಲಿವಾಳ ಗ್ರಾಮ ಪಂಚಾಯಿತಿ ಇವುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕಾನೂನು ಸೇವೆಗಳ ಬೃಹತ್ ಶಿಬಿರದಲ್ಲಿ ಅವರು ಮಾತನಾಡಿದರು.

ಇಂದು ಕಾನೂನುಗಳು ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿವೆ. ವಿವಿಧ ವ್ಯಾಜ್ಯಗಳನ್ನು ಪರಿಹರಿಸಿಕೊಳ್ಳಲು ಕಾನೂನು ನೆರವು ಕೇಂದ್ರದ ಸಹಾಯವನ್ನು ಪಡೆದುಕೊಳ್ಳಲು ಮುಂದಾಗಬೇಕಾಗಿದೆ.

ಜೀವನಕ್ಕೆ ಸಂಬಂಧಿಸಿದ ಕಾನೂನುಗಳನ್ನು ಪಾಲಿಸಬೇಕು. ಉಚಿತ ಕಾನೂನು ಆಶಯಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಮುಟ್ಟಬೇಕು ಎಂದು ಅವರು ತಿಳಿಸಿದರು.

ಹಿರಿಯ ಸಿವಿಲ್ ನ್ಯಾಯಾಧೀಶೆ ಪುಷ್ಪಲತಾ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಯಲಿವಾಳ ಗ್ರಾಮದ ಮನೆ ಮನೆಗಳಿಗೆ ಭೇಟಿ ನೀಡಿ ಜನರಿಗೆ ಕಾನೂನು ಸೇವೆಗಳ ಬಗ್ಗೆ ಅರಿವು ಮೂಡಿಸಿದರು.

ಇದೇ ಸಂದರ್ಭದಲ್ಲಿ ಸ್ಥಳದಲ್ಲಿಯೇ ಕೆಲವರ ಸಮಸ್ಯೆಗಳಿಗೆ ತಹಶೀಲ್ದಾರ ಅಶೋಕ ಶಿಗ್ಗಾಂವಿ ಸ್ಪಂದಿಸಿದರು.

ಸಂಜೀವಿನಿ ಒಕ್ಕೂಟದ 9 ಸ್ವಸಹಾಯ ಸಂಘಗಳಿಗೆ ಸಮುದಾಯ ಬಂಡವಾಳ ನಿಧಿಯನ್ನು ವಿತರಿಸಲಾಯಿತು. ಸಂಜೀವಿನಿ ಒಕ್ಕೂಟದ ನರ್ಸರಿ ಸಸಿಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆ, ವಿವಿಧ ಇಲಾಖೆಯ ಯೋಜನೆಗಳ ಪ್ರದರ್ಶನ ಮಳಿಗೆಗಳು ಗಮನ ಸೆಳೆದವು.

ಕುಂದಗೋಳ ತಾಪಂ ಇಒ ಪರಮೇಶ್ವರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Share this article!

Leave a Reply

Your email address will not be published. Required fields are marked *

error: Content is protected !!