ಜಿಲ್ಲಾಧಿಕಾರಿಗಳು ಧಾರವಾಡ ನಗರದ ಡಿಎಆರ್ ಮೈದಾನದಲ್ಲಿ ಜಿಲ್ಲಾ ಪೋಲಿಸ್ ಇಲಾಖೆ ಆಯೋಜಿಸಿದ್ದ ಪ್ರಸಕ್ತ ಸಾಲಿನ ವಾರ್ಷಿಕ ಕ್ರೀಡಾಕೂಟವನ್ನು ಪಾರಿವಾಳ ಮತ್ತು ಬಲೂನ್ ಹಾರಿಸುವ ಮೂಲಕ ಉದ್ಘಾಟಿಸಿ, ಮಾತನಾಡಿದರು.
ಪ್ರತಿದಿನವನ್ನು ಕ್ರಿಯಾಶೀಲವಾಗಿ ಕಳೆಯಲು ಹಾಗೂ ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಡರಾಗಿಲು ಕ್ರೀಡೆ ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.
ಪೋಲಿಸ್ ವ್ಯವಸ್ಥೆಯಲ್ಲಿ ಪ್ರತಿನಿತ್ಯ ಒಂದಿಲ್ಲೊಂದು ಒತ್ತಡದಲ್ಲಿ ಕೆಲಸ ಮಾಡಬೇಕಾಗುತ್ತದೆ. ಬಂದೊಬಸ್ತ, ಸಂಚಾರ ನಿಯಂತ್ರಣ, ರೌಂಡ್ಸ್ ಹೀಗೆ ಅತ್ಯಂತ ಬಿಜಿ ಶೆಡ್ಯೂಲ್ ಇರುವುದರಿಂದ ಕ್ರೀಡೆ ಸ್ವಲ್ಪಮಟ್ಟಿಗೆ ವಿಶ್ರಾಂತಿ, ಹುಮ್ಮಸ್ಸು, ಚೈತನ್ಯ ನೀಡುತ್ತದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಹತ್ತಾರು ಕಾರ್ಯಗಳನ್ನು ಮಾಡಬೇಕಿರುವುದರಿಂದ ಸಹಜವಾಗಿ ಒತ್ತಡದಲ್ಲಿರುತ್ತೇವೆ. ಯಾವುದಾದರೂ ಒಂದು ಕ್ರೀಡೆಯಲ್ಲಿ ತೊಡಗಿಕೊಳ್ಳಬೇಕು.
ಇದರಿಂದ ಒತ್ತಡ ಕಡಿಮೆ ಆಗುತ್ತದೆ. ಕೆಲಸದಲ್ಲಿ ಉಲ್ಲಾಸವಿರುತ್ತದೆ. ಸೋಲು, ಗೆಲವುಗಳನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸಿ, ಆನಂದಿಸಬೇಕೇಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿಸಿಆರ್ಬಿ ಡಿವೈಎಸ್ಪಿ ಚಂದ್ರಕಾಂತ ಪೂಜಾರಿ ಸ್ವಾಗತಿಸಿದರು. ಡಿಎಆರ್ ಡಿವೈಎಸ್ಪಿ ಜಿ.ಸಿ. ಶಿವಾನಂದ ಅವರು ವಂದಿಸಿದರು.
ಎನ್.ಎ.ಮುತ್ತಣ್ಣ ಸ್ಮಾರಕ ಪೋಲಿಸ್ ಮಕ್ಕಳ ವಸತಿ ಶಾಲೆಯ ಡಾ.ವೈ.ಪಿ. ಕಲ್ಲನಗೌಡರ ಮತ್ತು ಎ.ಸಿ .ಅಲ್ಲಯ್ಯನಮಠ ಅವರು ಕಾರ್ಯಕ್ರಮ ನಿರೂಪಿಸಿದರು.
ಡಿಎಆರ್ ಎಸಿಪಿ ಮಹಮ್ಮದ ಡಿ.ಮಸ್ತಾನ ಅವರು ಕ್ರೀಡಾಜ್ಯೋತಿ ತಂದರು. ಡಿಎಆರ್ ಆರ್.ಪಿ.ಐ ನಾಗರಾಜ ಪಾಟೀಲ ಕ್ರೀಡಾಪಟುಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಪೋಲಿಸ್ ಕ್ರೀಡಾಕೂಟದಲ್ಲಿ ಜಿಲ್ಲಾ ಪೋಲಿಸ್ ಇಲಾಖೆಯ ಎಲ್ಲ ಠಾಣಾ, ಕಚೇರಿ ಸಿಬ್ಬಂದಿಗಳು, ಅಧಿಕಾರಿಗಳು, ಡಿಎಆರ್ ಸೇರಿದಂತೆ ಸಿಐಡಿ ಮತ್ತಿತ್ತರ ವಿಶೇಷ ಘಟಕಗಳು, ಪೋಲಿಸ್ ಸಿಬ್ಬಂದಿ, ಮಹಿಳಾ ಪೋಲಿಸ್ ಸಿಬ್ಬಂದಿ, ಅಧಿಕಾರಿಗಳು ಭಾಗವಹಿಸಿದ್ದರು.