ಮದುವೆ, ಕೌಟುಂಬಿಕ ಕಾರ್ಯಕ್ರಮ 100 ಕ್ಕಿಂತ ಅಧಿಕ ಜನ ಸೇರಿದರೆ ಕಠಿಣ ಕ್ರಮ

ರಾಜ್ಯ ಸರ್ಕಾರವು ಕೋವಿಡ್ ಸಾಂಕ್ರಾಮಿಕ ಸೋಂಕು ತಡೆಯಲು ಜಾರಿಮಾಡಿದ್ದ ಕಠಿಣ ನಿರ್ಭಂಧ ಸಡಿಲಿಕೆ ಹಿನ್ನೆಲೆಯಲ್ಲಿ ಮದುವೆ,ಕೌಟುಂಬಿಕ ಕಾರ್ಯಕ್ರಮಗಳಲ್ಲಿ 100 ಜನರು ಮಾತ್ರ ಸೇರಲು ಅವಕಾಶ ಕಲ್ಪಿಸಲಾಗಿದೆ.

100 ಕ್ಕಿಂತ ಅಧಿಕ ಸಂಖ್ಯೆಯಲ್ಲಿ ಜನ ಸೇರಿದರೆ  ಮದುವೆಗಳ ಆಯೋಜಕರು, ಸ್ಥಳ ಬಾಡಿಗೆ ನೀಡಿದ ಕಲ್ಯಾಣ ಮಂಟಪ,ಹೋಟೆಲ್ ಹಾಗೂ ಅಡುಗೆ ತಯಾರಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡು ಎಫ್.ಐ.ಆರ್.ದಾಖಲಿಸಿ, ಆರು ತಿಂಗಳ ಕಾಲ ಅಂತಹ  ಸ್ಥಳಗಳಿಗೆ ಬೀಗ ಹಾಕಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಕೆ ಪಾಟೀಲ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ಜಿಲ್ಲೆಯ ಕಲ್ಯಾಣ ಮಂಟಪಗಳು, ಛತ್ರಗಳು, ಹೋಟೆಲ್ ಮಾಲೀಕರು ಹಾಗೂ ಅಡುಗೆ ತಯಾರಕರು ಮತ್ತು ಪೂರೈಕೆದಾರರ ಸಂಘಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇದೀಗ ಕೋವಿಡ್ ಸೋಂಕಿನ ಪ್ರಮಾಣ ಕಡಿಮೆಯಾಗಿರುವುದರಿಂದ ನೂರು ಜನರವರೆಗೆ ಮದುವೆ, ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಈ ಮಿತಿಯಲ್ಲಿಯೇ ಜನರು ಸೇರುವ ನಿಯಮವನ್ನು ಕಡ್ಡಾಯವಾಗಿ ಪಾಲಿಸಿದರೆ ಸಂಭಾವ್ಯ ಮೂರನೇ ಅಲೆ ತಡೆಯಬಹುದು.

ಈ ಹಿಂದೆ ಮದುವೆಗಳ ಮೂಲಕವೇ ಸೋಂಕು ವ್ಯಾಪಕವಾಗಿ ಹರಡಿ ಜೀವಹಾನಿಯಾದ ಹಲವಾರು ಉದಾಹರಣೆಗಳಿವೆ. ಮದುವೆಗಳ ಆಯೋಜಕರು ಕಲ್ಯಾಣ ಮಂಟಪ, ಹೋಟೆಲ್, ಛತ್ರ, ಅಡುಗೆಯವರನ್ನು ಸಂಪರ್ಕಿಸಿದ ಸಂದರ್ಭದಲ್ಲಿಯೇ ವಧು-ವರರ ಸಂಬಂಧಿಗಳಿಗೆ ಈ ಕುರಿತು ಎಚ್ಚರಿಕೆ ನೀಡಿ ಕಡ್ಡಾಯವಾಗಿ ನೂರಕ್ಕಿಂತ ಹೆಚ್ಚು ಜನ ಸೇರದಂತೆ ಮಾಹಿತಿ ನೀಡಬೇಕು. ಅಡುಗೆಯವರು (ಕ್ಯಾಟರರ್ಸ್) ನೂರಕ್ಕಿಂತ ಹೆಚ್ಚು ಜನರ ಆರ್ಡರುಗಳನ್ನು ಪಡೆಯಬಾರದು.

ಮದುವೆಯ ಹಿಂದಿನ ದಿನದ ಸಿದ್ಧತೆಗಳ ಸಮಯದಲ್ಲಿಯೇ ಕಲ್ಯಾಣ ಮಂಟಪಗಳ ಮಾಲೀಕರು ಆ ಕುರಿತು ಗಮನಿಸಿ, ಎಷ್ಟು ಜನರಿಗೆ ಆಹಾರ ಸಿದ್ಧಪಡಿಸುತ್ತಿದ್ದಾರೆ ಎಂಬುದನ್ನು ತಿಳಿಯಬೇಕು. ನೂರಕ್ಕಿಂತ ಅಧಿಕ ಜನರಿಗೆ ಆಹಾರ ಏರ್ಪಾಡುಗಳನ್ನು ಮಾಡುತ್ತಿದ್ದರೆ ಕೂಡಲೇ ಜಿಲ್ಲಾಡಳಿತ, ಕಂದಾಯ, ಪೊಲೀಸ್, ಅಥವಾ ಮಹಾನಗರಪಾಲಿಕೆಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಕಲ್ಯಾಣ ಮಂಟಪ, ಛತ್ರ, ಹೋಟೆಲ್ ಮಾಲೀಕರು ಮುಂಚಿತವಾಗಿ ಮಾಹಿತಿ ನೀಡಿದರೆ ಅಂತಹವರ ವಿರುದ್ಧ ಪ್ರಕರಣ ದಾಖಲಿಸುವುದಿಲ್ಲ. ಮದುವೆ ಆಯೋಜಕರನ್ನು ಹೊಣೆಗಾರರನ್ನಾಗಿಸಲಾಗುತ್ತದೆ.

ಜಿಲ್ಲಾಡಳಿತದ ಅಧಿಕಾರಿ, ಸಿಬ್ಬಂದಿ ನೇರವಾಗಿ ಭೇಟಿ ನೀಡಿ ಪರಿಶೀಲಿಸುವ  ವೇಳೆಯಲ್ಲಿ ನೂರಕ್ಕಿಂತ ಅಧಿಕ ಜನರು ಸೇರಿದ್ದು ಕಂಡು ಬಂದರೆ ಮಾಹಿತಿ ನೀಡದಂತಹ ಕಲ್ಯಾಣ ಮಂಟಪ, ಹೋಟೆಲ್, ಛತ್ರಗಳು, ಕ್ಯಾಟರಿಂಗ್ ಸೇವೆ ನೀಡುವವರನ್ನೂ ಒಳಗೊಂಡು ಮದುವೆಯ ಆಯೋಜಕರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಅಂತಹ ನಿರ್ಲಕ್ಷ್ಯಕ್ಕೆ ಕಲ್ಯಾಣ ಮಂಟಪ, ಹೋಟೆಲುಗಳು ಅವಕಾಶ ನೀಡಬಾರದು.

ವ್ಯಾಪಾರ, ವಹಿವಾಟು ಮಾಡಲು ಯಾವುದೇ ಅಡಚಣೆಗಳಿಲ್ಲ, ಆದರೆ ಜವಾಬ್ದಾರಿ ಕಡೆಗಣಿಸಬಾರದು.  ಉಳಿದಂತೆ ಯಾವುದೇ ಸಾಮಾಜಿಕ, ರಾಜಕೀಯ, ಕ್ರೀಡಾ, ಮನರಂಜನೆ, ಅಕಾಡೆಮಿಕ್, ಸಾಂಸ್ಕೃತಿಕ, ಕಾರ್ಪೋರೇಟ್ ಕಾರ್ಯಕ್ರಮಗಳಿಗೆ ಅವಕಾಶವಿಲ್ಲ ಎಂದರು. ಮದುವೆ, ಕೌಟುಂಬಿಕ ಕಾರ್ಯಕ್ರಮಗಳಿಗೆ ಅವಕಾಶ ಕಲ್ಪಿಸಿದಾಗ ಹೊಟೆಲ್, ಕಲ್ಯಾಣಮಂಟಪಗಳು ಕೋವಿಡ್ ಸುರಕ್ಷತಾ ಕ್ರಮಗಳ ಪಾಲನೆಗೆ ಪ್ರಾಶಸ್ತ್ಯ ನೀಡುವುದು ಕಡ್ಡಾಯವಾಗಿದೆ.

ಮಾಸ್ಕ್ ಧರಿಸುವಿಕೆ, ಸ್ಯಾನಿಟೈಜರ್, ಥರ್ಮಲ್ ಸ್ಕ್ಯಾನಿಂಗ್ ಬಳಕೆ ಕ್ರಮವಾಗಿ ನಿರ್ವಹಿಸಬೇಕು. ಹೋಟೇಲುಗಳ ಸಿಬ್ಬಂದಿ ಲಸಿಕೆ ಹಾಕಿಸಿಕೊಂಡಿರುವುದನ್ನು ಮಾಲೀಕರು ಖಚಿತಪಡಿಸಿಕೊಳ್ಳಬೇಕು. ಕ್ಯಾಶಿಯರುಗಳು ವಾರಕ್ಕೊಮ್ಮೆ ಕೋವಿಡ್ ತಪಾಸಣೆ ಮಾಡಿಸಿಕೊಳ್ಳಬೇಕು ಇದರಿಂದ ಸ್ವತಃ ಆ ಸಿಬ್ಬಂದಿ ಮತ್ತು ಎಲ್ಲಾ ಗ್ರಾಹಕರ ಆರೋಗ್ಯ ಕಾಪಾಡಲು ಅನುಕೂಲವಾಗುತ್ತದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚಿಸಿದರು.

ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಆಯುಕ್ತ ಡಾ.ಸುರೇಶ ಇಟ್ನಾಳ ಮಾತನಾಡಿ, ಕಲ್ಯಾಣ ಮಂಟಪ, ಹೋಟೆಲ್ ಸೇರಿದಂತೆ ಮದುವೆ, ಕೌಟುಂಬಿಕ ಕಾರ್ಯಕ್ರಮಗಳು ನಡೆಯುವ ಸ್ಥಳಗಳಲ್ಲಿ ಕೋವಿಡ್ ಸುರಕ್ಷತಾ ಕ್ರಮಗಳ ಪಾಲನೆ ಬಗ್ಗೆ ಎಚ್ಚರವಹಿಸಬೇಕು. ಮಾಸ್ಕ್, ಸ್ಯಾನಿಟೈಸರ್, ಥರ್ಮಲ್ ಸ್ಕ್ಯಾನಿಂಗ್ ಬಳಸಬೇಕು. ಸಾಮಾನ್ಯಕ್ಕಿಂತ ಅಧಿಕ ಶಾರೀರಿಕ ತಾಪಮಾನ ಹೊಂದಿದ ವ್ಯಕ್ತಿಗಳ ಕುರಿತು ಕೂಡಲೇ ಜಿಲ್ಲಾಡಳಿತ ಮಹಾನಗರಪಾಲಿಕೆಗೆ ಮಾಹಿತಿ ನೀಡಬೇಕು ಎಂದರು.

ಮದುವೆ ಸಮಾರಂಭಗಳಿಗೆ ಆನ್‍ಲೈನ್ ನಲ್ಲಿಯೇ ಅರ್ಜಿ ಸಲ್ಲಿಸಿ:

ಮದುವೆ, ಕೌಟುಂಬಿಕ ಕಾರ್ಯಕ್ರಮಗಳ ಆಯೋಜಕರು supportdharwad.in ಮೂಲಕ ಆನ್‍ಲೈನಿನಲ್ಲಿಯೇ ಅರ್ಜಿ ಸಲ್ಲಿಸಬೇಕು. ಯಾವುದೇ ಕಾರಣಕ್ಕೂ ಜಿಲ್ಲಾಧಿಕಾರಿಗಳ ಕಚೇರಿ, ತಹಸೀಲ್ದಾರ ಕಚೇರಿ, ಮಹಾನಗರಪಾಲಿಕೆ ವಲಯ ಕಾರ್ಯಾಲಯಗಳಿಗೆ ಅಲೆದಾಡಬಾರದು. ಅರ್ಜಿ ಸಲ್ಲಿಸಿದ ಮೂರು ದಿನಗಳೊಳಗೆ ಪರಿಶೀಲಿಸಿ ಅನುಮತಿ ನೀಡಲಾಗುವುದು.

ಒಂದು ತಿಂಗಳೊಳಗಿನ ಮದುವೆ ಕೌಟುಂಬಿಕ ಕಾರ್ಯಗಳಿಗೆ ಅನುಮತಿ ನೀಡಲಾಗುವುದು. ಎರಡು-ಮೂರು ತಿಂಗಳ ನಂತರದ ಮದುವೆಗಳಿಗೆ ಈಗಲೇ ಅನುಮತಿ ನೀಡಲಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು.

ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಧಾರವಾಡ ತಹಸೀಲ್ದಾರ ಡಾ.ಸಂತೋಷಕುಮಾರ ಬಿರಾದಾರ, ಹುಬ್ಬಳ್ಳಿ ಶಹರ ತಹಸೀಲ್ದಾರ ಶಶಿಧರ ಮಾಡ್ಯಾಳ, ಕಲ್ಯಾಣ ಮಂಟಪಗಳ ಮಾಲಿಕರ ಸಂಘದ ಪದಾಧಿಕಾರಿಗಳಾದ ಬಾಬುರಾವ್, ಕುಮಾರಗೌಡ ಪಾಟೀಲ, ಬಾಳು ಮಗಜಿಕೊಂಡಿ, ಪ್ರವೀಣ ಹೆಬಸೂರ, ಧಾರವಾಡ ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ಮಹೇಶ ಶೆಟ್ಟಿ, ಹುಬ್ಬಳ್ಳಿ ಹೋಟೆಲ್ ಮಾಲೀಕರ ಸಂಘದ ಸುಧಾಕರ ಶೆಟ್ಟಿ, ಕ್ಯಾಟರಿಂಗ್ ಪೂರೈಕೆದಾರರ ಸಂಘದ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Share this article!

Leave a Reply

Your email address will not be published. Required fields are marked *

error: Content is protected !!