ದಾವಣಗೆರೆ ಯ ಜಿ.ಹೆಚ್.ಪಾಟೀಲ್ ನಗರದ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಲ್ಲಿ ಪ್ರಾದೇಶಿಕ ಕೇಂದ್ರದಲ್ಲಿ ನೂತನವಾಗಿ ಸ್ಥಾಪಿಸಿರುವ ಸಾಫ್ಟವೇರ್ ಟೆಕ್ನಾಲಜಿ ಪಾಕ್ರ್ಸ್ ಆಫ್ ಇಂಡಿಯಾ(ಎಸ್.ಟಿ.ಪಿ.ಐ) ಕೇಂದ್ರವನ್ನು ವರ್ಚುಯಲ್ ಆಗಿ ಉದ್ಘಾಟಿಸಲಾಯಿತು.
ಈ ಸೌಲಭ್ಯ ಬಳಸಿಕೊಂಡು ಯುವ ಜನರ ಸ್ಟಾರ್ಟ್ ಆಫ್ ತೆರೆಯಲು ಮಂದಾಗ ಬೇಕು ಎಂದು ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲತೆ ರಾಜ್ಯ ಖಾತೆ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದರು.
ಭಾರತದ ಯುವಜನರು ಸ್ಥಾಪಿಸಿರುವ ಸ್ಟಾರ್ಟ್ ಅಪ್ಗಳು ತಮ್ಮ ಸಂಶೋಧನೆ ಹಾಗೂ ಸಾಮಥ್ರ್ಯಕ್ಕಾಗಿ ಜಾಗತಿಕ ಮನ್ನಣೆಗಳಿಸಿವೆ. ನವಯುವ ಡಿಜಿಟಲ್ ಉದ್ದಿಮೆದಾರ ಕನಸಿಗೆ ಇಂಬು ಕೊಡುವ ನಿಟ್ಟಿನಲ್ಲಿ ದಾವಣಗೆರೆ ನಗರದಲ್ಲಿ ಎಸ್.ಟಿ.ಪಿ.ಐ ಸೆಂಟರ್ ಸ್ಥಾಪಿಸಲಾಗಿದೆ.
ಭಾರತದ ಜಿ-20 ರಾಷ್ಟ್ರಗಳು ಹಾಗೂ ಜಾಗತಿಕ ಕೃತಕ ಬುದ್ಧಿಮತ್ತೆಯ ಜಾಗತಿಕ ಪಾಲುದಾರಿಕೆ ಅಧ್ಯಕ್ಷ ರಾಷ್ಟ್ರವಾಗಿದೆ. ಭಾರತ ಇಂದು ಬೇರೆ ರಾಷ್ಟ್ರಗಳು ಅಭಿವೃದ್ಧಿ ಪಡಿಸಿದ ತಂತ್ರಜ್ಞಾನ ಬಳಕೆಯ ರಾಷ್ಟ್ರವಾಗಿ ಉಳಿದಿಲ್ಲ.
ಯುವ ಜನತೆ ಆವಿಷ್ಕಾರಗಳ ಫಲವಾಗಿ ಬೇರೆ ರಾಷ್ಟ್ರಗಳ ಕಂಪನಿ ಹಾಗೂ ಬಳಕೆದಾರರಿಗೆ ತಂತ್ರಜ್ಞಾನ ಅಭಿವೃದ್ಧಿಪಡಿಸುವ ರಾಷ್ಟ್ರವಾಗಿ ಬದಲಾಗಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಡಿಜಿಟಲ್ ಹಾಗೂ ತಂತ್ರಜ್ಞಾನ ಲಾಭಗಳು ದೇಶದ ಸಣ್ಣ ಪುಟ್ಟ ನಗರದ ಯುವ ಜನರಿಗೆ ಲಭಿಸಬೇಕು ಎಂಬ ಆಶಯ ಹೊಂದಿದ್ದಾರೆ.
ಇದರ ಸಾಕರಕ್ಕಾಗಿ ಬಿಯಾಂಡ್ ಬೆಂಗಳೂರು ಯೋಜನೆಯನ್ನು ರಾಜ್ಯ ಸರ್ಕಾರ ಪ್ರಾರಂಭಿಸಿದೆ. ಇದಕ್ಕೆ ಕೇಂದ್ರ ಸರ್ಕಾರದ ಬೆಂಬಲವಿದೆ.
ಇದೇ ರೀತಿಯಾಗಿ ದೇಶದ ಎಲ್ಲಾ ನಗರಗಳಲ್ಲಿ ಸಂಶೋಧನೆ, ಆವಿಷ್ಕಾರಗಳಿಗೆ ಇಂಬು ಕೊಡುವ ನಿಟ್ಟಿನಲ್ಲಿ ಹೊಸ ಸ್ಟಾರ್ಟ್ ಅಪ್ ಇನ್ಕ್ಯುಬೇಷನ್ ಸೆಂಟರ್ಗಳನ್ನು ತೆರೆಯಲಾಗುವುದು ಎಂದರು.
ಕಳೆದ ನಾಲ್ಕೈದು ವರ್ಷಗಳಲ್ಲಿ ಭಾರತದ ಆರ್ಥಿಕತೆ ವೇಗವಾಗಿ ಬೆಳೆಯುತ್ತಿದೆ. 104 ಯುನಿಕಾರ್ನ್ ಕಂಪನಿಗಳು, 75 ಸಾವಿರ ಸ್ಟಾರ್ಟ್ ಅಪ್ ಗಳು ಉದ್ದಿಮೆಗಳು ಸ್ಥಾಪಿಸಲ್ಪಟ್ಟಿವೆ. ದೇಶದಲ್ಲಿ ಡಿಜಿಟಲ್ ಉದ್ದಿಮೆಗಳು ಇನ್ನೂ ಹೆಚ್ಚಾಗಲಿವೆ.
2014 ರಲ್ಲಿ ಭಾರತ ಶೇ. 92 ರಷ್ಟು ಮೊಬೈಲ್ಗಳನ್ನು ಆಮದು ಮಾಡಿಕೊಳ್ಳುತ್ತಿತ್ತು. ಇಂದು ದೇಶದ ಬಳಸುತ್ತಿರುವ ಶೇ.97 ರಷ್ಟು ಮೊಬೈಲ್ಗಳು ಭಾರತದಲ್ಲಿ ಉತ್ಪಾದನೆಯಾಗಿವೆ. 2014 ರಲ್ಲಿ ಮೊಬೈಲ್ಗಳ ರಫ್ತು ಶೂನ್ಯವಾಗಿತ್ತು. ಇಂದು 72 ಸಾವಿರ ಕೋಟಿ ಮೊತ್ತದ ಮೊಬೈಲ್ ರಪ್ತು ಮಾಡಲಾಗುತ್ತಿದೆ.
ಮೇಡ್ ಇನ್ ಇಂಡಿಯಾ ಮೊಬೈಲ್ಗಳು ಯೂರೋಪ್, ಅಮೇರಿಕಾ, ಆಫ್ರಿಕಾ ಖಂಡಗಳಿಗೆ ರಫ್ತಾಗುತ್ತಿವೆ. ದಾವಣಗೆರೆ ಯುವ ಜನತೆ ಎಸ್.ಟಿ.ಪಿ.ಐ ಸೆಂಟರ್ ಬಳಸಿ ನೂತನ ಸ್ಟಾರ್ಟ್ ಅಪ್ಗಳನ್ನು ತೆರೆಯಬೇಕು ಎಂದರು.
ಲೋಕಸಭಾ ಸದಸ್ಯ ಜಿ.ಎಂ.ಸಿದ್ದೇಶ್ವರ ಮಾತನಾಡಿ ಮಾಹಿತಿ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನದ ಉದ್ದಿಮೆದಾರರನ್ನು ಉತ್ತೇಜಿಸುವ ಸಲುವಾಗಿ ದಾವಣಗೆರೆ ನಗರದಲ್ಲಿ ಸಾಫ್ಟವೇರ್ ಟೆಕ್ನಾಲಜಿ ಪಾರ್ಕ್ ಆಫ್ ಇಂಡಿಯಾ ಈ ಸಂಸ್ಥೆ ತೆರೆಯಲಾಗಿದೆ.
ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ರೀಸರ್ಚ್ ಅಂಡ್ ಡೆವೆಲಪ್ಮೆಂಟ್, ಇನ್ನೋವೇಷನ್ ಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಎಸ್.ಟಿ.ಪಿ.ಐ ಕೆಲಸ ಮಾಡಲಿದೆ ಎಂದರು.