ರೈತರ ಬೆಳೆ ಸಮೀಕ್ಷೆ ಆ್ಯಪ್ ಬಿಡುಗಡೆ

2021-22 ನೇ ಸಾಲಿನ ಪೂರ್ವ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆಯನ್ನು ರೈತರೇ ಸ್ವತಃ ಖುದ್ದಾಗಿ ತಮ್ಮ ಜಮೀನುಗಳಲ್ಲಿ ಕೈಗೊಳ್ಳಲು “ರೈತರ ಬೆಳೆ ಸಮೀಕ್ಷೆ ಆ್ಯಪ್” ಬಿಡುಗಡೆ ಮಾಡಲಾಗಿದೆ. 

ಜಿಲ್ಲೆಯ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಯ ವಿವರಗಳನ್ನು ತಾವೇ ದಾಖಲಿಸಲು “ಮುಂಗಾರು ರೈತರ ಬೆಳೆ ಸಮೀಕ್ಷೆ ಆ್ಯಪ್ 2021-22 (Kharif Season Farmer Crop Survey 2021-22) ಎಂಬ ಮೊಬೈಲ್ ಆ್ಯಪ್‍ನ್ನು ಆ್ಯಂಡ್ರಾಯ್ಡ್ ಸ್ಮಾರ್ಟ ಮೊಬೈಲ್‍ಗಳಿಗಾಗಿ ಬಿಡುಗಡೆ ಮಾಡಿದೆ. ಈ ಅಪ್ಲಿಕೇಶನನ್ನು ಗೂಗಲ್ ಪ್ಲೇ ಸ್ಟೋರ್‍ನಿಂದ ಪಡೆಯಬಹುದಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರ ರಾಜಶೇಖರ್ ಐ.ಬಿ. ತಿಳಿಸಿದ್ದಾರೆ. 

 ಈ ಕುರಿತು ಪ್ರಕಟಣೆ ನೀಡಿರುವ ಅವರು, ರೈತರು ಬೆಳೆ ಸಮೀಕ್ಷೆ ಆ್ಯಪ್‍ನ್ನು  https://play.google.com/store/apps/details?id=com.csk.Khariffarmer2021.cropsurvey ಕೊಂಡಿಯಿಂದ (Link)  ಇದನ್ನು ಪಡೆಯಬಹುದಾಗಿದೆ.  ಈ ಆ್ಯಪ್‍ನ್ನು ಡೌನಲೋಡ್ ಮಾಡಿಕೊಂಡು ತಮ್ಮ ಜಮೀನುಗಳಲ್ಲಿ ಸಮೀಕ್ಷೆ ಕೈಗೊಂಡು, ಬೆಳೆ ಮಾಹಿತಿಯನ್ನು ಅಪ್‍ಲೋಡ್ ಮಾಡಲು ವಿನಂತಿಸಲಾಗಿದೆ. 

ಜಮೀನಿನಲ್ಲಿ ಬೆಳೆದ ಬೆಳೆಯ ವಿವರಗಳನ್ನು ರೈತರೇ ನಿಖರವಾಗಿ ಆ್ಯಪ್‍ನಲ್ಲಿ ದಾಖಲಿಸಬಹುದಾಗಿದೆ. ಬೆಳೆ ಸಮೀಕ್ಷೆಯ ಮಾಹಿತಿಯನ್ನು ಬೆಳೆ ವಿಮೆ, ಬೆಳೆ ನಷ್ಟ ಪರಿಹಾರ ಇತ್ಯರ್ಥ, ಬೆಂಬಲ ಬೆಲೆ ಮತ್ತು ಸರಕಾರದ ವಿವಿಧ ಯೋಜನೆಗಳಡಿ ಬೆಳೆ ಮಾನದಂಡಗಳಿಗೆ ಅನುಗುಣವಾಗಿ ವಿವಿಧ ಸವಲತ್ತುಗಳನ್ನು ಪಡೆಯಲು ಬೆಳೆ ಸಮೀಕ್ಷೆ ವಿವರಗಳು ಅತೀ ಅವಶ್ಯಕವಾಗಿವೆ. 

ರೈತರು ತಾವು ಬೆಳೆದ ಬೆಳೆಗಳ ವಿವರಗಳನ್ನು ದಾಖಲಿಸದಿದ್ದಲ್ಲಿ ಸರಕಾರದ ವಿವಿಧ ಯೋಜನೆಗಳಡಿ ಒದಗಿಸಲಾಗುವ ಸವಲತ್ತುಗಳಿಂದ, ಪರಿಹಾರಗಳಿಂದ ವಂಚಿತರಾಗುವ ಸಂಭವವಿದೆ. ಸರಕಾರದ ಬೆಳೆ ಮಾನದಂಡಗಳ ಮೇಲೆ ಆಧಾರಿತ ಸೌಲಭ್ಯ ಪಡೆಯುವಲ್ಲಿ, ಬೆಳೆ ವಿಮೆ ಪರಿಹಾರ ಒದಗಿಸುವಲ್ಲಿ, ಬೆಂಬಲ ಬೆಲೆ ಖರೀದಿ ಮುಂತಾದ ಕಾರ್ಯಗಳಿಗೆ ಬೆಳೆ ಸಮೀಕ್ಷೆಯ ವಿವರಗಳನ್ನು ಸರಕಾರವು ಆಧಾರವಾಗಿ ಪರಿಗಣಿಸುವ ಹಿನ್ನೆಲೆಯಲ್ಲಿ ರೈತರು ತಮ್ಮ ಜಮೀನಿನ ಕಾಗದ ಪತ್ರ ಪಹಣಿಗಳನ್ನು ಸಂರಕ್ಷಿಸುವ ಕಾರ್ಯದಷ್ಟೇ ಬೆಳೆ ಸಮೀಕ್ಷೆಗೆ ಪ್ರಾಮುಖ್ಯತೆಯನ್ನು ನೀಡಿ ಕಾಳಜಿ ಪೂರ್ವಕವಾಗಿ ನಿಗದಿತ ಸಮಯದೊಳಗಾಗಿ ಬೆಳೆ ಸಮೀಕ್ಷೆ ಕೈಗೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.

 ರೈತರು ಸಕಾಲದಲ್ಲಿ ಬೆಳೆ ಸಮೀಕ್ಷೆಯನ್ನು ಖುದ್ದಾಗಿ ಕೈಗೊಂಡಲ್ಲಿ ಬೆಳೆ ವಿಮೆ ಪರಿಹಾರ, ಬೆಳೆ ಪರಿಹಾರ, ಬೆಂಬಲ ಬೆಲೆಯಡಿ ಖರೀದಿ ಮುಂತಾದ ಸವಲತ್ತುಗಳನ್ನು ನಿಶ್ಚಿಂತೆಯಿಂದ ಪಡೆಯಬಹುದಾಗಿದೆ. ರೈತರಿಗಾಗಿಯೇ ಈ ಮೊಬೈಲ್ ಆ್ಯಪ್‍ನ್ನು ಅಭವೃದ್ದಿಗೊಳಿಸಿ ಬಿಡುಗಡೆ ಮಾಡಿದ್ದು ಬಳಕೆದಾರರಿಗೆ ಸ್ನೇಹಯುತವಾಗಿದೆ. 

ಕೆಲವೊಂದು ಸಂದರ್ಭಗಳಲ್ಲಿ ಈ ತಂತ್ರಾಂಶವನ್ನು ಬಳಸುವಲ್ಲಿ ತೊಂದರೆಗಳಾದಲ್ಲಿ ಮನೆಯಲ್ಲಿನ ಸುಶಿಕ್ಷಿತ ಕುಟುಂಬದ ಸದಸ್ಯರಿಂದ ಬೆಳೆ ಸಮೀಕ್ಷೆ ಕೈಗೊಳ್ಳಬೇಕು. ರೈತರಿಗೆ ಬೆಳೆ ಸಮೀಕ್ಷೆಯನ್ನು ಕೈಗೊಳ್ಳಲು ಕಷ್ಟಸಾಧ್ಯವಾದ ಸಂದರ್ಭಗಳಲ್ಲಿ ಕೃಷಿ, ತೋಟಗಾರಿಕೆ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಆಯಾ ಗ್ರಾಮದ ವ್ಯಾಪ್ತಿಯಲ್ಲಿ ಲಭ್ಯವಿರುವ ಖಾಸಗಿ ನಿವಾಸಿಗಳ ಸಹಾಯ ಪಡೆದುಕೊಂಡು ತಾವು ಬೆಳೆದ ಬೆಳೆಗಳ ವಿವರಗಳ ಕುರಿತಂತೆ ಒಪ್ಪಿಗೆ ಪತ್ರಗಳನ್ನು ಒದಗಿಸಿ ಅವರ ಸಹಾಯದಿಂದ ಬೆಳೆ ಸಮೀಕ್ಷೆ ಕೈಗೊಳ್ಳಬೇಕೆಂದು ರೈತರಲ್ಲಿ ಕೃಷಿ ಇಲಾಖೆಯ ಜಂಟಿನಿರ್ದೇಶಕ ವಿನಂತಿಸಿದ್ದಾರೆ.

Share this article!

Leave a Reply

Your email address will not be published. Required fields are marked *

error: Content is protected !!