ರೈತನ ಬಾಳಿಗೆ ಆಸರೆಯಾದ ಏಲಕ್ಕಿ ಬಾಳೆ: ಒಂದು ಹೆಕ್ಟೇರಿಗೆ 25 ಟನ್ ಇಳುವರಿ

ಸಾಂಪ್ರದಾಯಿಕ ಕಬ್ಬು ಬೆಳೆಯನ್ನು ಬೆಳೆದು ಹೆಚ್ಚು ಆದಾಯ ಪಡೆಯಲು ಸಾಧ್ಯವಾಗದೇ ಕುಟುಂಬ ನಿರ್ವಹಣೆಗಾಗಿ ಕೃಷಿಯ ಜೊತೆಗೆ ಮತ್ತೊಂದು ಬೇರೆ ಉದ್ಯೋಗ  ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಿಸುತ್ತಿದ್ದ ಜಿಲ್ಲೆಯ ಕಲಘಟಗಿ ತಾಲೂಕಿನ ನೆಲ್ಲಿಹರವಿ ಗ್ರಾಮದ ಬಸವಣ್ಣಯ್ಯ ಮಹಾಂತಯ್ಯ ಅಣ್ಣಿಗೇರಿ ಅವರು ಮಹಾತ್ಮಾಗಾಂಧಿ ನರೇಗಾ ಹಾಗೂ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಸೌಲಭ್ಯ ಪಡೆದಿದ್ದಾರೆ.

ಒಂದು ಹೆಕ್ಟೇರ್ ಭೂಮಿಯಲ್ಲಿ ಏಲಕ್ಕಿ ಬಾಳೆ ಬೆಳೆದು ಸುಮಾರು 25 ಟನ್ ಇಳುವರಿ ಪಡೆದಿದ್ದಾರೆ. ಕೋವಿಡ್ ಸಾಂಕ್ರಾಮಿಕ ತಡೆಗೆ ಜಾರಿಗೊಳಿಸಿದ್ದ ಲಾಕ್‍ಡೌನ್ ಸಂದರ್ಭದಲ್ಲಿಯೂ ಸುಮಾರು 4,50,000 ರೂ.ಗಳ ಆದಾಯ ನಿರೀಕ್ಷಿಸುತ್ತಿದ್ದಾರೆ.  

ಇವರು ಪ್ರತಿವರ್ಷ ಸಾಂಪ್ರದಾಯಿಕವಾಗಿ ಕಬ್ಬು ಬೆಳೆದು ಸಾಮನ್ಯವಾಗಿ ಒಂದು ಹೆಕ್ಟೇರ್‍ಗೆ 75,000/- ರೂ.ಗಳ ಆದಾಯ ಪಡೆಯುತ್ತಿದ್ದರು. ಈ ಉತ್ಪನ್ನದಲ್ಲಿ ಕುಟುಂಬ ನಿರ್ವಹಣೆ ಕಷ್ಟವೆನಿಸಿದಾಗ ಕೃಷಿಯ ಜೊತೆಗೆ ಮತ್ತೊಂದು ಉದ್ಯೋಗ ಹುಡುಕಲು ಪ್ರಾರಂಭಿಸಿದರು.

ಕೋವಿಡ್ ಲಾಕ್‍ಡೌನ್ ಕಾರಣದಿಂದ ಬದುಕು ಇನ್ನಷ್ಟು ಕಠಿಣವಾಯಿತು. ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಸಕಾಲದಲ್ಲಿ ನೀಡಿದ ಮಾರ್ಗದರ್ಶನ ಹಾಗೂ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಸಾಮಗ್ರ ಮತ್ತು ಕೂಲಿ ವೆಚ್ಚ ಹಾಗೂ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಹನಿ ನೀರಾವರಿ ಸೌಲಭ್ಯ ಕಲ್ಪಿಸಲು ನೆರವಾದರು. ಇದರಿಂದ ಬಸವಣ್ಣಯ್ಯ ತಮ್ಮ ಒಂದು ಹೆಕ್ಟೇರ್ ಭೂಮಿಯನ್ನು ಏಲಕ್ಕಿ ಬಾಳೆಯ ತೋಟವಾಗಿ ಅಭಿವೃದ್ಧಿಪಡಿಸಿದರು.

ಲಾಕ್‍ಡೌನ್ ಸಂದರ್ಭದಲ್ಲಿ ಬೆಳೆಯು ಕಟಾವಿಗೆ ಬಂದಾಗ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಮಹಾಂತೇಶ ಪಟ್ಟಣಶೆಟ್ಟಿ ಹಾಗೂ ಸಹಾಯಕ ತೋಟಗಾರಿಕಾ ಅಧಿಕಾರಿ ಕೆ.ವಿ. ಅಂಗಡಿ ಅವರು ರಾಜ್ಯ ಮತ್ತು ಅಂತರರಾಜ್ಯದ ಹಣ್ಣು ಮಾರಾಟಗಾರರೊಂದಿಗೆ ಸಂಪರ್ಕ ಕಲ್ಪಿಸಿ ಮಾರುಕಟ್ಟೆ ಒದಗಿಸಿದರು. ಸುಮಾರು 13 ಟನ್ ಫಸಲನ್ನು ಗೋವಾ ರಾಜ್ಯಕ್ಕೆ ಮಾರಾಟ ಮಾಡಿ 2,60,000/- ರೂ. ಆದಾಯ ಈಗಾಗಲೇ ಪಡೆದಿದ್ದೇನೆ. ಇನ್ನೂ 10 ರಿಂದ 12 ಟನ್ ಇಳುವರಿಯಿಂದ ಸುಮಾರು 2 ಲಕ್ಷ ರೂ. ಆದಾಯ ನಿರೀಕ್ಷೆಯಲ್ಲಿದ್ದೇನೆ ಎಂದು ನೆಲ್ಲಿಹರವಿ ಗ್ರಾಮದ ಬಸವಣ್ಣಯ್ಯ ಮಹಾಂತಯ್ಯ ಅಣ್ಣಿಗೇರಿ ಅವರು ಹೇಳುತ್ತಾರೆ.

ಜಿಲ್ಲೆಯ ರೈತರು ತೋಟಗಾರಿಕೆ ಇಲಾಖೆ ಮೂಲಕ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಪಡೆಯಲು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಮಹಾಂತೇಶ ಪಟ್ಟಣಶೆಟ್ಟಿ-9482289006, ಸಹಾಯಕ ತೋಟಗಾರಿಕಾ ಅಧಿಕಾರಿಗಳಾದ ಕೆ.ವಿ. ಅಂಗಡಿ-9481207517, ಕುಬೇರ ರೆಡ್ಡಿ ನೀಲಣ್ಣವರ-9448514990, ಮಹೇಶ.ಕೆ.-8867452263 ಮೊಬೈಲ್ ಸಂಖ್ಯೆ ಸಂಪರ್ಕಿಸಬಹುದು.

ಏಲಕ್ಕಿ ಬಾಳೆ ಬೆಳೆದು ಯಶಸ್ಸು ಕಂಡಿರುವ ಬಸವಣ್ಣಯ್ಯ ಅಣ್ಣಿಗೇರಿ ಅವರ ಮೊಬೈಲ್ ಸಂಖ್ಯೆ-8495039347

Share this article!

Leave a Reply

Your email address will not be published. Required fields are marked *

error: Content is protected !!