ಧಾರವಾಡ ಜಿಲ್ಲೆಯಲ್ಲಿ ಸಾರ್ವಜನಿಕ ಗಣೇಶೋತ್ಸವ ರದ್ದು

ಬರುವ ಸೆಪ್ಟೆಂಬರ್ ನಲ್ಲಿ ಆಚರಿಸಲ್ಪಡುವ ಗಣೇಶ ಚತುರ್ಥಿ ಸಂದರ್ಭದಲ್ಲಿ ಕೋವಿಡ್-19 ನಿಯಂತ್ರಣದ ಮುಂಜಾಗೃತೆಗಾಗಿ ಕಳೆದ ವರ್ಷದಂತೆ ಈ ವರ್ಷವೂ ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.

 ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು (ಆ.9) ಗಣೇಶ ಚತುರ್ಥಿ ಹಬ್ಬದ ಆಚರಣೆಯ ಮುಂಜಾಗೃತ ಕ್ರಮಗಳ ಜಿಲ್ಲಾ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸುರಕ್ಷತಾ ಕ್ರಮಗಳೊಂದಿಗೆ ದೇವಸ್ಥಾನ ಹಾಗೂ ಮನೆಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಬಹುದು. ಸಿ.ಎಸ್.ಐ.ಆರ್ (CSIR)  ಮತ್ತು ನೀರಿ (NEERI)  ಪ್ರಮಾಣೀಕೃತ ಹಸಿರು ಪಟಾಕಿ ಮಾತ್ರ ಉಪಯೋಗಿಸಬೇಕು.

ಈಗಾಗಲೇ ಕೇರಳ, ಮಹಾರಾಷ್ಟ್ರ ರಾಜ್ಯಗಳಲ್ಲಿ ಪ್ರತಿದಿನ ಕೋವಿಡ್ ಸೋಂಕಿತರ ಪ್ರಮಾಣ ಹೆಚ್ಚಳವಾಗುತ್ತಿದೆ. ರಾಜ್ಯದ ಕೆಲವು ಜಿಲ್ಲೆಗಳಲ್ಲಿಯೂ ಆಗಸ್ಟ್ ಅಂತ್ಯಕ್ಕೆ ಏರಿಕೆಯಾಗುವ ಸಂಭವವಿದೆ. ಸೆಪ್ಟಂಬರ್ ವೇಳೆಗೆ ಸಂಭಾವ್ಯ 3ನೇ ಅಲೆ ಅತ್ಯಧಿಕವಾಗುವ ಸಾಧ್ಯತೆಗಳಿವೆ. 

ಮೊದಲ ಮತ್ತು ಎರಡನೇ ಅಲೆಯ ಪರಿಣಾಮಗಳನ್ನು ಅರಿತಿರುವ ನಾವು ಇದೀಗ ಹೆಚ್ಚು ಎಚ್ಚರವಹಿಸಬೇಕು. ಈ ಹಿನ್ನೆಲೆಯಲ್ಲಿ ಕಳೆದ ವರ್ಷದಂತೆ ಈ ಬಾರಿಯೂ ಕೂಡ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅವಕಾಶವಿಲ್ಲ. 

ದೇವಸ್ಥಾನ ಹಾಗೂ ಮನೆಗಳಲ್ಲಿ ಮಾತ್ರ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಪ್ರತಿಷ್ಠಾಪಿಸಬಹುದು. ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿ.ಓ.ಪಿ) ನಿಂದ ತಯಾರಿಸಿದ ಗಣೇಶ ಪ್ರತಿಷ್ಠಾಪನೆಗೆ ಅವಕಾಶವಿಲ್ಲ. ಗಣೇಶ ವಿಗ್ರಹ ತಯಾರಕರು ಇದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. 

ಹೊರ ರಾಜ್ಯಗಳಿಂದ ಇಂತಹ ಮೂರ್ತಿಗಳು ಬರುವ ಮಾಹಿತಿ ಇದ್ದರೆ ಜಿಲ್ಲಾಡಳಿತ, ಪೊಲೀಸ್ ಅಥವಾ ಹುಬ್ಬಳ್ಳಿಧಾರವಾಡ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ತಿಳಿಸಿದರೆ ಅಂತಹ ವಿಗ್ರಹಗಳನ್ನು ವಶಪಡಿಸಿಕೊಳ್ಳಲಾಗುವುದು. 

ಜಲಮೂಲಗಳಾದ ನದಿ, ಕೆರೆ, ಕಾಲುವೆ ಹಾಗೂ ಬಾವಿಗಳಲ್ಲಿ ಬಣ್ಣ ಲೇಪಿತ ವಿಗ್ರಹಗಳ ವಿಸರ್ಜನೆ ನಿಷೇಧಿಸಲಾಗಿದೆ. ಗಣೇಶ ವಿಗ್ರಹಗಳ ವಿಸರ್ಜನೆಗೆ ಮಹಾನಗರ ಪಾಲಿಕೆ ಹಾಗೂ ಇತರ ಸ್ಥಳೀಯ ಸಂಸ್ಥೆಗಳು ಕೃತಕ ಟ್ಯಾಂಕುಗಳ ವ್ಯವಸ್ಥೆ ಮಾಡಲಿವೆ. 

ಸರ್ಕಾರ ಕಾಲ ಕಾಲಕ್ಕೆ ಹೊರಡಿಸುವ ಮಾರ್ಗಸೂಚಿಗಳನ್ನು ಜಿಲ್ಲೆಯಲ್ಲಿ ಜಾರಿ ಮಾಡಲಾಗುವುದು ಎಂದರು. ಅಧಿಕೃತ ಲಾಂಛನ ಹಾಗೂ ಕ್ಯೂ.ಆರ್.ಕೋಡ್ ಇಲ್ಲದ ಪಟಾಕಿಗಳನ್ನು ಮಾರಾಟಗಾರರು ದಾಸ್ತಾನು ಮಾಡಿಕೊಳ್ಳಬಾರದು.

ಪ್ರಮಾಣೀಕೃತ ಹಸಿರು ಪಟಾಕಿಗಳನ್ನು ಮಾತ್ರ ಅವಕಾಶ: ಪರಿಸರ ಮತ್ತು ಶಬ್ಬ ಮಾಲಿನ್ಯವನ್ನು ತಡೆಗಟ್ಟಲು ಸಿ.ಎಸ್.ಐ.ಆರ್ (CSIR)ಮತ್ತು ನೀರಿ (NEERI)ಪ್ರಮಾಣೀಕೃತ ಹಸಿರು ಪಟಾಕಿ ಮಾತ್ರ ಉಪಯೋಗಿಸ ಬೇಕು. ಪಟಾಕಿ ಮಾರಾಟಗಾರರು ಈ ಬಗ್ಗೆ ಎಚ್ಚರವಹಿಸಬೇಕು. 

ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ 2020ರ ನವ್ಹೆಂಬರ್ 9 ರಂದು ನೀಡಿರುವ ಆದೇಶವನ್ನು ಕಡ್ಡಾಯವಾಗಿ ಜಾರಿಮಾಡಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಸಭೆಯಲ್ಲಿ ವಿವರಿಸಿದರು. 

 ಹುಬ್ಬಳ್ಳಿ ಧಾರವಾಡ ನಗರ ಉಪ ಪೊಲೀಸ್ ಆಯುಕ್ತ ಕೆ.ರಾಮರಾಜನ್ ಮಾತನಾಡಿ, ಕೋವಿಡ್ ನಿಯಂತ್ರಣ ಉದ್ದೇಶದಿಂದ ಸರ್ಕಾರ ಹಾಗೂ ಜಿಲ್ಲಾಡಳಿತ ಹೊರಡಿಸುವ ಆದೇಶಗಳನ್ನು ಜಿಲ್ಲೆಯ ಜನತೆ ಪಾಲಿಸಿ ಸಹಕರಿಸಬೇಕು. ಆರೋಗ್ಯ ರಕ್ಷಣೆ, ಸಾಮಾಜಿಕ ಸುರಕ್ಷತೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು. 

ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರ ಪ್ರಕಾಶ ನಾಶಿ ಮಾತನಾಡಿ, ಛಬ್ಬಿ ಗ್ರಾಮದ ಕೆಲವು ಕುಟುಂಬಗಳ ಮನೆಗಳಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳ ದರ್ಶನಕ್ಕೆ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಜನರು ಬರುತ್ತಾರೆ. 

ಹೊರ ರಾಜ್ಯಗಳಿಂದ ಆಗಮಿಸುವ ಪ್ರಯಾಣಿಕರು ಕಡ್ಡಾಯವಾಗಿ ಕೋವಿಡ್ ನೆಗೆಟಿವ್ ವರದಿ ಹೊಂದಿರುವುದನ್ನು ತಪಾಸಣೆ ಮಾಡಲು ಚೆಕ್ ಪೋಸ್ಟ್ ಸ್ಥಾಪಿಸಲಾಗುವುದು ಎಂದು ತಿಳಿಸಿದರು. 

Share this article!

Leave a Reply

Your email address will not be published. Required fields are marked *

error: Content is protected !!