ಮಡಿಕೇರಿ: ಕಾಫಿ ಮಂಡಳಿಯಿಂದ 2022-23 ನೇ ಸಾಲಿನಲ್ಲಿ 2022 ರ ಏಪ್ರಿಲ್ 1 ರಿಂದ ಸೆಪ್ಟಂಬರ್ 30 ರವರೆಗೆ ಚಾಲ್ತಿಯಲ್ಲಿದ್ದ ಸಹಾಯಧನದ ಯೋಜನೆಯನ್ನು 2023 ರ ಮಾರ್ಚ್‍ವರೆಗೆ ವಿಸ್ತರಿಸಲಾಗಿದೆ.
ಆದ್ದರಿಂದ ಸಣ್ಣ ಕಾಫಿ ಬೆಳೆಗಾರರು ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳಿಗೆ (10 ಹೆಕ್ಟೇರ್ ಒಳಗಿನ ಕಾಫಿ ತೋಟ ಹೊಂದಿರುವ ಬೆಳೆಗಾರರು) ಕೈಗೊಳ್ಳುವ ಕಾಫಿ ಮರುನಾಟಿ, ಜಲಸಂವರ್ಧನ ಕಾರ್ಯಕ್ರಮಗಳನ್ನು ಅಳವಡಿಸಿಕೊಳ್ಳಲು ಅವಕಾಶವಿದ್ದು, ಕಾಫಿ ಮಂಡಳಿಯಿಂದ ಸಹಾಯಧನಕ್ಕೆ ಅರ್ಜಿ ಸಲ್ಲಿಸಬಹುದು.
ಸಾಮಾನ್ಯ ಬೆಳೆಗಾರರು ತಮ್ಮ ತೋಟಗಳಲ್ಲಿ ಕಾಫಿ ಮರುನಾಟಿ, ಹೊಸದಾಗಿ ಕೆರೆ/ ತೆರೆದ ಬಾವಿ ನಿರ್ಮಿಸಲು ಹಾಗೂ ತುಂತುರು ನೀರಾವರಿ/ ಹನಿ ನೀರಾವರಿ ಅಳವಡಿಸಿಕೊಳ್ಳಲು ಇಚ್ಛಿಸುವವರು ಅರ್ಜಿ ಸಲ್ಲಿಸಬಹುದು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿರುವ ಸಣ್ಣ ಕಾಫಿ ಬೆಳೆಗಾರರು, ಕಾಫಿ ಮರುನಾಟಿ ಮಾಡಲು, ಹೊಸದಾಗಿ ಕೆರೆ, ಪಲ್ಪರ್, ಕಾಫಿ ಕಣ, ಗೋದಾಮು ನಿರ್ಮಿಸಲು ಪ್ರಯೋಜನವನ್ನು ಪಡೆಯಬಹುದು.
ಅರ್ಜಿ ಸಲ್ಲಿಸಲು 2023 ರ ಫೆಬ್ರವರಿ, 15 ಕೊನೆಯ ದಿನವಾಗಿದೆ.
ಆದ್ದರಿಂದ ಅರ್ಹ ಬೆಳೆಗಾರರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಕೋರಿದೆ.
ಹೆಚ್ಚಿನ ಮಾಹಿತಿಗೆ ಹತ್ತಿರದ ಕಾಫಿ ಮಂಡಳಿಯ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಕಾಫಿ ಮಂಡಳಿಯ ಉಪ ನಿರ್ದೇಶಕರಾದ ಚಂದ್ರಶೇಖರ್ ಅವರು ತಿಳಿಸಿದ್ದಾರೆ.