ಧಾರವಾಡ ಜಿಲ್ಲೆಯಲ್ಲಿ ಎಲ್ಲಾ ಕೋವಿಡ್ ನಿರ್ಬಂಧನೆಗಳ ತೆರವು

ಧಾರವಾಡ: ಜಿಲ್ಲೆಯಲ್ಲಿ ಕೋವಿಡ್ ಸೋಂಕು ಬಹುತೇಕ ಇಳಿಮುಖವಾಗಿದ್ದು, ಕೋವಿಡ್ ನಿಯಂತ್ರಣಕ್ಕಾಗಿ ಜಾರಿಗೊಳಿಸಿದ್ದ ಎಲ್ಲಾ ರಂಗಗಳ ಮೇಲಿನ ನಿರ್ಬಂಧನೆಗಳನ್ನು ತೆರವುಗೊಳಿಸಲಾಗಿದೆ.

ಆದರೆ ಸಾರ್ವಜನಿಕರು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಲಸಿಕೆ ಪಡೆಯುವುದು ಸೇರಿದಂತೆ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು ಜನಜೀವನ ಹಾಗೂ ಆರ್ಥಿಕತೆಗೆ ಮತ್ತೆ ಚೇತರಿಕೆ ಒದಗಿಸಲು, ಶಿಕ್ಷಣ, ಸಾಂಸ್ಕ್ರತಿಕ, ಸಭೆ, ಸಮಾರಂಭಗಳು, ಕ್ರೀಡೆ, ಮನರಂಜನಾ ಚಟುವಟಿಕೆಗಳು, ಜಾತ್ರೆ, ಉತ್ಸವಗಳು ಸೇರಿದಂತೆ ವಿವಿಧ ರಂಗಗಳ ಮೇಲೆ ವಿಧಿಸಿದ್ದ ನಿರ್ಬಂಧನೆಗಳನ್ನು ತೆರವುಗೊಳಿಸಲಾಗಿದೆ.

ಧಾರವಾಡ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ. ಮದುವೆ, ಶವ ಸಂಸ್ಕಾರಗಳಲ್ಲಿ ಭಾಗವಹಿಸುವವರ ಸಂಖ್ಯೆಗೆ ಮಿತಿಗೊಳಿಸಲಾಗಿದ್ದ ನಿರ್ಬಂಧನೆಗಳನ್ನು ಕೂಡ ಮುಕ್ತಗೊಳಿಸಲಾಗಿದೆ.

ಸಿನೆಮಾ, ನಾಟಕ, ಥೇಟರುಗಳು, ಶಾಲೆ, ಕಾಲೇಜು, ಗ್ರಂಥಾಲಯ, ತರಬೇತಿ ಕೇಂದ್ರಗಳು, ಕ್ರೀಡಾ ಚಟುವಟಿಕೆಗಳು, ಎಲ್ಲಾ ವಾಣಿಜ್ಯ ವಹಿವಾಟುಗಳಿಗೂ ಕೂಡ ಯಾವುದೇ ನಿರ್ಬಂಧನೆಗಳು ಇರುವುದಿಲ್ಲ.

ಸಭೆ, ಸಮಾರಂಭ, ವಹಿವಾಟುಗಳಿಗೆ ಪೂರ್ವಾನುಮತಿಯ ಅಗತ್ಯ ಇರುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಕೋವಿಡ್ ನಿಯಂತ್ರಣಕ್ಕೆ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಮತ್ತಿತರ ಸುರಕ್ಷತಾ ಕ್ರಮಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು.

15 ರಿಂದ 18 ವರ್ಷದವರೂ ಸೇರಿ ಅರ್ಹ ವಯೋಮಾನದವರೆಲ್ಲರೂ ಮೊದಲ ಮತ್ತು ಎರಡನೇ ಡೋಸ್ ಲಸಿಕೆ ಪಡೆಯಬೇಕು.

ಆರೋಗ್ಯ, ಮುಂಚೂಣಿ ಕಾರ್ಯಕರ್ತರು, ಸಹ ಅಸ್ವಸ್ಥತೆ (ಕೊ-ಮಾರ್ಬಿಡಿಟಿ) ಹೊಂದಿದ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಬೂಸ್ಟರ್ ಡೋಸ್ ಲಸಿಕೆ ಪಡೆಯಬೇಕು ಎಂದು ಜಿಲ್ಲಾಧಿಕಾರಿಗಳು ಕೋರಿದ್ದಾರೆ.

Share this article!

Leave a Reply

Your email address will not be published. Required fields are marked *

error: Content is protected !!