ಧಾರವಾಡ ತಾಲ್ಲೂಕಿನ ಮನಸೂರು ಗ್ರಾಮದ ರೈತರಾದ ಶಂಕ್ರಪ್ಪ ಸಿದ್ದಪ್ಪ ಅಂಗಡಿ ಅವರು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (MGNREGA) ಯೋಜನೆಯ ನೆರವು ಪಡೆದು ತಮ್ಮ ಒಂದು ಎಕರೆ ಜಮೀನಿನಲ್ಲಿ ಗುಲಾಬಿ ಬೆಳೆದು ಸುಮಾರು 5 ಲಕ್ಷ ರೂ. ಗಳಿಗೂ ಅಧಿಕ ಆದಾಯ ಪಡೆದಿದ್ದಾರೆ.
ಮನಸೂರು ಗ್ರಾಮದ ಶಂಕ್ರಪ್ಪ ಸಿದ್ದಪ್ಪ ಅಂಗಡಿ ಅವರು ತೋಟಗಾರಿಕೆ ಇಲಾಖೆ ಮೂಲಕ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (MGNREGA) ಯೋಜನೆಯಡಿ 2020-21 ನೇ ಸಾಲಿನಲ್ಲಿ ಹೊಸ ತೋಟ ನಿರ್ಮಿಸಿಕೊಳ್ಳಲು 1,55,886 ರೂ.ಕೂಲಿ ವೆಚ್ಚ ಹಾಗೂ ಸಾಮಗ್ರಿ ಮೊತ್ತವಾಗಿ 43,000ರೂ. ಹನಿ ನೀರಾವರಿಯನ್ನು ಅಳವಡಿಸಿಕೊಳ್ಳಲ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ 45,349ರೂ. ಅನುದಾನವನ್ನು ಪಡೆದಿರುತ್ತಾರೆ.
ಇಲ್ಲಿಯವರೆಗೂ ಪ್ರತಿ ದಿನಕ್ಕೆ 2000 ರಿಂದ 2500 ಗುಲಾಬಿ ಹೂಗಳನ್ನು ಕಟಾವು ಮಾಡಿದ್ದಾರೆ, ಸುಮಾರು 6 ಲಕ್ಷ ರೂ.ಮೌಲ್ಯದ ಉತ್ಪನ್ನ ಬಂದಿರುತ್ತದೆ. ಮೊದಲನೇ ವರ್ಷದ ಖರ್ಚು ತೆಗೆದು ಸುಮಾರು ರೂ. 5 ಲಕ್ಷ ನಿವ್ವಳ ಆದಾಯ ಪಡೆದಿದ್ದಾರೆ.
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (MGNREGA) ಯೋಜನೆಯಡಿ ಗುಲಾಬಿ ಪ್ರದೇಶ ವಿಸ್ತರಣೆಗೆ ಸಹಾಯಧನ ಹಾಗೂ ಕಾಲಕಾಲಕ್ಕೆ ಬೆಳೆಗೆ ತಾಂತ್ರಿಕ ಸಲಹೆಗಳನ್ನು ನೀಡಲಾಗಿದೆ .
ಮನಸೂರ ಮತ್ತು ಮನಗುಂಡಿ ಗ್ರಾಮಗಳಲ್ಲಿ ಸುಮಾರು 25 ರಿಂದ 30 ಜನ ರೈತ ಫಲಾನುಭವಿಗಳು ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಗುಲಾಬಿ ಪ್ರದೇಶ ವಿಸ್ತರಣೆಗೆ ಸಹಾಯಧನವನ್ನು ಪಡೆದುಕೊಂಡಿರುತ್ತಾರೆ ಎಂದು ಹೋಬಳಿ ಮಟ್ಟದ ಅಧಿಕಾರಿ ಯಲ್ಲಮ್ಮ ಐರಣಿ ಹಾಗೂ ತಾಂತ್ರಿಕ ಸಹಾಯಕರಾದ ತೇಜಶ್ರೀ ಒಂಟಗೋಡಿ ಅವರು ತಿಳಿಸಿರುತ್ತಾರೆ .
ಮನಗುಂಡಿ ಮತ್ತು ಮನಸೂರು ಗ್ರಾಮಗಳಲ್ಲಿ ಗುಚ್ಛ ಮಾದರಿಯಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಒಟ್ಟು 40 ಎಕರೆ ಪ್ರದೇಶದಲ್ಲಿ ಗುಲಾಬಿ ಪ್ರದೇಶ ಅನುಷ್ಠಾನಗೊಳಿಸಲಾಗಿದೆ. ಸುಮಾರು 40 ಲಕ್ಷ ರೂ. ಸಹಾಯಧನ ನೀಡಲಾಗಿದೆ. ಈ ರೈತರು ಪ್ರತಿ ವರ್ಷ ಉತ್ತಮ ಆದಾಯ ಪಡೆಯುತ್ತಿದ್ದಾರೆ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಶಿವಯೋಗಿ ರವರು ತಿಳಿಸಿದ್ದಾರೆ.
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (MGNREGA) ಯೋಜನೆಯ ಸವಲತ್ತುಗಳನ್ನು ಎಲ್ಲಾ ರೈತರು ಪಡೆಯಬೇಕೆಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮನವಿ ಮಾಡಿರುತ್ತಾರೆ. ರೈತ ಶಂಕ್ರಪ್ಪ ಅಂಗಡಿ ಅವರ ಮೊಬೈಲ್: 7975711650