ಹಿರಿಯ ರಾಜಕಾರಣಿ, ಎಂಟು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿರುವ ಬಸವರಾಜ ಹೊರಟ್ಟಿ ಅವರು ಇಂದು ವಿಧಾನ ಪರಿಷತ್ ನೂತನ ಸಭಾಪತಿಯಾಗಿ ಆಯ್ಕೆಯಾಗಿರುವುದರಿಂದ ಅವರನ್ನು ಮಾಜಿ ಮುಖ್ಯಮಂತ್ರಿ, ಶಾಸಕ ಜಗದೀಶ್ ಶೆಟ್ಟರ್ ಅಭಿನಂದಿಸಿದ್ದಾರೆ.
ಬಸವರಾಜ ಹೊರಟ್ಟಿಯವರು ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಪರ ಕೆಲಸ ಕಾರ್ಯಗಳನ್ನು ಕೈಗೊಂಡಿದ್ದಾರೆ. ಅವರು ಶಿಕ್ಷಣ ಹಾಗೂ ಶಿಕ್ಷಕರಿಗಾಗಿ ಹಗಲಿರುಳು ಶ್ರಮವಹಿಸಿದ್ದಾರೆ.
ಅವರು ಶಿಕ್ಷಣ ಸಚಿವರಾಗಿದ್ದಾಗ ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳನ್ನು ತಂದಿದ್ದಾರೆ.
ಶಿಕ್ಷಕರ ಸವಲತ್ತುಗಳು ಹಾಗೂ ಶಾಲಾ ಕಾಲೇಜುಗಳ ನಿರ್ಮಾಣ ಸೇರಿದಂತೆ ಹಲವಾರು ಕಾರ್ಯಗಳನ್ನು ಜಾರಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಶಿಕ್ಷಕರ ಅಚ್ಚುಮೆಚ್ಚಿನ ನಾಯಕರಾಗಿ ಗುರುತಿಸಿಕೊಂಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಶಾಸಕರಾದ ಜಗದೀಶ್ ಶೆಟ್ಟರ್ ಅವರು ಹೇಳಿದರು.
ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದಿಂದ ಯಾವುದೇ ಅಭ್ಯರ್ಥಿಗಳು ಸಭಾಪತಿ ಸ್ಥಾನಕ್ಕೆ ಸ್ಪರ್ಧಿಸದಿದ್ದರಿಂದ, ಬಸವರಾಜ ಹೊರಟ್ಟಿ ಅವರು ಮಾತ್ರ ನಾಮಪತ್ರವನ್ನು ಸಲ್ಲಿಸಿದ್ದರು.
ಹೀಗಾಗಿ ಅವರು ಅವಿರೋಧವಾಗಿ ಸಭಾಪತಿಯಾಗಿ ಆಯ್ಕೆಯಾದರು. ಇದು ಸದನದ ಹಿರಿಯ ಸದಸ್ಯರಿಗೆ ಸಂದ ಗೌರವವಾಗಿದೆ ಎಂದು ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.