ಹುಬ್ಬಳ್ಳಿಯ ಶ್ರೀ ಸಿದ್ದಾರೂಢ ಮಠ ರಥಬೀದಿಯಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಸಂಸದರಾದ ಪ್ರಹ್ಲಾದ್ ಜೋಷಿ ಅವರು ಚಾಲನೆ ನೀಡಿದರು.
ಶ್ರೀ ಜಗದ್ಗುರು ಸಿದ್ದಾರೂಢ ಮಠ ಕೈಲಾಸ ಮಂಟಪದ ಮುಂಭಾಗದಿಂದ ಮುಖ್ಯ ದ್ವಾರದವರೆಗೆ ಸುಮಾರು 7.4 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ.
ಈ ಸಮಯದಲ್ಲಿ ಸಿದ್ದಾರೂಢ ಸ್ವಾಮಿಗಳಿಗೆ ವಿಶೇಷ ಪೂಜೆ ಸಲ್ಲಿಸಿ ಭೂಮಿಪೂಜೆ ನಡೆಸಿ ಚಾಲನೆ ನೀಡಲಾಯಿತು.
‘ಸಿದ್ದಾರೂಢರ ಜೋಳಿಗೆ – ದೇಶಕ್ಕೆಲ್ಲಾ ಹೋಳಿಗೆ” ಎಂಬಂತೆ ಸಿದ್ದಾರೂಢರ ಪುಣ್ಯ ಕ್ಷೇತ್ರ ಅಭಿವೃದ್ಧಿಯಾದರೆ ಇಡೀ ಜಿಲ್ಲೆ ಅಭಿವೃದ್ಧಿಯಾಗಲಿದೆ.’ ಎಂದು ಪ್ರಹ್ಲಾದ್ ಜೋಷಿ ಅವರು ಹೇಳಿದರು.
ಸಿದ್ಧಾರೂಢರ ಗದ್ದುಗೆಯ ದರ್ಶನಕ್ಕೆ ದೇಶವಿದೇಶಗಳಿಂದ ಅಪಾರ ಭಕ್ತವೃಂಧವೇ ಬರುತ್ತದೆ. ಸರಳ ಜೀವನ ಮತ್ತು ಬೋಧನೆಯಿಂದಾಗಿ ಅಪಾರ ಭಕ್ತ ವೃಂದ ಸಂಪಾದಿಸಿದವರು.
ಸಿದ್ಧಾರೂಢರು ಚಿಕ್ಕಂದಿನಲ್ಲಿಯೇ ಮನೆ ಬಿಟ್ಟು ಲೋಕ ಸಂಚಾರ ಕೈಗೊಂಡವರು. ತಮ್ಮ 41ನೇ ವಯಸ್ಸಿನಲ್ಲಿ ಅಂದರೆ 1877ರಲ್ಲಿ ಹುಬ್ಬಳ್ಳಿಗೆ ಬಂದು ನೆಲೆ ನಿಂತರು.
ಗಂಡುಮೆಟ್ಟಿದ ನಾಡು ಹುಬ್ಬಳ್ಳಿಗೆ ಬಂದವರು ಸಿದ್ಧಾರೂಢರ ಮಠಕ್ಕೆ ಭೇಟಿ ನೀಡುವುದು ಸಂಪ್ರದಾಯ. ಶ್ರೇಷ್ಠ ಅದ್ವೈತ ಸಿದ್ಧಾಂತದ ಪ್ರತಿಪಾದಕರಾದ ಶ್ರೀ ಸಿದ್ಧಾರೂಢರ ಗದ್ದುಗೆಯ ದರ್ಶನ ಪಡೆದರೆ ಜೀವನದಲ್ಲಿ ಸುಖ- ಸಮೃದ್ಧಿ, ಯಶಸ್ಸು ಸಿಗುತ್ತೆ ಎನ್ನುವ ನಂಬಿಕೆ ನಾಗರಿಕರಲ್ಲಿ ಮನೆಮಾಡಿದೆ.