ಧಾರವಾಡ ಜಿಲ್ಲೆಯಲ್ಲಿ ಕೋವಿಡ್ ಮೂರನೇ ಅಲೆಯ ಸಮರ್ಪಕ ನಿರ್ವಹಣೆ, ಅತಿವೃಷ್ಟಿಯಿಂದ ಆಗಿರುವ ಹಾನಿಗೆ ಪರಿಹಾರ ಒದಗಿಸುವ ಕೆಲಸಕ್ಕೆ ಪ್ರಥಮ ಆದ್ಯತೆ ನೀಡಿ ಕರ್ತವ್ಯ ನಿರ್ವಹಿಸಲಾಗುವುದು ಎಂದು ಜವಳಿ ಮತ್ತು ಸಕ್ಕರೆ ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.
ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರ ಅಗತ್ಯ ನೆರವು ನೀಡಲಿದೆ. ಕೋವಿಡ್ ಮೊದಲ ಮತ್ತು ಎರಡನೇ ಅಲೆಯನ್ನು ಸಮರ್ಥವಾಗಿ ನಿರ್ವಹಿಸಿರುವ ಅನುಭವ ಆಧರಿಸಿ ಸಂಭಾವ್ಯ ಮೂರನೇ ಅಲೆಯನ್ನು ತಡೆಯಲು ಜಿಲ್ಲಾಡಳಿತ ವ್ಯಾಪಕ ಕ್ರಮಕೈಗೊಳ್ಳಬೇಕು ಎಂದು ಅವರು ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಜಿಲ್ಲೆಯ ಕೋವಿಡ್ 19 ನಿರ್ವಹಣೆ ಹಾಗೂ ನೆರೆಹಾವಳಿ ಪರಿಹಾರದ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ಎಲ್ಲಾ ಅಧಿಕಾರಿಗಳು,ವಿಶೇಷವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ವೈದ್ಯಕೀಯ ಶಿಕ್ಷಣ ಇಲಾಖೆಯ ಕಿಮ್ಸ್ ವೈದ್ಯರು, ಅರೆವೈದ್ಯಕೀಯ ಸಿಬ್ಬಂದಿ ಅತ್ಯಂತ ಸಮರ್ಥವಾಗಿ ಕೋವಿಡ್ ಮೊದಲ ಹಾಗೂ ಎರಡನೇ ಅಲೆಗಳನ್ನು ನಿರ್ವಹಿಸಿದ್ದೀರಿ. ಇದರ ಅನುಭವ ಆಧರಿಸಿ, ಸಂಭಾವ್ಯ ಮೂರನೇ ಅಲೆಯ ನಿರ್ವಹಣೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು.
ಸುರಕ್ಷತಾ ಕ್ರಮಗಳ ಕುರಿತು ವ್ಯಾಪಕ ಜಾಗೃತಿ ಮೂಡಿಸಬೇಕು.ಸೋಂಕು ಹರಡುವಿಕೆ,ಮರಣ ದರ ಇಳಿಮುಖವಾಗಲು ತ್ವರಿತ ತಪಾಸಣೆ ಮತ್ತು ಚಿಕಿತ್ಸೆ ಮುಖ್ಯವಾಗಿರುವುದರಿಂದ ಈ ನಿಟ್ಟಿನಲ್ಲಿ ವೈದ್ಯಕೀಯ ಸೇವೆಗಳು ಸದಾ ಕಾಲ ಸಿದ್ಧತೆಯಲ್ಲಿರಬೇಕು.
ಜಿಲ್ಲೆಯಲ್ಲಿ ಸ್ಥಾಪಿಸಲಾಗಿರುವ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಅಗಸ್ಟ್ 13 ಅಥವಾ 14 ರಂದು ಉದ್ಘಾಟಿಸಲಾಗುವುದು.ಅತಿವೃಷ್ಟಿಯಿಂದ ಹಾನಿಯಾಗಿರುವ ಪರಿಹಾರ ಕಾರ್ಯಗಳನ್ನು ತ್ವರಿತವಾಗಿ ಕೈಗೊಳ್ಳಲು ಹಣಕಾಸು ಬಳಕೆಗೆ 4ಜಿ ವಿನಾಯಿತಿ ಪಡೆಯಲು ಸರ್ಕಾರದಲ್ಲಿ ಚರ್ಚಿಸಲಾಗುವುದು.
ಮನೆಗಳ ಹಾನಿಯನ್ನು ಸಮೀಕ್ಷೆ ಮಾಡುವಾಗ ನೈಜ ಸಂತ್ರಸ್ತರಿಗೆ ಅನ್ಯಾಯವಾಗದಂತೆ ಅಧಿಕಾರಿಗಳು ಎಚ್ಚರಿಕೆವಹಿಸಬೇಕು. ಎರೆಭೂಮಿ ಪ್ರದೇಶದಲ್ಲಿ ಮಣ್ಣಿನಿಂದ ನಿರ್ಮಾಣವಾಗಿರುವ ಹಳೆಯ ಮನೆಗಳು ಸ್ಥಿತಿ ಗಮನಿಸಬೇಕು ಎಂದು ಸೂಚಿಸಿದರು.
ಶಾಸಕ ಅಮೃತ ದೇಸಾಯಿ ಮಾತನಾಡಿ, ಕೋವಿಡ್ ಸಂಭಾವ್ಯ ಮೂರನೇ ಅಲೆಯ ತೀವ್ರತೆ ಕಡಿಮೆ ಮಾಡಲು ಎಲ್ಲರಿಗೂ ತ್ವರಿತವಾಗಿ ಲಸಿಕೆ ಒದಗಿಸುವುದು ಮುಖ್ಯವಾಗಿದೆ.ಈ ಮಧ್ಯೆ ಮಹಾನಗರಪಾಲಿಕೆ ಚುನಾವಣೆಗಳು ಘೋಷಣೆಯಾದರೆ ಅದರ ಸಿದ್ಧತೆಗಳನ್ನು ಕೈಗೊಳ್ಳಲು ವಹಿಸಬೇಕಾದ ಎಚ್ಚರಿಕೆ ಕ್ರಮಗಳ ಕುರಿತು ಜಾಗೃತಿವಹಿಸಬೇಕು ಎಂದರು.
ಶಾಸಕ ಸಿ.ಎಂ.ನಿಂಬಣ್ಣವರ ಮಾತನಾಡಿ,ಕೋವಿಡ್ ಹಾಗೂ ಅತಿವೃಷ್ಟಿಯಲ್ಲಿ ಮರಣ ಹೊಂದಿದ ವ್ಯಕ್ತಿಗಳ ವಾರಸುದಾರರಿಗೆ ಮರಣ ಪ್ರಮಾಣ ಪತ್ರ ವಿತರಿಸಲು ಅಗತ್ಯವಿರುವ ದಾಖಲಾತಿಗಳ ಕ್ರೋಢೀಕರಣಕ್ಕೆ ಸಂಬಂಧಿಸಿದ ಇಲಾಖೆಗಳು ಸಹಕರಿಸಬೇಕು.
ಅತಿವೃಷ್ಟಿಯಿಂದ ಜೀವ ಕಳೆದುಕೊಂಡ ವ್ಯಕ್ತಿಗಳ ಕುಟುಂಬದ ವಾರಸುದಾರರಿಗೆ ಪರಿಹಾರ ವಿತರಣೆ ಈ ಕಾರಣಕ್ಕಾಗಿ ವಿಳಂಬವಾಗಬಾರದು.ಮನೆ ಕಳೆದುಕೊಂಡ ಸಂತ್ರಸ್ತರಿಗೆ ಪರಿಹಾರ ವಿತರಣೆಯಲ್ಲಿ ತಾರತಮ್ಯ,ಅನ್ಯಾಯಗಳಾಗದಂತೆ ಎಚ್ಚರಿಕೆ ವಹಿಸಬೇಕು .ಜಿಲ್ಲೆಯಲ್ಲಿ ಕಬ್ಬು ಹೊರತುಪಡಿಸಿ ಬಹುತೇಕ ಉಳಿದೆಲ್ಲ ಬೆಳೆಗಳು ಹಾನಿಗೀಡಾಗಿವೆ ಅವುಗಳ ಹಾನಿಯ ಸರಿಯಾದ ಸಮೀಕ್ಷೆಯಾಗಬೇಕು ಎಂದರು.
ಶಾಸಕಿ ಕುಸುಮಾವತಿ ಶಿವಳ್ಳಿ ಮಾತನಾಡಿ, ಕುಂದಗೋಳ ತಾಲೂಕಿನ ಶಿರೂರ ಗ್ರಾಮದ ಬಳಿ ರೇಲ್ವೆ ಮೇಲ್ಸೇತುವೆ ಕಾಮಗಾರಿಯ ದುರಸ್ತಿ ಕಾರ್ಯ ಅತ್ಯಂತ ತ್ವರಿತವಾಗಬೇಕು. ಗ್ರಾಮೀಣ ರಸ್ತೆಗಳ ಸುಧಾರಣೆಯಾಗಬೇಕು. ರೊಟ್ಟಿಗವಾಡ-ಪಶುಪತಿಹಾಳ ಮಾರ್ಗ ಸೇರಿದಂತೆ ಅನೇಕ ರಸ್ತೆಗಳ ದುರಸ್ತಿಯಾಗಬೇಕು ಎಂದರು.
ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮಾತನಾಡಿ, ಜಿಲ್ಲೆಯು 2019 ರಿಂದ ಮೂರು ವರ್ಷ ಸತತವಾಗಿ ಪ್ರವಾಹ ಪರಿಸ್ಥಿತಿಗಳನ್ನು ಎದುರಿಸಿದೆ. ಮಳೆಯ ಪ್ರಮಾಣವು ವಾಡಿಕೆಗಿಂತ ಶೇ.18 ರಷ್ಟು ಹೆಚ್ಚಾಗಿರುತ್ತದೆ.
ಜಿಲ್ಲೆಯಲ್ಲಿ ಬೆಣ್ಣಿ ಹಳ್ಳ, ತುಪ್ಪರಿಹಳ್ಳ, ಡೌಗಿನಾಲಾ ಮತ್ತು ಬೇಡ್ತಿ ನಾಲಾ ಮತ್ತು ಇತರೆ ಹಳ್ಳಗಳು ಮತ್ತು ಕೆರೆಗಳು ತುಂಬಿ ಹರಿದಿರುವ ಪ್ರಯುಕ್ತ ದಂಡೆಯಲ್ಲಿರುವ ಮತ್ತು ತಗ್ಗು ಪ್ರದೇಶಗಳಲ್ಲಿ ಪ್ರವಾಹ ಉಂಟಾದ ಸಂದರ್ಭದಲ್ಲಿ ಸಹಾಯವಾಣಿ ಕೇಂದ್ರಗಳನ್ನು ತೆರೆದು ಸ್ಪಂದಿಸಲಾಗಿದೆ.
ಜುಲೈ 22ನೇ ತಾರೀಖಿನಿಂದ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗಿದ್ದು ಪ್ರವಾಹ ಪರಿಸ್ಥಿತಿಯಿಂದ 6 ತಾಲೂಕುಗಳ 25 ಗ್ರಾಮಗಳು ಪ್ರಭಾವಿತವಾಗಿವೆ. ಅಳ್ನಾವರ ತಾಲೂಕಿನ ಹೂಲಿಕೆರೆ ಗ್ರಾಮದ ಇಂದ್ರಮ್ಮನ ಕೆರೆಯು ಅಪಾಯದ ಮಟ್ಟ ತಲುಪಿದ್ದರಿಂದ ಅಳ್ನಾವರ ಪಟ್ಟಣದ 800 ಜನರನ್ನು ಮುಂಜಾಗರೂಕತೆಗಾಗಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ಅಳ್ನಾವರ ಪಟ್ಟಣದಲ್ಲಿ 2 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿತ್ತು. ಈ ಪರಿಹಾರ ಕೇಂದ್ರಗಳಲ್ಲಿ 518 ಜನರು ಆಶ್ರಯ ಪಡೆದಿರುತ್ತಾರೆ. 2 ಮಾನವ ಜೀವ ಹಾನಿ, 23 ಜಾನುವಾರು ಜೀವಗಳಿಗೆ ಹಾನಿ ಉಂಟಾಗಿದೆ, ಎನ್.ಡಿ.ಆರ್.ಎಫ್. ಮಾರ್ಗಸೂಚಿಗಳನ್ವಯ ಪರಿಹಾರ ವಿತರಿಸಲಾಗುವುದು.
ಮಳೆಯಿಂದಾಗಿ 61 ಕುಟುಂಬಗಳ ಬಟ್ಟೆ ಬರೆ, ಪಾತ್ರೆ ಹಾಗೂ ಆಹಾರ ಧಾನ್ಯಗಳು ಹಾನಿಯಾಗಿದ್ದು ಎನ್.ಡಿ.ಆರ್.ಎಫ್. ಮಾರ್ಗಸೂಚಿಗಳನ್ವಯ ಪರಿಹಾರ ವಿತರಿಸಲಾಗುವುದು.
ಅತಿವೃಷ್ಠಿಯಿಂದ 39 ಮನೆಗಳು ಪೂರ್ಣ ಪ್ರಮಾಣದಲ್ಲಿ ಹಾನಿಯಾಗಿರುತ್ತವೆ. 93 ಮನೆಗಳು ಶೇಕಡಾ 25% ರಿಂದ 75% ರವರೆಗೆ ಹಾನಿಯಾಗಿರುತ್ತದೆ. 1622 ಮನೆಗಳು ಅಲ್ಪ ಪ್ರಮಾಣದಲ್ಲಿ ಹಾನಿಯಾಗಿದ್ದು, ಒಟ್ಟು 1754 ಮನೆಗಳು ಹಾನಿಗೀಡಾಗಿತ್ತವೆ.
ಸರ್ಕಾರದ ಮಾರ್ಗ ಸೂಚಿಗಳನ್ವಯ ಹಾನಿಗಿಡಾದವರಿಗೆ ಪರಿವಹಾರದ ಹಣವನ್ನು ನೇರವಾಗಿ ಜಮಾ ಮಾಡಲಾಗುವುದು. ರಸ್ತೆ,ಸೇತುವೆ ಮೂಲಭೂತ ಸೌಕರ್ಯಗಳ ಹಾನಿ ಸೇರಿ ಒಟ್ಟಾರೆ ಜಿಲ್ಲೆಯಲ್ಲಿ ಅತಿವೃಷ್ಠಿಯಿಂದ ರೂ.310.64 ಕೋಟಿ ಹಾನಿಯಾಗಿದೆ.
ಎನ್.ಡಿ.ಆರ್.ಎಫ್ ಮಾರ್ಗ ಸೂಚಿಗಳನ್ವಯ ರೂ.46.00 ಕೋಟಿ ಮೊತ್ತದ ಪರಿಹಾರಕ್ಕಾಗಿ ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಸಭೆಗೆ ವಿವರಣೆ ನೀಡಿದರು.
ಜಂಟಿ ಕೃಷಿ ನಿರ್ದೇಶಕ ರಾಜಶೇಖರ ಐ.ಬಿ.ಮಾತನಾಡಿ, ಅತಿವೃಷ್ಠಿಯಿಂದ 23238.98 ಹೆಕ್ಟೇರ್ ಕೃಷಿ ಪ್ರದೇಶದ 14185.89 ಲಕ್ಷ ರೂ.ಮೌಲ್ಯದ ಬೆಳೆ ಹಾನಿಗೀಡಾಗಿದೆ ಎಂದು ಪ್ರಾಥಮಿಕ ಸಮೀಕ್ಷೆಯಿಂದ ಅಂದಾಜಿಸಲಾಗಿದೆ ಎಂದರು.
ಧಾರವಾಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಶವಂತ ಮದೀನಕರ್ ಮಾತನಾಡಿ,ಜಿಲ್ಲೆಯಲ್ಲಿ ಒಟ್ಟು 1032875 ಕೋವಿಡ್ ಪರೀಕ್ಷೆ ನಡೆಸಲಾಗಿದೆ, 60540 ಕರೋನಾ ಪಾಸಿಟಿವ್ ಪ್ರಕರಣಗಳು ಕಂಡು ಬಂದಿರುತ್ತವೆ.1277 ಮರಣಗಳಾಗಿವೆ.
59102 ಜನ ಗುಣಮುಖರಾಗಿರುತ್ತಾರೆ.ಒಂದನೇ ಅಲೆಯಲ್ಲಿ ಒಟ್ಟು 22339 ಪ್ರಕರಣಗಳು ಕಂಡು ಬಂದಿದ್ದು 615 ಜನ ಮೃತಪಟ್ಟಿದ್ದಾರೆ.ಎರಡನೇ ಅಲೆಯಲ್ಲಿ 38201 ಪ್ರಕರಣಗಳು ಕಂಡು ಬಂದಿದ್ದು 662 ಜನ ಮರಣಹೊಂದಿದ್ದಾರೆ .
ಕೋವಿಡ್ ಅತ್ಯಧಿಕವಾಗಿದ್ದಾಗ ಪಾಸಿಟಿವಿಟ್ ದರ ಶೇ.24.2 ರಷ್ಟಿತ್ತು ಈಗ ಕಳೆದ ಒಂದು ವಾರದಲ್ಲಿ ಶೇ. 0.37 ಪಾಸಿಟಿವಿಟಿ ದರ ಇದೆ.ಜಿಲ್ಲೆಯಲ್ಲಿ ಇಲ್ಲಿಯವರೆಗೆ 754470 ಲಸಿಕಾ ಡೋಸ್‍ಗಳನ್ನು 831599 ಜನರಿಗೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಹುಬ್ಬಳ್ಳಿ ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರಠಾಣಿ ಮಾತನಾಡಿ, ಸಂಭಾವ್ಯ ಕೋವಿಡ್ ಮೂರನೇ ಅಲೆ ನಿರ್ವಹಣೆಗಾಗಿ ವಯಸ್ಕರು ಮತ್ತು ಮಕ್ಕಳಿಗೆ ಹಾಸಿಗೆಗಳನ್ನು ಸಿದ್ಧಪಡಿಸಿಕೊಳ್ಳಲಾಗಿದೆ. ತಾಯಿ ಮತ್ತು ಮಕ್ಕಳ ಚಿಕಿತ್ಸಾ ವಿಭಾಗದ ಹೊಸ ಕಟ್ಟಡ ಮುಕ್ತಾಯದ ಹಂತದಲ್ಲಿದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಸುಶೀಲಾ,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಕಾಂತ್, ಹುಬ್ಬಳ್ಳಿ-ಧಾರವಾಡ ಮಹಾನಗರಪಾಲಿಕೆ ಆಯುಕ್ತ ಡಾ.ಸುರೇಶ್ ಇಟ್ನಾಳ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ,ಉಪವಿಭಾಗಾಧಿಕಾರಿ ಡಾ.ಬಿ.ಗೋಪಾಲಕೃಷ್ಣ ಮತ್ತಿತರ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.