ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ನಿನ್ನೆ ಮಧ್ಯಾಹ್ನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರದ ಸಭೆ ಅಧ್ಯಕ್ಷತೆ ವಹಿಸಿ, ಪೊಲೀಸ್ ದೂರುಗಳ ಪರಿಶೀಲಿಸಿ, ಮಾತನಾಡಿದರು.
ಯಾವುದೇ ವ್ಯಕ್ತಿಗೆ ಅನ್ಯಾಯವಾಗಿದ್ದರೆ ನ್ಯಾಯ ಕೊಡಿಸಲು ಸೂಕ್ತ ಕ್ರಮ ಜರುಗಿಸಲಾಗುತ್ತದೆ.
ಆದರೆ ದೂರು ಕೊಟ್ಟವರಿಗೆ ಆಗಿರುವ ಅನ್ಯಾಯವನ್ನು ಪೂರಕ ದಾಖಲೆಗಳೊಂದಿಗೆ ಸಾಬೀತು ಪಡಿಸುವ ಜವಾಬ್ದಾರಿಯೂ ಇರುತ್ತದೆ ಎಂದು ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.
ಸಕಾಲಕ್ಕೆ ದೂರು ಸ್ವೀಕರಿಸದ ಅಥವಾ ಯಾವುದೇ ಪೊಲೀಸ್ ಅಧಿಕಾರಿ, ಸಿಬ್ಬಂದಿಯಿಂದ ತೊಂದರೆ ಆಗಿದ್ದರೆ ಬಾಧಿತ ವ್ಯಕ್ತಿಗಳು ದೂರು ಸಲ್ಲಿಸಬಹುದು.
ಆದರೆ ದೂರು ಸಂಬಂಧಿತ ದಾಖಲೆ ಸಾಕ್ಷ್ಯಗಳೊಂದಿಗೆ ಅದನ್ನು ಸಾಬೀತುಪಡಿಸುವ ಜವಾಬ್ದಾರಿ ಇರುತ್ತದೆ ಎಂದು ಅವರು ಹೇಳಿದರು.
ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳು ಜನಸ್ನೇಹಿಯಾಗಿ ಕೆಲಸ ಮಾಡುತ್ತಿವೆ. ಯಾವುದೇ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯಿಂದ ತೊಂದರೆ ಉಂಟಾದರೆ ಅಥವಾ ಇಲಾಖೆ ನಿಯಮಗಳ ಪ್ರಕಾರ ಕ್ರಮ ಜರುಗಿಸದಿದ್ದರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಅಥವಾ ಜಿಲ್ಲಾ ಪೊಲೀಸ್ ಪ್ರಾಧಿಕಾರ, ಜಿಲ್ಲಾಧಿಕಾರಿಗಳ ಕಚೇರಿಗೆ ದೂರು ಸಲ್ಲಿಸಬಹುದು. ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಅವರು ಹೇಳಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ಪ್ರಾಧಿಕಾರಕ್ಕೆ ಸಲ್ಲಿಕೆ ಆಗಿರುವ ದೂರುಗಳ ಕುರಿತು ಪ್ರತಿ ದೂರುದಾರರನ್ನು ಪ್ರತ್ಯೇಕವಾಗಿ ಕರೆದು ಪೊಲೀಸ್ ಪ್ರಾಧಿಕಾರದ ಸದಸ್ಯರ ಮುಂದೆ ವಿವರಣೆ ಪಡೆದು ವಿಚಾರಣೆ ನಡೆಸಿದರು.
ದೂರುಗಳಿಗೆ ಸಂಬಂಧಿತ ಸಾಕ್ಷ್ಯ, ದಾಖಲೆಗಳನ್ನು ಪಡೆದರು. ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳವುದಾಗಿ ತಿಳಿಸಿದರು.
ಸಭೆಯಲ್ಲಿ ದೂರು ಪ್ರಾಧಿಕಾರದ ಉಪಾಧ್ಯಕರೂ ಆಗಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್, ಮಹಾನಗರ ಪೊಲೀಸ್ ಆಯುಕ್ತರ ಪ್ರತಿನಿಧಿಯಾಗಿ ಉಪಪೊಲೀಸ್ ಆಯುಕ್ತ ಸಾಹಿಲ್ ಬಾಗ್ಲಾ, ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರದ ಸದಸ್ಯರು ಇದ್ದರು.